ಬೆಂಗಳೂರು: ದಾವಣಗೆರೆ ದಕ್ಷಿಣ ಅಖಾಡ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡಿ ಎಂಬುವುದು ಕಾಂಗ್ರೆಸ್ ಮುಸ್ಲಿಂ ನಾಯಕರ ಆಗ್ರಹವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಸಮರ್ಥ್ ಶಾಮನೂರು ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿತ್ತು.
ಈ ನಡುವೆ ಟಿಕೆಟ್ ನೀಡದ ವಿಚಾರವಾಗಿ ಸಚಿವ ಜಮೀರ್ ಹಾಗೂ ಆಪ್ತರು ಅಸಮಧಾನಗೊಂಡಿದ್ದರು. ಇದರ ಬೆನ್ನಲ್ಲೇ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಮೀರ್ ಕುರಿತಾಗಿ ಆಡಿದ ಮಾತು ಚರ್ಚೆಗೆ ಒಳಗಾಗಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಜಮೀರ್ ಪ್ರಚಾರಕ್ಕೆ ಈವರೆಗೆ ಬಂದಿಲ್ಲ.
ದಾವಣಗೆರೆ ದಕ್ಷಿಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಾತ್ರವಲ್ಲದೆ ಮುಸ್ಲಿಂ ಶಾಸಕರು, ಪರಿಷತ್ ಸದಸ್ಯರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಜಮೀರ್ ಮಾತ್ರ ಚುನಾವಣಾ ಪ್ರಚಾರದ ಅಖಾಡದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಬದಲಾಗಿ ಕೇರಳದಲ್ಲಿ ಕಳೆದ ಹತ್ತು ದಿನಗಳಲ್ಲಿ ಅವರು ಪ್ರಚಾರ ನಡೆಸುತ್ತಿದ್ದಾರೆ. ಕೇರಳದಲ್ಲಿ ಜಮೀರ್ ಹೆಚ್ಚೇನು ಪಾಪ್ಯುಲರ್ ಅಲ್ಲ. ಹಾಗಿದ್ದರೂ ಜಮೀರ್ ಮಾತ್ರ ಕಳೆದ 10 ದಿನಗಳಿಂದ ಕೇರಳದ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಜಮೀರ್ ದಾವಣಗೆರೆ ದಕ್ಷಿಣಕ್ಕೆ ಬರುವಂತೆ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕೂಡಾ ಸಿಎಂ ಸಿದ್ದರಾಮಯ್ಯ ಅವರಲ್ಲಿ ಜಮೀರ್ ಅವರನ್ನು ಪ್ರಚಾರಕ್ಕೆ ಕರೆತರುವಂತೆ ಮೊರೆ ಹೋಗಿದ್ದಾರೆ.
ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಪ್ರಚಾರದ ಸವಾಲು
ದಾವಣಗೆರೆ ದಕ್ಷಿಣದಲ್ಲಿ ಹೋದಲ್ಲಿ, ಬಂದಲ್ಲಿ ಜಮೀರ್ ಕರೆಸಿ ಎಂದು ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡುತ್ತಿದ್ದಾರೆ. ಇತ್ತ ಹಿಂದುಳಿದ ಮತ ಬುಟ್ಟಿಗೆ ಬಿಜೆಪಿ ಕೂಡಾ ಕೈ ಹಾಕುತ್ತಿದೆ. ಹಾಗಾಗಿ ಸಮರ್ಥ್ ಗೆಲುವಿಗೆ ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ಅಹಿಂದ ಮತಗಳು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆ ಬದಿಗಿಟ್ಟು ಸಿಎಂ ಮೂಲಕ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಮೀರ್ ಮನವೊಲಿಕೆ ಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.ಶನಿವಾರ ಕೇರಳದಿಂದ ವಾಪಾಸ್ ಆಗಲಿರುವ ಜಮೀರ್
ಸದ್ಯ ಜಮೀರ್ ಕೇರಳದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಅವರು ಕೇರಳದಿಂದ ವಾಪಸ್ ಆಗಲಿದ್ದಾರೆ. ಆದರೆ ದಾವಣಗೆರೆಗೆ ಆಗಮಿಸಿ ಸಮರ್ಥ್ ಪರವಾಗಿ ಪ್ರಚಾರ ನಡೆಸುತ್ತಾರಾ? ಎಂಬ ಕುತೂಹಲವೂ ಕೆರಳಿಸಿದೆ. ಹೀಗಾಗಿ ಏಪ್ರಿಲ್ ಐದರಂದು ದಾವಣಗೆರೆ ಬರುವ ನಿರೀಕ್ಷೆಯಲ್ಲಿ ಶಾಮನೂರು ಕುಟುಂಬ ಇದೆ.ಪ್ರಚಾರಕ್ಕೆ ಬರ್ತಾರಾ?

