ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ಮೇಲೆ ರಾಜ್ಯದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ಪ್ರಯೋಗ ಮಾಡಲಾಗುತ್ತಿದೆ. ಆದಾಗ್ಯೂ, ದಂಡ ವಸೂಲಿ ಪ್ರಮಾಣ ಮಾತ್ರ ಶೇ.45 ಸಹ ದಾಟಿಲ್ಲ.ರಾಜ್ಯ ಸರಕಾರ ಬಾಕಿ ಉಳಿದಿರುವ ದಂಡ ವಸೂಲಿಗೆ ಈ ಹಿಂದೆ ಎರಡು ಸಲ ಶೇ.50ರಷ್ಟು ರಿಯಾಯಿತಿ ನೀಡಿತ್ತು.
ಕೆಲವರು ಠಾಣೆಗಳಿಗೆ ದೌಡಾಯಿಸಿ ಹಣ ಪಾವತಿ ಮಾಡಿದರೆ ಬಹುಪಾಲು ಜನ ಅದಕ್ಕೆ ಸೊಪ್ಪು ಹಾಕಿಲ್ಲ. ಪರಿಣಾಮ ರಾಜ್ಯದಲ್ಲಿ 2023ರಿಂದ ದಂಡ ವಸೂಲಿ ಬಾಕಿ ಉಳಿದಿದೆ.
ಸರಕಾರದ ಅಧಿಕೃತ ಮೂಲಗಳ ಪ್ರಕಾರ, 2023ರಲ್ಲಿ ಶೇ.43, 2024ರಲ್ಲಿ ಶೇ.24 ಮತ್ತು 2025ರಲ್ಲಿ ಶೇ.44ರಷ್ಟು ಪ್ರಕರಣಗಳ ದಂಡ ವಸೂಲಾತಿ ಬಾಕಿ ಇದೆ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ರಾಜ್ಯಾದ್ಯಂತ ನಿರಂತರ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ.
4 ಕೋಟಿ ಪ್ರಕರಣ
ರಾಜ್ಯದಲ್ಲಿ 2023ರಿಂದ 2025ರ ವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಮತ್ತು ವಿಧಿಸಿರುವ ದಂಡದ ಮೊತ್ತ ದಂಗಾಗಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 4.51 ಕೋಟಿ ಪ್ರಕರಣಗಳು ದಾಖಲಾಗಿದ್ದು, 2,522 ಕೋಟಿ ರೂ. ದಂಡ ವಿಧಿಸಲಾಗಿದೆ. 2023ರಲ್ಲಿ 680 ಕೋಟಿ ರೂ. ಇದ್ದ ದಂಡದ ಮೊತ್ತ 2024ಕ್ಕೆ 921 ಕೋಟಿ ಹಾಗೂ 2025ರಲ್ಲಿ 920 ಕೋಟಿಗೆ ಏರಿಕೆಯಾಗಿದೆ.ಸಂಪರ್ಕ ಸಹಿತ ನಿಯಮ ಜಾರಿ ಅಡಿಯಲ್ಲಿ ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿ ಎಎಸ್‌ಐ ಮತ್ತು ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ, ಎಲ್ಲ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಪಿಎಸ್‌ಐ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಪಿಡಿಎ (ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್) ಉಪಕರಣಗಳನ್ನು ನೀಡಲಾಗಿದೆ. ಬೆಂಗಳೂರಲ್ಲಿ ಸಿಬ್ಬಂದಿ ಅಸ್ತ್ರಂ ಆಪ್ ಮೂಲಕ ದಂಡ ವಿಧಿಸುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಸ್ಮಾರ್ಟ್ ಸಿಟಿಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅವುಗಳು ಸಹ ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪ್ರಯೋಗ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯದಲ್ಲಿ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.
ದಂಡ ಪ್ರಯೋಗದಲ್ಲಷ್ಟೇ ಬೆಸ್ಟ್
ಪ್ರತಿ ಸಂಚಾರ ಠಾಣೆಯಿಂದ ಸಂಗ್ರಹವಾಗುವ ದಂಡದ ಮೊತ್ತವನ್ನು ದಂಡ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಾಗುತ್ತಿದೆ. ಇಲಾಖೆಯೇ ಒಪ್ಪಿಕೊಂಡಿರುವಂತೆ, ಸಂಗ್ರಹಿಸಲಾದ ದಂಡದಲ್ಲಿ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತೆಗೆ ವ್ಯಯ ಮಾಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಸಾಕಷ್ಟು ರಸ್ತೆಗಳ ಸ್ಥಿತಿ ಸರಿಯಾಗಿಲ್ಲ. ನಗರ ವ್ಯಾಪ್ತಿಯ ರಸ್ತೆಗಳಲ್ಲಿಯೇ ವಾಹನ ಸವಾರರಿಗೆ ಸಂಚರಿಸಲು ಸುರಕ್ಷಿತ ವಾತಾವರಣವಿಲ್ಲ. ಪರಿಣಾಮ ಸಣ್ಣಪುಟ್ಟ ನಗರಗಳಲ್ಲೂ ಅಪಘಾತದ ಸಂಖ್ಯೆ ಏರುಗತಿಯಲ್ಲಿದೆ.2025ರ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ನಿತ್ಯ ಸುಮಾರು 31 ಸಾವು ಮತ್ತು 86 ಜನ ಗಾಯಗೊಳ್ಳುತ್ತಿದ್ದಾರೆ. ಅದರಲ್ಲಿ ಶೇ.62.68ರಷ್ಟು ಅಪಘಾತಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿವೆ. ರಾಜ್ಯದಲ್ಲಿ 11,408 ಮಾರಕ ಅಪಘಾತಗಳು ಮತ್ತು 31,751 ಮಾರಕವಲ್ಲದ ಅಪಘಾತಗಳು ವರದಿಯಾಗಿವೆ. ಬೆಂಗಳೂರುವೊಂದರಲ್ಲೇ 891 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಇದು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ (750) ಇದೆ.
| ವರ್ಷ | ದಾಖಲಾದ ಪ್ರಕರಣ | ದಂಡ |
| 2023 | 1,27,37,946 (1.27 ಕೋಟಿ) | 680,70,20,942 (680 ಕೋಟಿ) |
| 2024 | 1,62,97,495 (1.62 ಕೋಟಿ) | 921,33,02,876 (921 ಕೋಟಿ) |
| 2025 | 1,60,64,622 (1.60 ಕೋಟಿ) | 920,89,50,630 (920 ಕೋಟಿ) |
| ಒಟ್ಟು | 4,51,00,063 (4.51 ಕೋಟಿ) | 2,522,92,74,448 (2,522 ಕೋಟಿ) |
ದಂಡ ಹಾಕುವಾಗ ಹಳೆಯ ಪ್ರಕರಣಗಳು ಇರುವುದು ಪತ್ತೆಯಾದರೆ, ಅಂತಹ ವಾಹನ ಮಾಲೀಕರಿಂದ ಪೂರ್ಣ ಹಣ ಪಾವತಿಸಿಕೊಳ್ಳಲಾಗುತ್ತದೆ. ಜತೆಗೆ, ದಂಡ ಪಾವತಿಯಲ್ಲಿ ರಿಯಾಯಿತಿ ನೀಡಿದಾಗ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಈ ಹಿಂದೆ ರಿಯಾಯಿತಿ ನೀಡಿದಾಗ ದಂಡ ಸಂಗ್ರಹದಲ್ಲಿ ಬೆಂಗಳೂರು ನಗರ ಬಿಟ್ಟರೆ ಶಿವಮೊಗ್ಗ ಅತಿ ಹೆಚ್ಚು ಹಣ ಸಂಗ್ರಹ ಮಾಡುವ ಮೂಲಕ ರಾಜ್ಯದಲ್ಲೇ 2ನೇ ಸ್ಥಾನದಲ್ಲಿತ್ತು.
- ಬಿ.ನಿಖಿಲ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ, ಶಿವಮೊಗ್ಗ

