Dailyhunt
ಡಿಕೆಶಿ ಜನ್ಮದಿನದ ಅವಕಾಶವನ್ನು ರಾಜಕೀಯವಾಗಿ ಬಳಸಲು ಆಪ್ತರು, ಅಭಿಮಾನಿಗಳ ಕಸರತ್ತು! ಪ್ಲ್ಯಾನ್ ಏನೇನಿದೆ

ಡಿಕೆಶಿ ಜನ್ಮದಿನದ ಅವಕಾಶವನ್ನು ರಾಜಕೀಯವಾಗಿ ಬಳಸಲು ಆಪ್ತರು, ಅಭಿಮಾನಿಗಳ ಕಸರತ್ತು! ಪ್ಲ್ಯಾನ್ ಏನೇನಿದೆ

Vijay Karnataka 6 days ago

ಬೆಂಗಳೂರು: ಮೇ 15 , ಡಿಸಿಎಂ ಡಿಕೆ ಶಿವಕುಮಾರ್ ಅವರ ಜನ್ಮದಿನ. ಡಿಕೆಶಿ ಅವರು 64 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಡಿಕೆಶಿ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಜನ್ಮದಿನ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಜನ್ಮದಿನದ ಸಂದರ್ಭವನ್ನು ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಬಳಕೆ ಮಾಡಲು ಡಿಕೆಶಿ ಆಪ್ತರು ಸಿದ್ದತೆ ನಡೆಸುತ್ತಿದ್ದಾರೆ.

ಏನೆಲ್ಲಾ ಪ್ಲ್ಯಾನ್?

ರಾಜ್ಯದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂಬ ಸಿದ್ದರಾಮಯ್ಯ ಬಣದ ಯೋಜನೆಗೆ ತಿರುಗೇಟು ನೀಡಲು ಡಿಕೆಶಿ ಬಣ ಸಿದ್ದಗೊಳ್ಳುತ್ತಿದೆ. ಇದಕ್ಕಾಗಿ ಮೇ 15 ವೇದಿಕೆ ಆಗುತ್ತಾ ಎಂಬ ಕುತೂಹಲವೂ ಇದೆ.

ಬರ್ತ್ ಡೇ ಗಿಫ್ಟ್ ಎಂಬ ಚರ್ಚೆ

ಮೇ 15 ರಂದು ಡಿಕೆಶಿ ಹುಟ್ಟು ಹಬ್ಬ ಆಗಿರುವುದರಿಂದ ಹೈಕಮಾಂಡ್‌ನಿಂದ ಬರ್ತ್‌ಡೇ ಗಿಫ್ಟ್ ಸಿಗಲಿದೆ ಎಂಬ ಚರ್ಚೆಯನ್ನು ಮುನ್ನಲೆಗೆ ತರಲಾಗುತ್ತಿದೆ. ಹೈಕಮಾಂಡ್‌ ನಾಯಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದಾರೆ ಎಂಬ ಅಂಶವನ್ನು ಚರ್ಚೆಗೆ ತರಲಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಚರ್ಚೆಗೆ ಎಡೆಮಾಡಿಕೊಟ್ಟಿದೆ.


ಇಷ್ಟೇ ಅಲ್ಲದೆ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಮೇ 15 ರಂದು ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬ್ಯಾನರ್ ಫ್ಲೆಕ್ಸ್ ಗಳನ್ನು ಅಳವಡಿಸುವ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ಬ್ಯಾನರ್ ಫ್ಲೆಕ್ಸ್ ಗಳಲ್ಲಿ ಡಿಕೆಶಿ ಸಿಎಂ ಎಂಬ ಗಮನ ಸೆಳೆಯುವ ಅಂಶಗಳನ್ನು ಉಲ್ಲೇಖಿಸಿದರೂ ಅಚ್ಚರಿ ಇಲ್ಲ.

ಜಾಹೀರಾತಿನ ಮೂಲಕ ಗಮನ ಸೆಳೆಯುವುದು

ಡಿಕೆಶಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಶುಭಕೋರಲು ಅಭಿಮಾನಿಗಳು ಮುಂದಾಗಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಡಿಕೆಶಿ ಪರವಾಗಿ ಅಭಿಪ್ರಾಯ ರೂಪಿಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ಡಿಕೆಶಿ ಪರವಾದ ಒಲವು ದೊಡ್ಡ ಮಟ್ಟದಲ್ಲಿ ರಾಜ್ಯದಲ್ಲಿ ಇದೆ ಎಂದು ಬಿಂಬಿಸುವ ಪ್ರಯತ್ನ ನಡೆಯಲಿದೆ.

ಆಪ್ತರ ಹೇಳಿಕೆ ಕುತೂಹಲ

ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆಪ್ತರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಶುಭಕೋರಲಿದ್ದಾರೆ. ಇದು ಸಹಜ ಸಂಪ್ರದಾಯ. ಆದರೆ ಈ ಭೇಟಿಯ ಸಂದರ್ಭದಲ್ಲಿ ಶಾಸಕರು ಹಾಗೂ ಆಪ್ತರು ನೀಡುವ ಹೇಳಿಕೆಗಳು ಚರ್ಚೆಗೆ ಒಳಪಡುವ ಸಾಧ್ಯತೆ ಇದೆ. ಡಿಕೆಶಿ ಸಿಎಂ ಆಗಬೇಕು ಎಂದು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಲ್ಲಿ ಮತ್ತೊಂದು ಚರ್ಚೆ ಹುಟ್ಟಿಕೊಳ್ಳಲಿದೆ.


ಈ ವಿಚಾರವಾಗಿ ಈಗಾಗಲೇ ಶಾಸಕರಾದ ಇಕ್ಬಾಲ್ ಹುಸೇನ್, ನಯನಾ ಮೋಟಮ್ಮ, ಕುಣಿಗಲ್ ರಂಗನಾಥ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ಮತ್ತೊಮ್ಮೆ ಇವರೆಲ್ಲಾ ನೀಡಬಹುದಾದ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಬಹುದು.

ಇನ್ನು ಇದೇ ವಿಚಾರವಾಗಿ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಡಿಕೆ ಸುರೇಶ್, ಡಿಕೆಶಿ ಸಿಎಂ ಆಗುತ್ತಾರಾ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. "ನಾನು ನಿಮ್ಮ ಹಾಗೆ ಕಾಯುತ್ತಿದ್ದೇನೆ. 64 ವರ್ಷಕ್ಕೆ ಡಿಕೆಶಿ ಹೋಗುತ್ತಿದ್ದಾರೆ ಎಂಬುವುದೇ ನಮ್ಮ ಪಾಲಿಗೆ ಶುಭ ಸುದ್ದಿ. ನಮ್ಮಲ್ಲಿ ನಂಬಿಕೆ ತಾಳ್ಮೆ ಎಲ್ಲವೂ ಇದೆ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ನಾನು ಇದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಆ ಕೆಲಸ ಅಧ್ಯಕ್ಷರು ಮಾಡುತ್ತಿದ್ದಾರೆ. ಎಲ್ಲದಕ್ಕೂ ಒಳ್ಳೆಯ ಕಾಲ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka