Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ; ತುಮಕೂರು ವಿಎಒ ಭುವನಾ ದುರ್ಮರಣ; DC ಕಚೇರಿ ಬಳಿ ಪ್ರತಿಭಟನೆ

ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ; ತುಮಕೂರು ವಿಎಒ ಭುವನಾ ದುರ್ಮರಣ; DC ಕಚೇರಿ ಬಳಿ ಪ್ರತಿಭಟನೆ

Vijay Karnataka 1 week ago

ತುಮಕೂರು: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕರ್ತವ್ಯಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಆಡಳಿತಾಧಿಕಾರಿ (ವಿಎ) ಭುವನಾ ಅವರು ಚಿಕಿತ್ಸೆ ಫಲಿಸದೆ ಶನಿವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ದುರಂತದ ಬೆನ್ನಲ್ಲೇ ಕಂದಾಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳ 'ಕೆಲಸದ ಒತ್ತಡ'ವೇ ಸಾವಿಗೆ ಕಾರಣ ಎಂದು ಆರೋಪಿಸಿ ಪ್ರತಿಭಟನೆಗಿಳಿದಿದ್ದಾರೆ.

ತುಮಕೂರು ತಾಲೂಕಿನ ಹುಲ್ಲೇನಹಳ್ಳಿಯ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಟಿ. ಬೇಗೂರು ನಿವಾಸಿ ಭುವನಾ, ಶನಿವಾರ ಬೆಳಿಗ್ಗೆ ಎಸ್‌ಐಆರ್ ಪ್ರಕ್ರಿಯೆಯ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಗೂಳೂರಿನ ನಾಡಕಚೇರಿಗೆ ಹೊರಟಿದ್ದರು.
ಬೆಳಗ್ಗೆ ಕುಣಿಗಲ್ ರಸ್ತೆಯ ಗೂಳೂರು ಬಳಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿಯೊಂದು ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭುವನಾ ಅವರು ಹೆಲ್ಮೆಟ್ ಧರಿಸಿದ್ದರೂ, ಡಿಕ್ಕಿಯ ರಭಸಕ್ಕೆ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.

ಮೇಲಾಧಿಕಾರಿಗಳ ಕೆಲಸದ ಒತ್ತಡಕ್ಕೆ ಬಲಿ- ಸಿಬ್ಬಂದಿ ಆಕ್ರೋಶ

ಭುವನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರಿನ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಧಿಕಾರಿಗಳ ವಿಪರೀತ ಕೆಲಸದ ಒತ್ತಡ ಹಾಗೂ ಈ ಪರಿಸ್ಥಿತಿಗೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಶನಿವಾರ ಮಧ್ಯಾಹ್ನದಿಂದಲೇ ಡಿಸಿ ಕಚೇರಿ ಎದುರು ಜಮಾಯಿಸಿದ ಕಂದಾಯ ಇಲಾಖೆಯ ಸಿಬ್ಬಂದಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ

ಜಿಲ್ಲಾಧಿಕಾರಿ ಕಚೇರಿ ಎದುರು ಅಂತಿಮ ದರ್ಶನಕ್ಕೆ ಭುವನಾ ಪ್ರಾರ್ಥೀವ ಶರೀರ ತರಲು ಅವಕಾಶ ಕಲ್ಪಿಸುವಂತೆ ಪ್ರತಿಭಾನಾಕಾರರು ಒತ್ತಾಯಿಸಿದರು.‌ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಸರಕಾರದ ಪ್ರಧಾನಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದರು‌. 'ಎಂಎಲ್ ಎಗಳು ಸಾವನ್ನಪ್ಪಿದಾಗ ವಿಧಾನಸೌಧದ ಬಳಿ ಅಂತಿಮ ದರ್ಶನಕ್ಕೆ ಅವಕಾಶ ನೀಡುತ್ತೇವೆ. ಇಲಾಖೆ ಅಧಿಕಾರಿ ಕರ್ತವ್ಯದ ವೇಳೆ ನಿಧನರಾಗಿದ್ದಾರೆ. ಅವಕಾಶ ಮಾಡಿಕೊಡಿ' ಎಂದು ಮನವಿ ಮಾಡಿದರು.

ಬಳಿಕ‌ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತನಾಡಿ ವಿಎಒ ಹೇಮಾಗೆ ಕುಮಾರಸ್ವಾಮಿ ಅವರ ಜತೆ ಮಾತನಾಡಲು ಕೊಟ್ಟರು. ಹೇಮಾ ಎಚ್ ಡಿಕೆ‌ ಬಳಿ ತಮ್ಮ‌ ಒತ್ತಡ, ಅಳಲು ತೋಡಿಕೊಂಡರು. ಎಷ್ಟೋ ಜನ ಕೆಲಸದ ಒತ್ತಡದಿಂದ ವಿಚ್ಚೇದನ ಪಡೆದಿದ್ದೇವೆ, ಮಕ್ಕಳಿಗೆ ಓದಿಸಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟು, ಅಂತಿಮದರ್ಶನಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದರು.

ಕೆಲವೇ ನಿಮಿಷದಲ್ಲಿ ಮರಳಿ ಕರೆ‌ ಮಾಡಿದ ಎಚ್.ಡಿ.ಕುಮಾರಸ್ವಾಮಿ, 'ಅಂತಿಮ‌ ದರ್ಶನಕ್ಕೆ ಅವಕಾಶ ಕೊಡುವಂತೆ ಹೇಳಿದ್ದೇನೆ. ನಿಮ್ಮ‌ ಪರಿಸ್ಥಿತಿ ಅರ್ಥ ಆಗುತ್ತದೆ. ನಿಮ್ಮೊಂದಿಗೆ ನಾವಿರುತ್ತೇವೆ. ಪ್ರಾರ್ಥೀವ ಶರೀರ ದರ್ಶನ ಮಾಡಿ. ಸಣ್ಣ ಅಚಾತುರ್ಯಕ್ಕೂ ಅವಕಾಶ ನೀಡಬೇಡಿ ಎಂದು ಪ್ರತಿಭಟನಾಕಾರರನ್ನುದ್ದೇಶಿಸಿ ಹೇಳಿದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka