ಗುಜರಾತ್ ಜೈಂಟ್ಸ್ ವಿರುದ್ದ ಗೆದ್ದ ಉತ್ಸಾಹದಲ್ಲಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಪರಾಭವ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎಂ ಎಂ ಚಿದಂಬಂರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಏಪ್ರಿಲ್ 3 ಶುಕ್ರವಾರದಂದು ನಡೆಯಲಿರುವ ಸೀಸನ್ ನ ಏಳನೇ ಪಂದ್ಯದಲ್ಲಿ ಚೆನ್ನೈ ಗೆಲುವಿನ ಖಾತೆ ತೆರೆಯಲಿದೆಯೇ ಅಥವಾ ಬಿಲಿಷ್ಟ ಪಂಜಾಬ್ ತನ್ನ ವಿಜಯಯಾತ್ರೆ ಮುಂದುವರಿಸಲಿದೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕಳೆದ ಸೀಸನ್‌ನಿಂದಲೂ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡಕ್ಕೆ ಈ ಬಾರಿಯ ಆರಂಭವೂ ಆಶಾದಾಯಕವಾಗಿಲ್ಲ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಭಾರಿ ಸೋಲು ಅನುಭವಿಸಿರುವುದು ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ನೀಡಿದೆ. ಧೋನಿ ಅನುಪಸ್ಥಿತಿಯೂ ತಂಡವನ್ನು ಕಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಪಂದ್ಯದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್, ಸ್ಟಾರ ಬ್ಯಾಟರ್ ಸಂಜು ಸ್ಯಾಮ್ಸನ್ ಸೇರಿದಂತೆ ಚೆನ್ನೈನ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಜಾಮಿ ಓವರ್ಟನ್ ಹೋರಾಟಯುತ 43 ರನ್ ಗಳಿಸಿದ್ದರಿಂದ ತಂಡ 127 ರನ್‌ಗಳ ಸಾಧಾರಣ ಮೊತ್ತವನ್ನಾದರೂ ತಲುಪಲು ಸಾಧ್ಯವಾಯಿತು. ಇನ್ನು ಮೊನಚಿಲ್ಲದ ಚೆನ್ನೈ ಬೌಲಿಂಗ್ ಅನ್ನು ವೈಭವ್ ಸೂರ್ಯವಂಶಿ ಮನಸೋ ಇಚ್ಛೆ ದಂಡಿಸಿದ್ದರಿಂದ ರಾಜಸ್ಥಾನ ರಾಯಲ್ಸ್ ಕೇವಲ 12.1 ಓವರ್‌ಗಳಲ್ಲಿ ಗುರಿ ತಲುಪಿತ್ತು. ಮುಂದಿನ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಸ್ಥಿರತೆ ಮತ್ತು ಬೌಲಿಂಗ್ ಶಿಸ್ತು ಕಾಪಾಡಿಕೊಳ್ಳದೇ ಹೋದರೆ ಪಂಜಾಬ್ ಕಿಂಗ್ಸ್ ಸಹ ಚೆನ್ನೈಗೆ ನೀರು ಕುಡಿಸುವುದು ಖಚಿತ.
ಮತ್ತೊಂದೆಡೆ ಕಳೆದ ಸೀಸನ್ ನ ರನ್ನರ್ ಅಪ್ ತಂಡವಾಗಿರುವ ಪಂಜಾಬ್ ಕಿಂಗ್ಸ್ ತಂಡ ಈ ವರ್ಷವೂ ಅದ್ಭುತ ಲಯದಲ್ಲಿದ್ದಂತೆ ಕಾಣುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿರುವ ಪಂಜಾಬ್, ಪೂರ್ಣ ಆತ್ಮವಿಶ್ವಾಸದಲ್ಲಿದೆ. 162 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ಕೂಪರ್ ಕೊನೊಲಿ (72 ರನ್) ಮತ್ತು ಪ್ರಭ್‌ಸಿಮ್ರಾನ್ ಸಿಂಗ್ (37 ರನ್) ಪ್ರಮುಖ ಪಾತ್ರ ವಹಿಸಿದ್ದರು. ಬೌಲಿಂಗ್‌ನಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್ 3 ವಿಕೆಟ್ ಕಿತ್ತು ಮಿಂಚಿದರೆ, ಯುಜ್ವೇಂದ್ರ ಚಾಹಲ್ ಕೂಡ ಉತ್ತಮ ಸಾಥ್ ನೀಡಿದ್ದರು. ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಲೆಗ್ ಸ್ಪಿನ್ನರ್ ಚಹಲ್ ಅವರ ಗೂಗ್ಲಿ ಎಸೆತಗಳು ಮತ್ತು ಕರ್ನಾಟಕದ ವಿಜಯ್ ಕುಮಾರ್ ವೈಶಾಕ್ ಅವರ ವೇಗ ಸಿಎಸ್‌ಕೆಗೆ ಸವಾಲಾಗಬಹುದು.
ಚೆನ್ನೈ ಪಿಚ್ ವರದಿ
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣವು ಯಾವತ್ತೂ ಸ್ಪಿನ್ ಸ್ನೇಹಿ ಪಿಚ್ ಎಂದೇ ಫೇಮಸ್. ಟಿ20 ಪಂದ್ಯಗಳಿಗೂ ಇದರ ಸ್ವರೂಪವನ್ನೇನು ಬದಲಾಯಿಸಲಾಗಿಲ್ಲ. ಇಲ್ಲಿನ ಟ್ರಾಕ್ ನ ನಿಧಾನಗತಿಯ ಮೇಲ್ಮೈಯು ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲು. ಹಾಗೆಂದು ವೇಗದ ಬೌಲರ್ ಗಳೇನು ಆಧಿಪತ್ಯ ಸಾಧಿಸುವುದೂ ಸುಲಭವಲ್ಲ. ಅದೇ ಸ್ಪಿನ್ನರ್ ಗಳು ಮಾತ್ರ ಇಲ್ಲಿ ಚೆನ್ನಾಗಿ ವಿಕೆಟ್ ಗಳನ್ನು ಎತ್ತಬಹುದು. ದೊಡ್ಡ ಸ್ಕೋರ್ ಮಾಡಲು ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಐಪಿಎಲ್‌ನಲ್ಲಿ ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಇಲ್ಲಿ 160 ಎಂಬುದೇ ಪಿಚ್ ಯಾವ ರೀತಿ ಇರುತ್ತದೆ ಎಂಬುದಕ್ಕೆ ಸಾಕ್ಷಿ. ಇನ್ನು ಟಾಸ್ ಗೆದ್ದವರು ಇಲ್ಲಿ ಇಲ್ಲಿ ಮೊದಲು ಫೀಲ್ಡಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಹಾಗೆಂದು ಚೇಸಿಂಗ್ ಕೂಡ ಸ್ಪರ್ಧಾತ್ಮಕವಾಗಿರುವ ಎಲ್ಲಾ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಟಾಸ್ ಗೆಲುವೊಂದೇ ತಂಡದ ಫಲಿತಾಂಶವನ್ನು ನಿರ್ಧರಿಸದು.- ಪಂದ್ಯ ಆರಂಭ: ರಾತ್ರಿ 7.30
- ಸ್ಥಳ: ಎಂ. ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ
- ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಋತುರಾಜ್ ಗಾಯಕ್ವಾಡ್(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್ , ಆಯುಷ್ ಮ್ಹಾತ್ರೆ, ಮ್ಯಾಥ್ಯೂ ಶಾರ್ಟ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜಾಮಿ ಓವರ್ಟನ್, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್, ಮ್ಯಾಟ್ ಹೆನ್ರಿಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕಾನೊಲಿ, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟಯೋನಿಸ್, ಮಾರ್ಯೋ ಯಾನ್ಸನ್, ಅರ್ಶದೀಪ್ ಸಿಂಗ್, ವಿಜಯಕುಮಾರ್ ವೈಶಾಖ್, ಯುಜ್ವೇಂದ್ರ ಚಾಹಲ್.
