ದುಬೈ / ಬಹ್ರೇನ್ : ಇರಾನ್ ದೇಶದ ವೈಮಾನಿಕ ದಾಳಿಯ ನಂತರ, ದುಬೈ ಮತ್ತು ಬಹ್ರೇನ್ ನಲ್ಲಿರುವ ಅಮೆಜಾನ್ ವೆಬ್ ಸರ್ವೀಸ್ (AWS) ಕೇಂದ್ರಗಳಲ್ಲಿನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಮೆಜಾನ್ ಹೇಳಿದೆ. ಸಂಸ್ಥೆಯ ಆಂತರಿಕ ಮೆಮೋದಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಇಂಟರ್ನಲ್ ಮೆಮೋದಲ್ಲಿ ದುಬೈ ಮತ್ತು ಬಹ್ರೇನ್ 'ನ AWS ಕೇಂದ್ರಗಳು ದೀರ್ಘ ಕಾಲದವರೆಗೆ ಸೇವೆಯನ್ನು ನೀಡಲು ಲಭ್ಯವಿರುವುದಿಲ್ಲ ಎಂದು ಹೇಳಿದೆ. ಗಲ್ಫ್ ರಾಷ್ಟ್ರಗಳಲ್ಲಿನ ಬಹುರಾಷ್ಟ್ರೀಯ ಕಂಪೆನಿಯನ್ನು ಟಾರ್ಗೆಟ್ ಮಾಡಲಾಗುವುದು ಎಂದು ಇರಾನ್ ಎಚ್ಚರಿಕೆಯನ್ನು ನೀಡಿತ್ತು.
ವೈಮಾನಿಕ ದಾಳಿಯನ್ನು ಒಪ್ಪಿಕೊಂಡ ಅಮೆಜಾನ್
ಆಂತರಿಕ ಮೆಮೋದ ಪ್ರಕಾರ, ಇರಾನ್ ದಾಳಿಯ ಹಾನಿ ಪ್ರಮಾಣದಿಂದಾಗಿ, ಈ ಪ್ರದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಂತೆ ಅಮೆಜಾನ್ ತನ್ನ ಉದ್ಯೋಗಿಗಳಲ್ಲಿ ಕೇಳಿಕೊಂಡಿದೆ. ಈ ದಾಳಿಯಿಂದಾಗಿ ಸೇವೆಯಲ್ಲಿ ವ್ಯತ್ಯಯ ಉಂಟಾದ ಗ್ರಾಹಕರಿಗೆ ಬೇರೆ ವ್ಯವಸ್ಥೆಯನ್ನು ಮಾಡಲು ಅಮೆಜಾನ್ ಕೆಲಸ ಮಾಡುತ್ತಿದೆ ಎಂದು ಮೆಮೋದಲ್ಲಿ ಹೇಳಲಾಗಿದೆ.ದುಬೈ ಮತ್ತು ಬಹ್ರೇನ್ ನಲ್ಲಿರುವ ಈ ಎರಡು ಡೇಟಾ ಸೆಂಟರ್'ಗಳು, ದಾಳಿಯಿಂದ ದುರ್ಬಲಗೊಂಡಿದೆ. ಸಾಮಾನ್ಯ ಮಟ್ಟದ ಸೇವೆಯನ್ನು (Basic Service) ಮತ್ತೆ ನೀಡಲು ಪ್ರಯತ್ನಿಸುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಸದ್ಯ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಅಮೆಜಾನ್ ಹೇಳಿದೆ.
ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ
ಗ್ರಾಹಕರು ಬೇರೆ ಡೇಟಾ ಸೆಂಟರ್' ಸೇವೆಯನ್ನು ಪಡೆಯಲು ಬಯಸಿದರೆ, ಅದನ್ನು ನಾವು ಬೆಂಬಲಿಸುತ್ತೇವೆ. ಇದಕ್ಕೆ ಅಗತ್ಯವಿರುವ ಕ್ರಮವನ್ನು ಆದ್ಯತೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ನಾವು ಸಂಬಂಧ ಪಟ್ಟ ಸರ್ಕಾರೀ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಗ್ರಾಹಕರಿಗೆ ಮತ್ತೆ ಸೇವೆಯನ್ನು ನೀಡುವುದು ಮತ್ತು ನಮ್ಮ ಸಿಬ್ಬಂದಿಗಳ ಸುರಕ್ಷತೆ, ನಮ್ಮ ಈ ಕ್ಷಣದ ಆದ್ಯತೆಯಾಗಿದೆ ಎಂದು ಅಮೆಜಾನ್ ಹೇಳಿದೆ.ಯುಎಸ್ - ಇರಾನ್ - ಇಸ್ರೇಲ್ ನಡುವಿನ ಯುದ್ದವು ಆರನೇ ವಾರಕ್ಕೆ ಎಂಟ್ರಿಯಾಗಿದೆ. ಅಮೆಜಾನ್ ಸಂಸ್ಥೆಯ ಬಹ್ರೈನ್ ಸೆಂಟರ್ ಮೇಲೆ ಈ ವಾರದ ಆರಂಭದಲ್ಲಿ (ಏಪ್ರಿಲ್ 1) ದಾಳಿ ನಡೆದಿತ್ತು. ಇರಾನ್ ದಾಳಿಗೆ ಸಾಕಷ್ಟು ಉಪಕರಣಗಳು ಬೆಂಕಿಗೆ ಆಹುತಿಯಾಗಿತ್ತು. ಯುಎಇನಲ್ಲಿರುವ ಸೆಂಟರ್'ಗಳ ಮೇಲೂ ದಾಳಿ ನಡೆದಿತ್ತು.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಮೈಕ್ರೋಸಾಪ್ಟ್, ಗೂಗಲ್, ಆಪಲ್ ನಂತಹ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ, ಹಲವಾರು ಯುಎಸ್ ಟೆಕ್ ಕಂಪೆನಿಗಳ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಹಾಕಿತ್ತು. ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ, ನಿಮ್ಮ ಘಟಕಗಳ ನಾಶವನ್ನು ನಿರೀಕ್ಷಿಸಿ ಎಂದು IRGC ಎಚ್ಚರಿಸಿತ್ತು. ಇರಾನ್'ನ ಐಆರ್‌ಜಿಸಿ, ದುಬೈನಲ್ಲಿರುವ ಒರಾಕಲ್ ಡೇಟಾ ಸೆಂಟರ್ ಕಟ್ಟಟದ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾಗಿ ಹೇಳಿಕೊಂಡಿತ್ತು. ಆದರೆ, ಯುಎಇ ಇದನ್ನು ನಿರಾಕರಿಸಿತ್ತು.

