ವೈಭವ್ ಸೂರ್ಯವಂಶಿ ಕ್ರಿಕೆಟ್ ವಲಯದಲ್ಲಿ ಯಾವ ಮಟ್ಟಿಗೆ ಗಮನ ಸೆಳೆದಿದ್ದಾರೆ ಎಂದರೆ ಅವರೀಗ ರನ್ ಹೊಡೆದರೂ ಚರ್ಚೆಯೇ, ಹೊಡೆಯದಿದ್ದರೂ ಚರ್ಚೆಯೇ. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಈಗಾಗಲೇ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ 15ರ ಹರೆಯದ ಬಾಲಕ ರೆಡ್ ಬಾಲ್ ನಲ್ಲಿ ಹೇಗೆ ಆಡುತ್ತಾನೆಂದು ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿತ್ತು.
ಇದೀಗ ದುಲೀಪ್ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯ ಪರ ಆಡಿದ ಅವರು ಕೇವಲ 8 ರನ್ ಗೆ ಔಟಾ ಗುವ ಮೂಲಕ ನಿರಾಸೆ ಮೂಡಿಸಿದರು.ಆದರೆ ಈ ವೈಫಲ್ಯವನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ತಂಡದ ಕೋಚ್ ಮನೀಶ್ ಓಜಾ ಅವರು ಮಾತ್ರ ಸೋಲಿನಲ್ಲೂ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಬಾಲಕನನ್ನು ಹುರಿದುಂಬಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಟೆಸ್ಟ್ ಆಡಬೇಕು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಈ ಹಿಂದೆ ಸಲಹೆ ನೀಡಿದ್ದರು. ಇದಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಸಹ ಧ್ವನಿಗೂಡಿಸಿದ್ದರು. ವೈಭವ್ ಸೂರ್ಯವಂಶಿ ಅವರು ಸಹ ಈ ಸಲಹೆಯನ್ನು ಖುಷಿಯಿಂದ ಸ್ವೀಕರಿಸಿದ್ದರು. ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಸಹ ಸಚಿನ್ ಹೇಳಿಕೆಯನ್ನೇ ಪುನರುಚ್ಚರಿಸಿದ್ದರು. ಆದರೆ ಅಜಿಂಕ್ಯ ರಹಾನೆ ಅವರು ಮಾತ್ರ ಬಾಲಕನಿಗೆ ಈಗಲೇ ಹೆಚ್ಚು ಒತ್ತಡ ಹಾಕಬೇಡಿ ಎಂದು ಕಿವಿಮಾತು ಹೇಳಿದ್ದರು. ಇದರ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವೈಭವ್ ಅವರು ದುಲೀಪ್ ಟ್ರೋಫಿ ಪಂದ್ಯದಲ್ಲಿ ತಮ್ಮ ಪ್ರಥಮ ಪಂದ್ಯವನ್ನು ಆಡಿದರು.
6 ಎಸೆತದಲ್ಲಿ 8 ರನ್
ಬೆಂಗಳೂರಿನ ಬಿಸಿಸಿಐ 'ಸೆಂಟರ್ ಆಫ್ ಎಕ್ಸಲೆನ್ಸ್' ಮೈದಾನದಲ್ಲಿ ಭಾನುವಾರ ನಡೆದ ಈಶಾನ್ಯ ವಲಯ (North East Zone) ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದ ಮೂಲಕ ಪೂರ್ವ ವಲಯ (East Zone) ಪರ ಕಣಕ್ಕಿಳಿದರ. ಪಂದ್ಯದ ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾಗಿ ಅವರು ಎರಡು ಬೌಂಡರಿ ಬಾರಿಸಿದಾಗ ಎಲ್ಲರ ಕಣ್ಣರಳಿತ್ತು. ಆದರೆ ಕೇವಲ 6 ಎಸೆತಗಳಲ್ಲಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ನಿರಾಶೆಗೆ ಕಾರಣವಾಯಿತು.ವೈಟ್ ಬಾಲ್ (ಪರಿಮಿತ ಓವರ್ಗಳ) ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸಲ್ಫ ಸುದ್ದಿಯಲ್ಲಿದ್ದ 15 ವರ್ಷದ ಸೂರ್ಯವಂಶಿಗೆ ರೆಡ್ ಬೋಲ್ (ಟೆಸ್ಟ್) ಕ್ರಿಕೆಟ್ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ಬಿಹಾರ ಪರ ಇದುವರೆಗೆ 8 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು ಕೇವಲ 17ರ ಸರಾಸರಿ ಹೊಂದಿದ್ದು, ಅವರ ಪ್ರತಿಭೆಗೆ ತಕ್ಕ ಪ್ರದರ್ಶನ ಮೂಡಿಬಂದಿಲ್ಲ.
ಸೋಲಿನಲ್ಲೂ ಕಲಿಯುವುದಿದೆ: ಮನೀಶ್ ಓಜಾ
ಯುವ ಕ್ರಿಕೆಟಿಗನ ಬೆಳವಣಿಗೆಯಲ್ಲಿ ಗೆಲುವು ಮತ್ತು ಸೋಲು ಎರಡೂ ಸಮಾನ ಪ್ರಾಮುಖ್ಯತೆ ಹೊಂದಿವೆ. ಹೀಗಾಗಿ ಒಂದೇ ಇನ್ನಿಂಗ್ಸ್ ಆಧಾರದ ಮೇಲೆ ಸೂರ್ಯವಂಶಿಯ ಪ್ರದರ್ಶನವನ್ನು ಅಳೆಯಬಾರದು ಎಂದು ಅವರ ಕೋಚ್ ಮನೀಶ್ ಓಜಾ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸ್ಪೋರ್ಟ್ಸ್ ನೌ ಜೊತೆ ಮಾತನಾಡಿದ ಅವರು, "ನಾವು ಸಾಧಿಸುವ ಯಶಸ್ಸಿನಲ್ಲಿ ಕೆಲವು ತಪ್ಪುಗಳಿರುತ್ತವೆ, ಅದೇ ರೀತಿ ನಮಗೆ ಎದುರಾಗುವ ವೈಫಲ್ಯಗಳಲ್ಲೂ ಕೆಲವು ಒಳ್ಳೆಯ ವಿಷಯಗಳಿರುತ್ತವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದನ್ನೂ ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.ಟಿ20 ಕ್ರಿಕೆಟ್ನಲ್ಲಿ ಈಗಾಗಲೇ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಯುವ ಆಟಗಾರನಿಗೆ, ಪ್ರಥಮ ದರ್ಜೆ ಕ್ರಿಕೆಟ್ ಸಂಪೂರ್ಣ ವಿಭಿನ್ನ ಸವಾಲನ್ನು ಒಡ್ಡುತ್ತದೆ. ಇಲ್ಲಿ ವೇಗವಾಗಿ ರನ್ ಗಳಿಸುವುದಕ್ಕಿಂತಲೂ ಕ್ರಿಸ್ನಲ್ಲಿ ಸುದೀರ್ಘ ಅವಧಿ ನಿಂತು ಇನ್ನಿಂಗ್ಸ್ ಕಟ್ಟುವುದು ಮುಖ್ಯವಾಗುತ್ತದೆ. ಸೂರ್ಯವಂಶಿಗೆ ಪ್ರತಿಯೊಂದು ಇನ್ನಿಂಗ್ಸ್ ಕೂಡ ಕಲಿಕೆಗೆ ಹೊಸ ಅವಕಾಶವಾಗಿದೆ. ಈ ವಯಸ್ಸಿನಲ್ಲಿ ಎದುರಾಗುವ ಪ್ರತಿಯೊಂದು ಎಸೆತ, ಪಂದ್ಯ ಹಾಗೂ ಹಿನ್ನಡೆಗಳು ಅವರ ಪ್ರಬುದ್ಧತೆಯನ್ನು ಹೆಚ್ಚಿಸಲಿವೆ ಎಂದು ತರಬೇತುದಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಪ್ರತಿಯೊಂದು ಯಶಸ್ಸು, ವೈಫಲ್ಯ, ಇನ್ನಿಂಗ್ಸ್, ಎಸೆತ ಹಾಗೂ ಪಂದ್ಯವೂ ಕಲಿಯುವ ಪ್ರಕ್ರಿಯೆಯಾಗಿದೆ. ಅವರು ಪ್ರಸ್ತುತ ಕಲಿಯುತ್ತಿದ್ದಾರೆ" ಎಂದು ಓಜಾ ಹೇಳಿದ್ದಾರೆ.

