Dailyhunt
ದಯೆ ಒಳ್ಳೆಯದು, ಆದರೆ ಮಿತಿ ಅಗತ್ಯ: ಚಾಣಕ್ಯರ ನೋಟ.!

ದಯೆ ಒಳ್ಳೆಯದು, ಆದರೆ ಮಿತಿ ಅಗತ್ಯ: ಚಾಣಕ್ಯರ ನೋಟ.!

Vijay Karnataka 3 weeks ago

"ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ" ಬಸವಣ್ಣನವರು ನುಡಿದ ಈ ವಚನ ಇಂದಿಗೂ ನಮ್ಮೊಂದಿಗಿದೆ. ನಮ್ಮಲ್ಲಿ ಎಲ್ಲಿವರೆಗೆ ದಯೆಗೆ ಬೆಲೆಯಿರುತ್ತದೆಯೋ ಅಲ್ಲಿಯವರೆಗೆ ಈ ವಚನವೂ ನಮ್ಮೊಂದಿಗೆ ಉಳಿದುಕೊಳ್ಳುತ್ತದೆ. ಆದರೆ, ಅತಿಯಾದ ದಯೆ ಕೂಡ ಒಳ್ಳೆಯದಲ್ಲವೆಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ವಿವರಿಸಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಅತಿಯಾದ ದಯೆ ಕೊನೆಗೆ ನಮಗೆ ದೌರ್ಬಲ್ಯವಾಗುವುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಂತಹ ಸಂದರ್ಭದಲ್ಲಿ ಯಾರು ನಮ್ಮ ದಯೆ ಗುಣವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೋ ಅಂತವರಿಂದ ಆದಷ್ಟು ಅಂತರವನ್ನು ನಾವು ಕಾಯ್ದುಕೊಳ್ಳಬೇಕು. ಇಲ್ಲದೇ ಇದ್ದರೆ ಅದು ನಮ್ಮ ಸ್ವಾಭಿಮಾನವನ್ನು ಹಾಳು ಮಾಡುತ್ತದೆ. ನಾವು ತೋರಿದ ದಯೆಯನ್ನು ದುರ್ಬಳಕೆ ಮಾಡುವವರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಯಾವುದೇ ವಿಚಾರಗಳು, ಭಾವನೆಗಳು, ವಸ್ತುಗಳು ಅತಿಯಾದರೂ ಅದರಿಂದ ಕೆಟ್ಟದ್ದಾಗುವುದೇ ಹೊರತು ಒಳ್ಳೆಯದಾಗುವುದಿಲ್ಲ. ಅದೇ ರೀತಿ ಅತಿಯಾಗಿ ದಯೆಯನ್ನು ತೋರುವುದರಿಂದಲೂ ಕೆಟ್ಟದ್ದಾಗುವುದೇ ಹೊರತು ಒಳ್ಳೆಯದಾಗುವುದಿಲ್ಲ.


ನೀವು ಇತರರಿಗೆ ಒಳ್ಳೆಯತನವನ್ನು ಅಥವಾ ದಯೆಯನ್ನು ತೋರಿಸುವುದು ತಪ್ಪಲ್ಲ. ಆದರೆ, ಅದು ಅತಿಯಾದರೆ ಅವರು ನಿಮ್ಮನ್ನು ಕಡೆಗಣಿಸಲು ಪ್ರಾರಂಭಿಸುತ್ತಾರೆ. ನಿಮ್ಮನ್ನು ಹಗುರವಾಗಿ ಪರಿಗಣಿಸಲು ಮುಂದಾಗುತ್ತಾರೆ. ಅವರ ದೃಷ್ಟಿಯಲ್ಲಿ ನೀವು ಸ್ವಾಭಿಮಾನಿಗಳಿಲ್ಲದೆ ಇರುವವರ ಹಾಗೆ ಬದುಕಬೇಕಾಗುತ್ತದೆ. ನೀವು ತೋರಿಸುವ ದಯೆ ಬಲವಾಗಿರಬೇಕೆ ವಿನಃ ಅತಿಯಾಗಿರಬಾರದು ಎಂಬುದನ್ನು ಚಾಣಕ್ಯರು ಹೇಳಿದ್ದಾರೆ.

1. ನಿಮ್ಮ ದಯೆಯ ಗುಣದಿಂದ ಲಾಭ ಪಡೆದುಕೊಳ್ಳುತ್ತಿರುವವರನ್ನು ಕಂಡುಹಿಡಿಯಿರಿ:
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ, ಯಾವ ವ್ಯಕ್ತಿಗೆ ನಿಮ್ಮ ಅಗತ್ಯವಿರುತ್ತದೆಯೋ ಅಂತಹ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನೆಸಿಕೊಳ್ಳುವ ಅಥವಾ ನಿಮ್ಮೊಂದಿಗೆ ಮಾತನಾಡಲು ಬಯಸುವ ವ್ಯಕ್ತಿಯಿಂದ ನೀವು ದೂರವಿರುವುದು ಉತ್ತಮ. ಅಂತಹ ಜನರ ಸ್ನೇಹವನ್ನು ಎಂದಿಗೂ ಮಾಡಲು ಹೋಗಬೇಡಿ. ಅಂತಹ ವ್ಯಕ್ತಿಗಳನ್ನು ನಾವು ಸ್ವಾರ್ಥಿಗಳೆಂದು ಪರಿಗಣಿಸಬಹುದಾಗಿದೆ. ಅಂತಹ ಜನರು ನಿಮ್ಮ ಭಾವನೆಗಳಿಗೆ ಎಂದಿಗೂ ಗೌರವವನ್ನು ಕೊಡುವುದಿಲ್ಲ. ನೀವು ಅವರಿಗೆ ತೋರಿದ ದಯೆಯನ್ನು ಅವರು ಎಂದಿಗೂ ನಿಮಗೆ ನೀಡುವುದಿಲ್ಲ. ಹಾಗಾಗಿ, ಇಂತವರಿಗೆ ನೀವು ದಯೆಯನ್ನು ತೋರುವುದು ವ್ಯರ್ಥವೆನಿಸಿಕೊಳ್ಳುತ್ತದೆ.

ಇನ್ನು ಕೆಲವೊಮ್ಮೆ ಏನಾಗುವುದೆಂದರೆ, ನಿಮ್ಮ ಕೆಟ್ಟತನವನ್ನು ಬಿಡಿ, ನಿಮ್ಮ ಒಳ್ಳೆಯತನವನ್ನು ಕೂಡ ಮೆಚ್ಚದೆ ಇರುವಂತಹ ಜನರೊಂದಿಗೆ ನೀವು ಸ್ನೇಹ ಮಾಡಿರುತ್ತೀರಿ. ಇಂತಹ ಜನರನ್ನು ದೂರ ಇಡುವುದರಿಂದ ಅದು ನಿಮ್ಮ ಮನಸ್ಸನ್ನು ಶಾಂತಗೊಳಿಸುವುದು. ಆತ್ಮವಿಶ್ವಾಸವನ್ನು ವೃದ್ಧಿಸುವುದು. ಪ್ರತಿಯೊಂದು ಸಂಬಂಧವನ್ನು, ವಿಶೇಷವಾಗಿ ನಿಮಗೆ ಹಾನಿ ಮಾಡುವ ಸಂಬಂಧವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.


2. ಎಲ್ಲಾ ಸಮಯದಲ್ಲೂ ಸಹಾಯಕ್ಕಾಗಿ ನಿಲ್ಲುವುದು ಒಳ್ಳೆಯದಲ್ಲ:
ಆಚಾರ್ಯ ಚಾಣಕ್ಯರ ಪ್ರಕಾರ, ಯಾವಾಗಲೂ ಇನ್ನೊಬ್ಬ ವ್ಯಕ್ತಿಗೆ ಲಭ್ಯವಿರುವ ಜನರು ಇತರರಿಗೆ ಸುಲಭವಾಗಿ ಗುರಿಯಾಗುತ್ತಾರೆ. ಒಬ್ಬ ವ್ಯಕ್ತಿ ಪದೇ ಪದೇ ನಿಮ್ಮ ಬಳಿ ನಿಮ್ಮ ಸಹಾಯವನ್ನು ಕೇಳಿದರೆ ಮತ್ತು ಪ್ರತಿ ಬಾರಿಯೂ ನೀವು ಆ ವ್ಯಕ್ತಿಗೆ ಸಹಾಯವನ್ನು ಮಾಡುತ್ತಲೇ ಇದ್ದರೆ ಅವರ ದೃಷ್ಟಿಯಲ್ಲಿ ನೀವು ದುರ್ಬಲರಾಗಿ ಕಾಣಿಸಿಕೊಳ್ಳುತ್ತೀರಿ. ಆದ್ದರಿಂದ ಪ್ರತೀ ಬಾರಿಯೂ ನೀವು ಅವರ ಸಹಾಯಕ್ಕೆ ಸುಲಭವಾಗಿ ಸಿಗುವ ಬದಲು ಕೆಲವೊಮ್ಮೆ ಇಲ್ಲ ಎಂದು ಹೇಳಲು ಪ್ರಯತ್ನಿಸಿ. ಇದು ನಿಮ್ಮನ್ನು ಇತಿ - ಮಿತಿಗಳಲ್ಲಿ ನಡೆಯಲು ಕಲಿಸುತ್ತದೆ. ಇತರರು ನಿಮ್ಮ ಸ್ವಾಭಿಮಾನವನ್ನು ಗೌರವಿಸಲು ಅವಕಾಶ ಮಾಡಿಕೊಡುತ್ತದೆ.

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಅತಿಯಾದ ದಯೆ ತೋರುವುದರಿಂದ ಯಾವೆಲ್ಲಾ ಸಮಸ್ಯೆಗಳು ಸೃಷ್ಟಿಯಾಗುತ್ತದೆ ಎಂಬುದರ ಬಗ್ಗೆ ವಿವರವಾಗಿ ಹೇಳಿದ್ದಾರೆ. ದಯೆ ಗುಣವನ್ನು ಇಟ್ಟುಕೊಳ್ಳುವುದು ಒಳ್ಳೆಯ ಅಭ್ಯಾಸ. ಆದರೆ, ಅತಿಯಾದ ದಯೆಯನ್ನು ತೋರುವುದು ಒಳ್ಳೆಯದಲ್ಲ ಎಂಬುದನ್ನೇ ಚಾಣಕ್ಯರು ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka