ಮೈಸೂರು: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಕ್ರೀಡಾಪಟು ಮೈಸೂರಿನ ಪ್ರಣವಿ ಶರತ್ ಅರಸ್ ಅವರನ್ನು ಕ್ರೀಡಾಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಚಿನ್ನದ ಪದಕ ಗೆದ್ದ ಪ್ರಣವಿ ಅರಸ್ ಮೈಸೂರಲ್ಲಿ ಅದ್ದೂರಿ ಸ್ವಾಗತ
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಮೂಲಕ ಅವರನ್ನು ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಎ.ಜಿ.ರಸ್ತೆ ಮುಖಾಂತರ ಮೈಸೂರು ರೇಸ್ ಕೋರ್ಸ್‌ಗೆ ಕರೆ ತರಲಾಯಿತು.''ಕೊಡಗು ಹಾಗೂ ಮೈಸೂರು ಜಿಲ್ಲೆಗಳು ಕ್ರೀಡಾ ಕ್ಷೇತ್ರದಲ್ಲಿ ಹಲವು ಪ್ರತಿಭೆಗಳನ್ನು ಬೆಳೆಸಿದ್ದು, ಈ ಜಿಲ್ಲೆಗಳಿಗೆ ಸೇರಿದ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುತ್ತಿರುವುದು ಹೆಮ್ಮೆಯ ಸಂಗತಿ. ಪ್ರಣವಿ ಅರಸ್ ಅವರ ಸಾಧನೆ ಅರಸು ಸಮುದಾಯಕ್ಕೂ ಹೆಮ್ಮೆಯ ಕ್ಷಣವಾಗಿದೆ,'' ಎಂದರು.
ಪದಕ ವಿಜೇತೆ ಪ್ರಣವಿ ಅರಸ್ ಮಾತನಾಡಿ, ''ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ನನ್ನ ಕ್ರೀಡಾ ಜೀವನದ ಅತ್ಯುನ್ನತ ಸಾಧನೆಗಳಲ್ಲಿ ಒಂದಾಗಿದೆ. ಈ ಪ್ರಯಾಣ ಸುಲಭವಾಗಿರಲಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಏಳು-ಬೀಳುಗಳಿರುತ್ತವೆ. ಹೀಗಾಗಿ ಈ ಗೆಲುವಿನಿಂದ ತುಂಬಾ ಉತ್ಸಾಹ ಬಂದಿದೆ,'' ಎಂದರು.
''ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ ಮತ್ತು ಸಿದ್ಧತೆ ಅಗತ್ಯ. ದಿನಕ್ಕೆ ಸುಮಾರು ಐದರಿಂದ ಆರು ಗಂಟೆಗಳ ಕಾಲ ಗಾಲ್ಫ್ ಅಭ್ಯಾಸ ಮಾಡುತ್ತೇನೆ. ಇದರೊಂದಿಗೆ ಜಿಮ್ ತರಬೇತಿ ಹಾಗೂ ಕ್ರೀಡಾ ಮನೋವಿಜ್ಞಾನಿಯೊಂದಿಗೆ ಸೆಷನ್‌ಗಳನ್ನೂ ನಡೆಸುತ್ತೇನೆ,'' ಎಂದು ತಿಳಿಸಿದರು.
ʼಗಾಲ್ಫ್ ಶ್ರೀಮಂತ ಕ್ರೀಡೆ ಎಂಬ ಭಾವನೆ ತಪ್ಪುʼ
''ನಾನು ಪ್ರತಿದಿನವೂ ನನ್ನ ರೂಟೀನ್ ಪಾಲಿಸುತ್ತೇನೆ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಅಭ್ಯಾಸ ಮಾಡಬೇಕು. ಗಾಲ್ಫ್ ನಲ್ಲೂ ನಿರಂತರ ಅಭ್ಯಾಸದಿಂದಲೇ ಉತ್ತಮ ಸಾಧನೆ ಸಾಧ್ಯ'' ಎಂದು ಹೇಳಿದರು.ಗಾಲ್ಫ್ ಶ್ರೀಮಂತರ ಕ್ರೀಡೆ ಎಂಬ ಭಾವನೆ ಸರಿಯಲ್ಲ ಎಂದು ಹೇಳಿದ ಪ್ರಣವಿ, ''ಎಲ್ಲರೂ ಗಾಲ್ಫ್ ಆಡಬಹುದು. ಗಾಲ್ಫ್ ಶ್ರೀಮಂತರ ಕ್ರೀಡೆ ಎಂಬುದು ಸಾಮಾನ್ಯವಾಗಿ ಇರುವ ತಪ್ಪು ಕಲ್ಪನೆ. ಆಡಲು ಆರಂಭಿಸಿದ ನಂತರ ಅಗತ್ಯವಾದ ಬೆಂಬಲ ಮತ್ತು ಅವಕಾಶಗಳು ದೊರೆಯುತ್ತವೆ'' ಎಂದರು.
''ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧೆ ಕಠಿಣವಾಗಿತ್ತು. ವಿಶ್ವದ 6ನೇ ಶ್ರೇಯಾಂಕದ ಆಟಗಾರ್ತಿಯೂ ಸೇರಿದಂತೆ ಹಲವು ಬಲಿಷ್ಠ ಆಟಗಾರ್ತಿಯರು ಸ್ಪರ್ಧೆಯಲ್ಲಿದ್ದರು. ಆದರೂ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು,'' ಎಂದು ಪ್ರಣವಿ ಹೇಳಿದರು.
ಕುಟುಂಬದ ಸಹಕಾರಕ್ಕೆ ಕೃತಜ್ಞತೆ
ತಮ್ಮ ಯಶಸ್ಸಿನಲ್ಲಿ ಕುಟುಂಬದ ಪಾತ್ರವನ್ನು ವಿಶೇಷವಾಗಿ ಸ್ಮರಿಸಿದ ಅವರು, ''ನನ್ನ ತಂದೆ-ತಾಯಿ ಮಾತ್ರವಲ್ಲದೆ ಇಡೀ ಕುಟುಂಬ ನನ್ನ ಬೆಂಬಲಕ್ಕೆ ನಿಂತಿದೆ. ಅಜ್ಜ-ಅಜ್ಜಿ, ಅಂಕಲ್, ಆಂಟಿ ಸೇರಿದಂತೆ ಎಲ್ಲರೂ ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದರು. ಅದು ನನಗೆ ದೊರೆತ ಅತ್ಯಂತ ದೊಡ್ಡ ಆಶೀರ್ವಾದ. ಅವರಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಅವರ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ'' ಎಂದರು.ಮೆರವಣಿಗೆಗೂ ಮುನ್ನ ಪ್ರಣವಿ ಅರಸ್ ತಂದೆ ಶರತ್‌ಚಂದ್ರ ರಾಜ ಅರಸ್, ತಾಯಿ ಕೈವಲ್ಯ ರಾಜ ಅರಸ್ ಅವರು ಕೋಟೆ ಆಂಜನೇಯಸ್ವಾಮಿ ಹಾಗೂ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

