Dailyhunt Logo
  • Light mode
    Follow system
    Dark mode
    • Play Story
    • App Story
ಡಬ್ಬಿಂಗ್ ಯಾಕೆ ಮಾಡಿಲ್ಲ? 'ಕರಾವಳಿ' ಟ್ರೈಲರ್ ಲಾಂಚ್‌ಗೆ ಹೀರೋ ಯಾಕೆ ಬರಲಿಲ್ಲ? ಪ್ರಜ್ವಲ್ ದೇವರಾಜ್ ಬಿಚ್ಚಿಟ್ಟ ಸತ್ಯ ಇದು!

ಡಬ್ಬಿಂಗ್ ಯಾಕೆ ಮಾಡಿಲ್ಲ? 'ಕರಾವಳಿ' ಟ್ರೈಲರ್ ಲಾಂಚ್‌ಗೆ ಹೀರೋ ಯಾಕೆ ಬರಲಿಲ್ಲ? ಪ್ರಜ್ವಲ್ ದೇವರಾಜ್ ಬಿಚ್ಚಿಟ್ಟ ಸತ್ಯ ಇದು!

Vijay Karnataka 1 week ago

ಪ್ರಜ್ವಲ್ ದೇವರಾಜ್ ಹೀರೋ ಆಗಿ ನಟಿಸಿರುವ, ರಾಜ್ ಬಿ ಶೆಟ್ಟಿ ಬಹುಮುಖ್ಯ ಪಾತ್ರ ಪೋಷಿಸಿರುವ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಟ್ರೈಲರ್‌ ಇಂದು ಬಿಡುಗಡೆಯಾಯಿತು. ಆದರೆ, ಟ್ರೈಲರ್ ಲಾಂಚ್‌ ಈವೆಂಟ್‌ಗೆ ನಾಯಕ ಪ್ರಜ್ವಲ್ ದೇವರಾಜ್ ಬಂದಿರಲಿಲ್ಲ.

ಟ್ರೈಲರ್‌ನಲ್ಲಿ ಪ್ರಜ್ವಲ್ ದೇವರಾಜ್ ವಾಯ್ಸ್ ಸಹ ಇಲ್ಲ. ಇದೇ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಸಿನಿಮಾ ತಂಡದವರ ವಿರುದ್ಧ ಆಕ್ರೋಶ ಹೊರಹಾಕಿದರು. ''ಪ್ರಜ್ವಲ್ ದೇವರಾಜ್‌ಗೆ ಈಗಾಗಲೇ ಒಂದು ಕೋಟಿ ಕೊಟ್ಟಿದ್ದೇವೆ. ಇನ್ನೂ 25 ಲಕ್ಷ ರೂಪಾಯಿ ಮಾತ್ರ ಬಾಕಿ ಇದೆ'' ಎಂದು ಗುರುದತ್ ಗಾಣಿಗ ಟ್ರೈಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಹೇಳಿದರು. ಆದರೆ, ಪ್ರಜ್ವಲ್ ದೇವರಾಜ್ ಹೇಳೋದೇ ಬೇರೆ!

ಪ್ರಜ್ವಲ್ ದೇವರಾಜ್ ಏನಂದರು?

''ಡಬ್ಬಿಂಗ್ ಯಾಕೆ ಮಾಡಲಿಲ್ಲ? 'ಕರಾವಳಿ' ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?'' ಎಂಬ ಪ್ರಶ್ನೆಗಳಿಗೆ ಪ್ರಜ್ವಲ್ ದೇವರಾಜ್ ಮಾಧ್ಯಮವೊಂದಕ್ಕೆ ಉತ್ತರಿಸಿದ್ದಾರೆ.

''ಒಂದಷ್ಟು ಸಂಭಾವನೆ... ಒಂದಷ್ಟು ಅಲ್ಲ! ಜಾಸ್ತಿನೇ ಸಂಭಾವನೆ ಬಾಕಿ ಇದೆ. ಜಿಎಸ್‌ಟಿ ಪೇಮೆಂಟ್ ಬಾಕಿ ಇದೆ ಗುರು ಅವರು ಕೊಡೋದು. ಅದು ಕೊಟ್ಟ ಮೇಲೆ ಡಬ್ಬಿಂಗ್ ಮಾಡ್ತೀನಿ ಅಂತ ನಾನು ಹೇಳಿದ್ದೆ. ಕಳೆದ ವರ್ಷ ಇದೇ ರೀತಿ ಆಲ್ಮೋಸ್ಟ್ ಒಂದೂವರೆ ಕೋಟಿ ಸಂಭಾವನೆ ಪ್ರೊಡ್ಯೂಸರ್‌ಗೋಸ್ಕರ ಬಿಟ್ಟಿದ್ದೀನಿ. ಆದರೆ, ಸಹಾಯ ಮಾಡೋಕೆ ಆ ಪರಿಸ್ಥಿತಿಯಲ್ಲಿ ಇರಬೇಕು ನಾವು. ಆ ಶಕ್ತಿ ಇದ್ದರೆ ಸಹಾಯ ಮಾಡೋಕೆ ಆಗುತ್ತೆ. ಸದ್ಯಕ್ಕೆ ನಾನು ಆ ಪರಿಸ್ಥಿತಿಯಲ್ಲಿ ಇಲ್ಲ. ಯಾಕಂದ್ರೆ ಅಷ್ಟೊಂದು ಕಾದಿದ್ದೇನೆ. ನನ್ನ ಎರಡು ಸಿನಿಮಾಗಳಿಗೆ 3 ವರ್ಷ ಆಗಿದೆ. ಮೂರು ವರ್ಷದಿಂದ ಬೇರೆ ಯಾವುದೂ ಸಿನಿಮಾ ಮಾಡದೆ ಮನೆಯಲ್ಲಿ ಕೂತಿದ್ದೀನಿ. ಎಲ್ಲರಿಗೂ ಫೈನಾನ್ಶಿಯಲ್ ಟ್ರಬಲ್ ಇರುತ್ತೆ. ನಾನು ಆ ಪರಿಸ್ಥಿತಿಯಲ್ಲಿ ಇದ್ದೀನಿ. ಅವರು ಒಪ್ಪಿಕೊಂಡಿರೋ ಸಂಭಾವನೆ ಕೊಡಿ, ನಾನು ಬಂದು ಡಬ್ಬಿಂಗ್ ಮಾಡ್ತೀನಿ ಅಂದೆ. ಅವರು ಖಡಾಖಂಡಿತವಾಗಿ ಆಗೋದೇ ಇಲ್ಲ ಅಂತ ಅಂದರು. ನನಗೆ ಈವರೆಗೂ ಒಂದು ಬ್ಲಾಕ್ ಮಾರ್ಕ್ ಇಲ್ಲ'' ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ಟ್ರೈಲರ್ ನೋಡಿ ಬೇಸರ ಆಯ್ತು!

''ನಿನ್ನೆ ರಾತ್ರಿವರೆಗೂ ನಾನು ಟ್ರೈಲರ್ ನೋಡಿರಲಿಲ್ಲ. ನಾನು ಕೇಳ್ತಾನೇ ಇದ್ದೆ... ದಯವಿಟ್ಟು ನನಗೆ ಕಳಿಸಿಕೊಡಿ ಅಂತ. ಟ್ರೈಲರ್‌ಗೂ ಡಬ್ಬಿಂಗ್ ಮಾಡಬೇಕಲ್ವಾ.. ಅದಕ್ಕೋಸ್ಕರ. ಟ್ರೈಲರ್‌ನಲ್ಲಿ ನನ್ನ ವಾಯ್ಸ್ ಇಲ್ಲ ಅಂತ ನನಗೆ ಗೊತ್ತಾಗಿದ್ದೇ ನಿನ್ನೆ ರಾತ್ರಿ. ನನಗೆ ಬೇಸರವಾಯ್ತು. ಅದಕ್ಕೆ ನಾನು ಇವತ್ತು ಟ್ರೈಲರ್ ರಿಲೀಸ್‌ಗೆ ಹೋಗಿಲ್ಲ'' ಎಂದಿದ್ದಾರೆ ಪ್ರಜ್ವಲ್ ದೇವರಾಜ್.

ರಾಜ್ ಬಿ ಶೆಟ್ಟಿ ಅವರನ್ನ ಹೈಲೈಟ್ ಮಾಡಿರೋದಕ್ಕೆ ಬೇಸರ ಇದ್ಯಾ?

''ನಾನು ಈ ಹಿಂದೆ 'ಚೌಕ' ಸಿನಿಮಾ ಮಾಡಿದ್ದೆ. ಅದೂ ಮಲ್ಟಿ ಸ್ಟಾರರ್ ಸಿನಿಮಾ. ರಾಜ್‌ ಬಿ ಶೆಟ್ಟಿ ಹಾಗೂ ನನ್ನ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ನಾವು ಚೆನ್ನಾಗಿದ್ದೇವೆ. ರಾಜ್ ಬಿ ಶೆಟ್ಟಿ ಅವರು ಎಕ್ಸ್ಟ್ರಾಡಿನರಿ ಟ್ಯಾಲೆಂಟ್. ಅಮೇಜಿಂಗ್ ಪರ್ಸನ್. ನಾನು ಇಬ್ಬರಲ್ಲ, ಐದು ಜನ ಹೀರೋಗಳು, ಹತ್ತು ಜನ ಹೀರೋಗಳಿದ್ರೂ ಮಾಡ್ತೀನಿ. ನನಗೆ ಆ ತರಹದ್ದು ಇಲ್ಲವೇ ಇಲ್ಲ. ನಮ್ಮ ಇಂಡಸ್ಟ್ರಿ ಚೆನ್ನಾಗಿರಬೇಕು. ಪ್ರೊಡ್ಯೂಸರ್ಸ್ ಚೆನ್ನಾಗಿರಬೇಕು. ಬೆಳೆಯಬೇಕು. ಎಲ್ಲರೂ ಜೊತೆಗೆ ಬೆಳೆಯಬೇಕು. ಅಷ್ಟೇ'' ಎಂದು ಪ್ರಜ್ವಲ್ ದೇವರಾಜ್ ಸ್ಪಷ್ಟಪಡಿಸಿದ್ದಾರೆ.

ಟ್ರೈಲರ್‌ಗೆ ಡಬ್ಬಿಂಗ್ ಮಾಡುತ್ತಿದ್ದೆ!

''ನಿನ್ನೆ ರಾತ್ರಿ ನಾನು ಕಾಡಿ ಬೇಡಿ.. 'ದಯವಿಟ್ಟು ಕಳಿಸಿಕೊಡಿ' ಅಂದಾಗ ಟ್ರೈಲರ್ ಕಳುಹಿಸಿದರು. ಅದು ನೋಡಿದ್ಮೇಲೆ ನನಗೆ ಬೇಸರ ಆಯ್ತು. ಅಯ್ಯೋ, ನನ್ನ ಹತ್ರ ಹೇಳಿರಲಿಲ್ಲ.! ಅವರು ನನಗೆ ಹೇಳಿದ್ರೆ, ನಾನು ನಿಜವಾಗ್ಲೂ ಹೋಗಿ ಟ್ರೈಲರ್ ಡಬ್ಬಿಂಗ್ ಮುಗಿಸುತ್ತಿದ್ದೆ. ಮಿಕ್ಕಿದ್ದು ಆಮೇಲೆ ನೋಡಿಕೊಳ್ಳೋಣ ಅಂತ. ಮಿಕ್ಕಿದ್ದು ಹೆಂಗಿದ್ರು ರಿಲೀಸ್‌ಗೆ ಟೈಮ್ ಇದೆ ಅಲ್ವಾ? ಸಿನಿಮಾ ಡಬ್ಬಿಂಗ್ ಆಮೇಲೆ ಮಾಡಬಹುದಿತ್ತು. ಅಟ್ಲೀಸ್ಟ್ ಟ್ರೈಲರ್‌ಗೆ ಹೋಗಿ ಡಬ್ಬಿಂಗ್ ಮಾಡಿ ನಾನು ಬರ್ತಿದ್ದೆ. ನಾನು ಅದರ ಸಮಸ್ಯೆನೇ ಮಾಡ್ತಾ ಇರ್ಲಿಲ್ಲ'' ಎಂದು ತಮ್ಮ ಅಸಮಾಧಾನವನ್ನ ಪ್ರಜ್ವಲ್ ದೇವರಾಜ್ ಹೊರಹಾಕಿದ್ದಾರೆ.

ದೇವರಾಜ್ ಏನಂದರು?

''ನೀನು ಯಾಕಪ್ಪಾ ಇಷ್ಟೊಂದು ಕಾಸು ಬಿಟ್ಟುಕೊಂಡಿದ್ದೀಯಾ.. ಲಾಸ್ಟ್ ತನಕ? ಬೇರೆ ಎಲ್ಲರೂ ತುಂಬಾ ಕಮ್ಮಿ ಸಂಭಾವನೆ ಬಿಟ್ಟುಕೊಳ್ಳುತ್ತಾರೆ. ನೀನು ಹೋಗಿ ಶೂಟಿಂಗ್ ಮಾಡಿ ಮುಗಿಸಿಬಿಡ್ತೀಯಾ? ಆಮೇಲೆ ಒದ್ದಾಡ್ತೀಯಾ? ಕೊನೆಗೆ ಇದೇ ತರಹ ಆಗುತ್ತೆ. ಪ್ರತಿ ಸಲ ನಿಂಗೆ ಹಿಂಗೆ ಆಗ್ತಾ ಇದೆ. ನಿನ್ನ ನೋಡಿದ್ರೆ ಅಯ್ಯೋ ಅನಿಸುತ್ತೆ'' ಅಂತ ಅಪ್ಪ ಹೇಳಿದರು'' ಎಂದಿದ್ದಾರೆ ಪ್ರಜ್ವಲ್ ದೇವರಾಜ್.

ವಿವಾದ ಬಗೆಹರಿದರೆ ಸಂತೋಷ

''ಬೆಳಗ್ಗೆ ಟ್ರೈಲರ್‌ ಲಾಂಚ್‌ಗೆ ಹೋಗಬೇಕು ಅಂತ ಸಿದ್ಧವಾಗಿದ್ದೆ. ಆದರೆ, ರಾತ್ರಿ ಟ್ರೈಲರ್‌ ನೋಡಿ ಬೇಸರ ಆಯ್ತು. ನನ್ನ ವಾಯ್ಸ್ ಇಲ್ಲ ಅಂತ ಗೊತ್ತಾಗಿ ಬೇಸರ ಆಯ್ತು. ಮಾತುಕತೆಗೆ ನಾನು ಸಿದ್ಧ. ಈ ವಿವಾದ ಬಗೆಹರಿದರೆ ನನಗೂ ಸಂತೋಷವೇ'' ಅಂತಂದಿದ್ದಾರೆ ಪ್ರಜ್ವಲ್ ದೇವರಾಜ್.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka