Dailyhunt
ದಾವಣಗೆರೆ ಉಪ ಚುನಾವಣೆ: MP ಪ್ರಭಾ ಮಲ್ಲಿಕಾರ್ಜುನ್ ಹಿಂದಿ ಭಾಷಣ ವೈರಲ್; SSLC ಪರೀಕ್ಷೆಗೆ ಹೋಲಿಕೆ ಮಾಡಿ ಟೀಕೆ

ದಾವಣಗೆರೆ ಉಪ ಚುನಾವಣೆ: MP ಪ್ರಭಾ ಮಲ್ಲಿಕಾರ್ಜುನ್ ಹಿಂದಿ ಭಾಷಣ ವೈರಲ್; SSLC ಪರೀಕ್ಷೆಗೆ ಹೋಲಿಕೆ ಮಾಡಿ ಟೀಕೆ

Vijay Karnataka 1 week ago

ಬೆಂಗಳೂರು: ದಾವಣಗೆರೆ ಉಪ ಚುನಾವಣೆ ಪ್ರಚಾರ ವೇಳೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಸದ್ಯ ಭಾಷಣದ ವಿಡಿಯೋ ತುಣುಕುಗಳು ವೈರಲ್‌ ಆಗಿದ್ದು, ಕನ್ನಡದ ಬದಲು ಹಿಂದಿ ಬಳಸುವ ಅಗತ್ಯವೇನಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಮಾತ್ರವಲ್ಲದೇ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಅಂಕ ತೆಗೆದಿದ್ದಕ್ಕೆ ಹೋಲಿಕೆ ಮಾಡಿ ಟೀಕೆಗಳು ಕೇಳಿಬಂದಿವೆ.

ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಅಭ್ಯರ್ಥಿಯಾಗಿ ಪ್ರಭಾ ಮಲ್ಲಿಕಾರ್ಜುನ್‌ ಪುತ್ರ ಸಮರ್ಥ್‌ಗೆ ಕಾಂಗ್ರೆಸ್ ಟಿಕೆಟ್‌ ನೀಡಿದೆ. ಮಗನನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಸಂಸದೆಯು ಕ್ಷೇತ್ರದ ನಾನಾ ಕಡೆ ಪ್ರಚಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಬಡಾವಣೆಗಳಿಗೆ ತೆರಳಿಸದ ಸಂದರ್ಭದಲ್ಲಿ ಸಂಸದೆ ಹಿಂದಿಯಲ್ಲಿಯೇ ಮಾತನಾಡುತ್ತಿದ್ದಾರೆ. ಅಂತೆಯೇ, ಗುರುವಾರ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಬಡಾವಣೆಯಲ್ಲಿ ಪ್ರಚಾರ ಸಭೆ ನಡೆದಿದ್ದು, ವೇದಿಕೆ ಬಂದು ಹಿಂದಿಯಲ್ಲಿಯೇ ಭಾಷಣ ಮಾಡಿದ್ದರು.


ಸಂಸದೆಯ ಹಿಂದಿ ಭಾಷಣ ಏನು?

ಭಾಯಿ ಬೆಹನ್‌ ಕೋ ಅಸ್-ಸಲಾಮ್-ಅಲೈಕುಮ್ ಎಂದು ಮಾತನನ್ನು ಆರಂಭಿಸಿದ ಸಂಸದೆ 2 ನಿಮಿಷ ಹಿಂದಿಯಲ್ಲಿ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡಿ ಈ ಬಾರಿ ಮತ್ತೆ ಅವಕಾಶ ಬಂದಿದ್ದು, ಅವರ ಮೊಮ್ಮಗ ಸಮರ್ಥ್ ಸ್ಪರ್ಧೆ ಮಾಡಿದ್ದು, ಈ ಹಿಂದೆಯಂತೆಯೇ ಬೆಂಬಲ ಕೊಡಿ ಎಂದು ಮನವಿ ಮಾಡಿದರು.

ಯಾವ ಊರಲ್ಲಿ ಮಾತಾಡ್ತಾ ಇದ್ದೀರಾ ಮೇಡಂ?

ಈ ಬಗ್ಗೆ ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದು, "ಉದ್ಧಾರವಾಯ್ತು! ಯಾವ ಊರಲ್ಲಿ ಮಾತಾಡ್ತ ಇದೀರಾ ಮೇಡಂ ಪ್ರಭಾ ಮಲ್ಲಿಕಾರ್ಜುನ್‌ ಅವರೇ? ನೀವುಗಳು ಹಿಂಗೆ ಮಾತಾಡಿ ಒಂದು ಸಮುದಾಯವನ್ನು ಕನ್ನಡದಿಂದ ದೂರ ಮಾಡ್ತಾ ಇದೀರಿ. ದ್ವಿಭಾಷಾ ನೀತಿ ತಂದಿದೆ ಅಂತ ನಾವು ಖುಷಿ ಆಗಿದ್ರೆ,ಈಗ ಅದೇ ಸರ್ಕಾರದ MP ಹಿಂದಿ ಅಲ್ಲಿ ಮಾತಾಡುತ್ತಾ ಇದ್ದಾರೆ. ಚೇ, ಕರ್ನಾಟಕದಲ್ಲಿ ಕನ್ನಡ ಮಾತಾಡಿ ಮೊದ್ಲು ಜನನಾಯಕರು" ಎಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಹಿಂದಿ ಗ್ರೇಡ್‌ಗೂ ಹೋಲಿಕೆ ಟೀಕೆ

ಈ ಬಾರಿಯಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕದ ಬದಲು ಗ್ರೇಡ್‌ ನೀಡಲು ರಾಜ್ಯ ಕಾಂಗ್ರೆಸ್‌ ಸರ್ಕಾರ ತೀರ್ಮಾನ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ದ್ವಿಭಾಷಾ ಪದ್ಧತಿ ಜಾರಿಗೆ ಮುನ್ನುಡಿ ಬರೆದಿದೆ ಎನ್ನಲಾಗಿದೆ. ಆದರೆ, ಸಂಸದರು ದಾವಣಗೆರೆಯಲ್ಲಿ ಹಿಂದಿಯಲ್ಲಿ ಭಾಷಣ ಮಾತನಾಡಿದ್ದು ಎಷ್ಟು ಸಮಂಜಸ? ಇದು ಕರ್ನಾಟಕ ಅಲ್ಲವೇ? ಎಸ್‌ಎಸ್‌ಎಲ್‌ಸಿ ಮಕ್ಕಳಿಂದ ಹಿಂದಿ ವಿಷಯವನ್ನು ದೂರ ಮಾಡುತ್ತಾ ತಾವು ಬಳಕೆ ಮಾಡುವುದು ಎಷ್ಟು ಸರಿ? ಎಂದೆಲ್ಲಾ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸಂಸದರು ಶಾಲೆಯಲ್ಲಿ ಓದುವಾಗ ಹಿಂದಿಗೆ ಅಂಕ ಇದ್ದಿದ್ದಕ್ಕೆ ಇಷ್ಟು ಸರಾಗಿ ಹಿಂದಿ ಮಾತನಾಡುತ್ತಿದ್ದಾರೆ, ಈಗಿನ ಶಾಲಾ ಮಕ್ಕಳಿಗೆ ಯಾಕೆ ಕಾಂಗ್ರೆಸ್‌ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka