Dailyhunt Logo
  • Light mode
    Follow system
    Dark mode
    • Play Story
    • App Story
ದೇಶಭಕ್ತರ ನಡಿಗೆಗೆ ಕೇಳ್ತಾರೆ ಪರ್ಮಿಷನ್‌, ಬಾಂಗ್ಲಾ ನುಸುಳುಕೋರಿಗೆ ಕೊಡ್ತಾರೆ ರೇಷನ್‌; ಗೃಹ ಸಚಿವರಿಗೆ ಬಿಜೆಪಿ ಟೆನ್ಶನ್!

ದೇಶಭಕ್ತರ ನಡಿಗೆಗೆ ಕೇಳ್ತಾರೆ ಪರ್ಮಿಷನ್‌, ಬಾಂಗ್ಲಾ ನುಸುಳುಕೋರಿಗೆ ಕೊಡ್ತಾರೆ ರೇಷನ್‌; ಗೃಹ ಸಚಿವರಿಗೆ ಬಿಜೆಪಿ ಟೆನ್ಶನ್!

Vijay Karnataka 3 days ago

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ವಿರುದ್ಧ ತೊಡೆ ತಟ್ಟಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಪ್ರತಿ ಹಂತದಲ್ಲೂ ಸಂಘವನ್ನು ಸೈದ್ಧಾಂತಿಕವಾಗಿ ಎದುರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಆರ್‌ಎಸ್‌ಎಸ್‌ ನೋಂದಣಿ ವಿವಾದ ಭುಗಿಲೆದ್ದ ಬಳಿಕ, ಈ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೇಳಿಕೆಗಳು ಹೊರಬೀಳುತ್ತಿವೆ.

ಆರ್‌ಎಸ್‌ಎಸ್‌ ಬೆಂಬಲಿಸಿ ಅಖಾಡಕ್ಕಿಳಿದಿರುವ ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ, ಈ ವಿಚಾರವಾಗಿ ಗೃಹ ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಸಂಘದ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದಿರುವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಕಿಡಿಕಾರಿರುವ ಬಿಜೆಪಿ, ಗೃಹ ಸಚಿವರಾಗಿ ಪ್ರಿಯಾಂಕ್‌ ಖರ್ಗೆ ಅವರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಮೊದಲು ಕ್ರಮಕೈಗೊಳ್ಳಲಿ ಎಂದು ಸವಾಲು ಹಾಕಿದೆ.

ಈ ಕುರಿತು ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ದೇಶಭಕ್ತರ ನಡಿಗೆ ಮೇಲೂ ನಿರ್ಬಂಧ ಹೇರುವ ಪ್ರಿಯಾಂಕ್‌ ಖರ್ಗೆ, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.


"ಆರ್‌ಎಸ್‌ಎಸ್‌ ಪಥಸಂಚಲನಕ್ಕೆ STOP ಬೋರ್ಡ್ ಹಿಡಿದು ಅನುಮತಿ ಕಡ್ಡಾಯ ಎನ್ನುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ,
ರಾಜ್ಯದೊಳಗೆ ನುಸುಳಿ ಬಂದ ಅಕ್ರಮ ಬಾಂಗ್ಲಾ ವಲಸಿಗರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿ ಮತದಾನದ ಹಕ್ಕು ನೀಡುತ್ತಿರುವುದು ಯಾವ ಕಾನೂನು?" ಎಂದು ಪ್ರತಿಪಕ್ಷ ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

ಮುಂದುವರೆದು, "ದೇಶಭಕ್ತರಿಗೆ ನಿರ್ಬಂಧದ ಬೇಲಿ, ಅಕ್ರಮ ನುಸುಳುಕೋರರಿಗೆ ಸ್ವಾಗತದ ರಂಗೋಲಿ! ಇದುವೇ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಅಸಲಿ ವೋಟ್ ಬ್ಯಾಂಕ್ ರಾಜಕಾರಣ!" ಎಂದು ಬಿಜೆಪಿ ಹರಿಹಾಯ್ದಿದೆ.

ನಿನ್ನೆ (ಜುಲೈ 6-ಸೋಮವಾರ) ಕಲಬುರಗಿಯಲ್ಲಿ ಮಾತನಾಡುತ್ತಾ, ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದರು. "ನಾನು ರಾಜ್ಯದ ಗೃಹ ಸಚಿವನಾಗಿ ಇರುವವರೆಗೆ ರಾಜ್ಯದ ಯಾವುದೇ ಭಾಗದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಿದರೂ, ಅದಕ್ಕೆ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ" ಎಂದು ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದರು.


ಈ ಹಿಂದೆ ತಮ್ಮ ಆರ್‌ಎಸ್‌ಎಸ್‌ ವಿರುದ್ಧದ ಹೋರಾಟವನ್ನು ಪ್ರಶ್ನಿಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಿಯಾಂಕ್‌ ಖರ್ಗೆ, ಆರ್‌ಎಸ್‌ಎಸ್‌ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ ಎಂದು ವ್ಯಂಗ್ಯವಾಡಿದ್ದರು. ಸಂಘವನ್ನು ಪ್ರಶ್ನಿಸಿದರೆ ಬಿಜೆಪಿಗೆ ಏಕೆ ಸಂಕಟವಾಗುತ್ತದೆ ಎಂದು ಗೃಹ ಸಚಿವರು ಪ್ರಶ್ನಿಸಿದ್ದರು.

ಸೇರಿಗೆ ಸವ್ವಾಸೇರು ಎಂಬಂತೆ ಇದೀಗ ಬಿಜೆಪಿ ರಾಜ್ಯದಲ್ಲಿರುವ ಸುಮಾರು 20 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಪ್ರಿಯಾಂಕ್‌ ಖರ್ಗೆ ಕ್ರಮಕೈಗೊಳ್ಳಲಿ ಎಂದು ಸವಾಲೆಸೆದಿದ್ದು, ಇದಕ್ಕೆ ಗೃಹ ಸಚಿವರು ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಆರ್‌ಎಸ್‌ಎಸ್‌ ನೋಂದಣಿ ವಿಚಾರವಾಗಿ ಆರಂಭವಾದ ಈ ವಾಕ್ಸಮರ ಈಗ ಅಕ್ರಮ ಬಾಂಗ್ಲಾ ವಲಸಿಗರ ವಿಚಾರಕ್ಕೆ ಬಂದು ನಿಂತಿದೆ ಎಂದು ಹೇಳಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka