ಮಂಗಳೂರು: 119 ವರ್ಷಗಳ ಕಾಲ ಚೆನ್ನೈ(ಮದ್ರಾಸ್) ಕೇಂದ್ರದ ವಶದಲ್ಲಿದ್ದ ಕರ್ನಾಟಕ ಕರಾವಳಿಯ ಹೆಬ್ಬಾಗಿಲು ಮಂಗಳೂರು ಪ್ರದೇಶ ಈಗ ನೈಋುತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಹೊಂದಿರುವ ನೈಋುತ್ಯ ರೈಲ್ವೆಯು ತನ್ನ ಮೈಸೂರು ವಿಭಾಗಕ್ಕೆ ಮಂಗಳೂರನ್ನು ಸೇರಿಸಿಕೊಳ್ಳುತ್ತಿದೆ.
ಈ ಮೂಲಕ ರೈಲ್ವೆಗೆ ಸಂಬಂಧಿಸಿದ ಕರ್ನಾಟಕದ ಅಸ್ಮಿತೆ ಸಾರ್ಥಕತೆ ಪಡೆದುಕೊಂಡಿದೆ.
31 ಜಿಲ್ಲೆಗಳಲ್ಲಿ ಹರಡಿಕೊಂಡಿರುವ 7 ಕೋಟಿ ಕನ್ನಡಿಗರ ಮಡಿಲಿನಿಂದ ದೂರವಾಗಿಯೇ ಇದ್ದು, ನಿರಂತರ ಪರಕೀಯ ಭಾವನೆ ಅನುಭವಿಸುತ್ತಿದ್ದ ಮಂಗಳೂರು ರೈಲ್ವೆ ಜಾಲ ಅ.1ರಿಂದ ಅಧಿಕೃತವಾಗಿ ಕರುನಾಡಿನ ರೈಲು ಜಾಲದಲ್ಲಿ ಸಂಭ್ರಮಿಸಲಿದೆ.
ಪರಕೀಯತೆಯ ಹೆಜ್ಜೆ ಗುರುತು
ರಾಜ್ಯದ ಪಶ್ಚಿಮ ಕರಾವಳಿಯ ಹೆಬ್ಬಾಗಿಲೆಂದೇ ಕರೆಯಲ್ಪಡುವ ಮಂಗಳೂರಿಗೆ ರೈಲು ಜಾಲ ಕಾಲಿಟ್ಟಿದ್ದು 1907ರಲ್ಲಿ. ಮಂಗಳೂರಿನ ಅತ್ತಾವರ ಪ್ರದೇಶದಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಬ್ರಿಟಿಷ್ ಸರಕಾರ ನೇತ್ರಾವತಿ ನದಿಗೆ ಸೇತುವೆ ನಿರ್ಮಿಸಿ ಕೇರಳಕ್ಕೆ ರೈಲ್ವೆ ಜಾಲ ಅಳವಡಿಸಿತು. ಈ ಮೂಲಕ ಇದು ಅಂದಿನ ಮದ್ರಾಸ್‌ವರೆಗೂ ಚಾಚಿಕೊಳ್ಳಲು ಅನುಕೂಲವಾಯಿತು.ಸ್ವತಂತ್ರ ಭಾರತದಲ್ಲಿ 1951ರಲ್ಲಿ ದಕ್ಷಿಣ ರೈಲ್ವೆ ವಲಯ ಸ್ಥಾಪನೆಯಾದಾಗ ಬೆಂಗಳೂರು, ಮೈಸೂರು ಮತ್ತು ಮಂಗಳೂರನ್ನು ಈ ವಲಯಕ್ಕೆ ಸೇರಿಸಲಾಯಿತು. ವಿಶೇಷವೆಂದರೆ ದಕ್ಷಿಣ ಮಧ್ಯ ರೈಲ್ವೆಯಿಂದ ಹುಬ್ಬಳ್ಳಿ ಹಾಗೂ ದಕ್ಷಿಣ ರೈಲ್ವೆಯಿಂದ ಬೆಂಗಳೂರು ಮತ್ತು ಮೈಸೂರನ್ನು ಬೇರ್ಪಡಿಸಿ 2003ರಲ್ಲಿ ಸ್ವತಂತ್ರ ನೈಋುತ್ಯ ರೈಲ್ವೆ ವಲಯ ನಿರ್ಮಿಸಿ ಹುಬ್ಬಳ್ಳಿಯನ್ನು ಇದರ ಕೇಂದ್ರ ಸ್ಥಾನ ಮಾಡಿದಾಗಲೂ ಮಂಗಳೂರು ಮಾತ್ರ ದಕ್ಷಿಣ ರೈಲ್ವೆಯಲ್ಲೇ ಉಳಿದುಕೊಂಡಿತು. ಬೆಂಗಳೂರು ಮತ್ತು ಮೈಸೂರಿಗೆ ಸಿಕ್ಕಿದ ಕರ್ನಾಟಕ ರೈಲು ಏಕೀಕರಣದ ಭಾಗ್ಯ ಮಂಗಳೂರಿಗೆ ಸಿಗಲೇ ಇಲ್ಲ.
ನೈಋುತ್ಯ ರೈಲ್ವೆ ಸುಮಾರು 3,177 ಕಿ.ಮೀ. ಉದ್ದದ ರೈಲ್ವೆ ಲೈನ್‌ಗಳನ್ನು ಹೊಂದಿದ್ದು, ಇದರಲ್ಲಿ ಶೇ.84 ಕರ್ನಾಟಕದಲ್ಲೇ ಇದೆ. ಉಳಿದವು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಹಂಚಿಹೋಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕದ ಅಸ್ಮಿತೆಯನ್ನು ಬೆಸೆದಿರುವ ನೈಋುತ್ಯ ರೈಲ್ವೆಗೆ ಮಂಗಳೂರು ಮಾತ್ರ ಪರಕೀಯವೇ ಆಗಿತ್ತು.
ಮಂಗಳೂರಿನ ದಯನೀಯತೆ
ಮಂಗಳೂರು ಭಾಗದ ರೈಲ್ವೆ ಜಾಲದ ದುಃಖದ ಕಥೆಗಳೇ ಬೇರೆ. 1799ರಲ್ಲಿ ಬ್ರಿಟಿಷ್ ಸರಕಾರ ಕೆನರಾ ಜಿಲ್ಲೆ ರಚಿಸಿದಾಗ ಅದರ ಕೇಂದ್ರವಾಗಿ ಮೂಡಿಬಂದ ಮಂಗಳೂರು, ಮದ್ರಾಸ್ ಪ್ರಾಂತ್ಯದ ಅಧೀನಕ್ಕೆ ಒಳಪಟ್ಟಿತು. 1956ರವರೆಗೂ ಇದೇ ಸ್ಥಿತಿ ಇತ್ತು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯದ ಭಾಗವಾಯಿತು.156 ವರ್ಷ ಮದ್ರಾಸ್ ಮನಸ್ಥಿತಿಯ ಕೆಳಗೆ ಆಳಲ್ಪಟ್ಟ ಮಂಗಳೂರು ಬಳಿಕ ಕರುನಾಡಿನ ಭಾಗವಾದರೂ, ರೈಲಿನ ವಿಚಾರಕ್ಕೆ ಬಂದಾಗ ಮಾತ್ರ ತಮಿಳುನಾಡು ಮತ್ತು ಕೇರಳದ ಮರ್ಜಿಯಲ್ಲೇ ಕಳೆಯಬೇಕಾಯಿತು. ಯಾಕೆಂದರೆ ಚೆನ್ನೈ ಕೇಂದ್ರಿತ ದಕ್ಷಿಣ ರೈಲ್ವೆಯ ಪಾಲಕ್ಕಾಡ್/ಪಾಲ್ಘಾಟ್(ಕೇರಳ) ವಿಭಾಗಕ್ಕೆ ಮಂಗಳೂರು ಒಳಪಟ್ಟಿತು.
ತಾರತಮ್ಯದ ಕರಿನೆರಳು
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ಮಲಯಾಳಂ ಪ್ರಭಾವ, ಮಂಗಳೂರಿನ ರೈಲು ಬೇಡಿಕೆಗಳಿಗೆ ಕೇರಳ ಲಾಬಿಯ ಅಡ್ಡಗಾಲು, ಇಲ್ಲಿನ ಯಾವುದೇ ಬೇಡಿಕೆ ಈಡೇರಬೇಕಾದರೂ ಪಾಲಕ್ಕಾಡಿನಲ್ಲಿ ಕುಳಿತ ಕೇರಳ, ತಮಿಳುನಾಡು ಅಧಿಕಾರಿಗಳಿಗೆ ಸಲಾಮು ಹಾಕಬೇಕಾದ ಸ್ಥಿತಿ, ಮಂಗಳೂರಿಗೆ ಬರುವ ಪ್ರತೀ ಪ್ರಮುಖ ರೈಲುಗಳೂ ಇಲ್ಲಿನ ಪ್ರಯಾಣಿಕರ ಅವಶ್ಯಕತೆಗಿಂತ ಹೆಚ್ಚು ಕೇರಳೀಯರ ಅನಿವಾರ್ಯತೆಗಳನ್ನೇ ಗಮನಿಸುವುದು, ಅಧಿಕಾರಿ, ಸಿಬ್ಬಂದಿ ನೇಮಕದಲ್ಲಿ ಕನ್ನಡಿಗರಿಗೆ ಕೊನೆಯ ಅವಕಾಶ.. ಹೀಗೆ ಮಲತಾಯಿ ಧೋರಣೆಯನ್ನು ಮಂಗಳೂರು ಮೌನವಾಗಿಯೇ ಸಹಿಸಿಕೊಳ್ಳುತ್ತಾ ಬಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಂಗಳೂರಿನಂತಹ ಮಹಾನಗರದ ರೈಲ್ವೆ ಜಾಲದಲ್ಲಿ ಹುಟ್ಟುವ ಭರ್ಜರಿ ಆದಾಯ ಪಾಲಕ್ಕಾಡಿನ ಖಜಾನೆ ತುಂಬುತ್ತಲೇ ಬಂದಿತ್ತು.ವಿಭಾಗವನ್ನಾದರೂ ಕೊಡಿ ಎಂದರೆ..
ಈ ಎಲ್ಲ ನೋವಿನಿಂದ ಬೇಸತ್ತ ಬಳಕೆದಾರರು ದಕ್ಷಿಣ ರೈಲ್ವೆಯಲ್ಲೇ ಕನಿಷ್ಠ ಮಂಗಳೂರಿಗೆ ಪ್ರತ್ಯೇಕ ವಿಭಾಗವನ್ನಾದರೂ ಕೊಡಿ ಎಂದು ಕೇಳುತ್ತಲೇ ಬಂದಿದ್ದರು. ಆದರೆ ಈಗ ಲಡ್ಡು ಬಂದು ಬಾಯಿಗೆ ಬಿತ್ತಾ ಎಂಬಂತೆ ವಿಭಾಗದ ಬದಲು ಕನ್ನಡಿಗರ ಅಸ್ಮಿತೆಯ ಸಂಕೇತವಾಗಿರುವ ನೈಋುತ್ಯ ವಲಯಕ್ಕೆ ಮಂಗಳೂರು ಸೇರಿಕೊಂಡಿದೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ತನ್ನ ವಿಭಾಗಕ್ಕೆ ಸಹೋದರಿ ಮಂಗಳೂರನ್ನು ಪ್ರೀತಿಯಿಂದ ಸೇರಿಸಿಕೊಳ್ಳುತ್ತಿದೆ. ಈ ಮೂಲಕ ಮಂಗಳೂರು-ಮೈಸೂರಿನ ಅನಾದಿ ಕಾಲದ ಅವಿನಾಭಾವ ಸಂಬಂಧಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.ಒಂದೇ ಊರಲ್ಲಿ 3 ವಲಯ!
ಪ್ರಸ್ತುತ ಮಂಗಳೂರಿನ ಸ್ಥಿತಿ ಹೇಗಿದೆ ಎಂದರೆ ಒಂದೇ ನಗರದ ಆಸುಪಾಸಿನಲ್ಲಿ 3 ರೈಲ್ವೆಗಳಿವೆ. ಉಳ್ಳಾಲ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್‌ಗಳು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಕ್ಕೆ ಸೇರಿವೆ. ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಫರಂಗಿಪೇಟೆಯಿಂದ ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯಗಳು ನೈಋುತ್ಯ ವಲಯದ ಮೈಸೂರು ವಿಭಾಗಕ್ಕೆ ಬರುತ್ತವೆ. ಮಂಗಳೂರಿನ ಪಕ್ಕದಲ್ಲೇ ಇರುವ ತೋಕೂರು, ಸುರತ್ಕಲ್, ಮೂಲ್ಕಿಗಳು ಕೊಂಕಣ ರೈಲ್ವೆಗೆ ಸೇರಿವೆ. ಹೀಗಾಗಿ ಮಂಗಳೂರಿನಲ್ಲಿ ಹುಟ್ಟುವ ರೈಲ್ವೆ ಆದಾಯ 3 ಕಡೆಗೆ ಹಂಚಿ ಹೋಗುತ್ತಿದೆ.ಹೊಸ ಗಡಿ ನಿರ್ಧಾರ
ಇದುವರೆಗೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ಕೊಂಕಣ ರೈಲ್ವೆಯ ಗಡಿಯಾಗಿದ್ದ ತೋಕೂರು ನಿಲ್ದಾಣ ಇನ್ನು ನೈಋುತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೆಯ ಗಡಿಯಾಗಲಿದೆ. ಕೊಂಕಣ ರೈಲ್ವೆ ಜಾಲ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿಯಾಗಿ ನೈಋುತ್ಯ ರೈಲ್ವೆ ವಲಯಕ್ಕೆ ಬಂದಂತಾಗಿದೆ. ಉಳ್ಳಾಲವು ದಕ್ಷಿಣ ದಿಕ್ಕಿನಲ್ಲಿ ನೈಋುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಯ ಗಡಿಯಾಗಲಿದೆ.ಕನ್ನಡಿಗರಿಗೆ ಪೂರ್ಣ ಲಾಭ
*ಮಂಗಳೂರು ಪ್ರದೇಶದ ರೈಲು ಜಾಲವನ್ನು ನೈಋುತ್ಯ ವಲಯಕ್ಕೆ ಸೇರಿಸಿರುವ ಕಾರಣ ಇದರ ಪೂರ್ಣ ಲಾಭ ಕನ್ನಡಿಗರಿಗೆ ಸಿಗಲಿದೆ.*ಮಂಗಳೂರಿನ ರೈಲ್ವೆ ಆದಾಯ ಇನ್ನು ಮೈಸೂರು ವಿಭಾಗಕ್ಕೆ ಸೇರಲಿದೆ. ಇದರ ಪರಿಣಾಮ ನೇರವಾಗಿ ಕೇರಳಕ್ಕೆ ತಟ್ಟಲಿದ್ದು, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆದಾಯ ಕುಸಿಯಲಿದೆ.
*ಮಂಗಳೂರು-ಬೆಂಗಳೂರು ಮಧ್ಯೆ ಹೊಸ ರೈಲು ಬೇಡಿಕೆಗಳನ್ನು ನಿರ್ಧರಿಸುವ ಸಂದರ್ಭ ಕನ್ನಡಿಗರ ಧ್ವನಿಗೆ ಆದ್ಯತೆ ಸಿಗಲಿದೆ. ಕೇರಳದ ಲಾಭ ಗಮನದಲ್ಲಿಟ್ಟುಕೊಂಡು ಮಂಗಳೂರಿನ ರೈಲು ನಿರ್ಧರಿಸುವ ಚಾಳಿ ನಿಲ್ಲಲಿದೆ.
*ಬೆಂಗಳೂರು-ಮಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಲು ಸಿದ್ಧತೆ ನಡೆಯುವ ಹೊತ್ತಿನಲ್ಲಿ ಈ ಬೆಳವಣಿಗೆ ಆಗಿರುವುದು ಮಹತ್ವದ ಮೈಲುಗಲ್ಲಾಗಲಿದ್ದು, ಹೊಸ ವಂದೇ ಭಾರತ್ ಕನ್ನಡಿಗರ ಆಸ್ತಿಯಾಗಲಿದೆ.
*ಈ ಭಾಗದ ರೈಲ್ವೆ ನೇಮಕಾತಿಯಲ್ಲಿ ಇನ್ನು ಮುಂದೆ ಕನ್ನಡಿಗರಿಗೆ ಆದ್ಯತೆ ಸಿಗಲಿದೆ.
*ಮಂಗಳೂರು-ಬೆಂಗಳೂರು ಹಳಿಯುದ್ದಕ್ಕೂ ಅಭಿವೃದ್ಧಿ ಕಾಮಗಾರಿ ನಡೆಯಲು ನೈಋುತ್ಯ ರೈಲ್ವೆಗೆ ಬಲ ಸಿಕ್ಕಿದೆ.
*ಪಣಂಬೂರು ಬಂದರಿನಿಂದ ಗೂಡ್ಸ್‌ಗಳ ಮೂಲಕ ಸಿಗುವ ದೊಡ್ಡಮಟ್ಟದ ಆದಾಯ ನೈಋುತ್ಯ ವಲಯಕ್ಕೆ ಸಿಗಲಿದೆ.
*ಮಂಗಳೂರು-ಬೆಂಗಳೂರು ಮಧ್ಯೆ ಹಳಿ ದ್ವಿಪಥಗೊಳಿಸುವ ದೂರಗಾಮಿ ಯೋಜನೆಗೆ ಬಲ ಬಂದಿದೆ.
*ಮೂರು ವಲಯಗಳ ಮಧ್ಯೆ ಮಂಗಳೂರು ಹಂಚಿ ಹೋದ ಕಾರಣ ರೈಲುಗಳ ವೇಳಾಪಟ್ಟಿ ನಿರ್ಧರಿಸಲು ಸಮನ್ವಯತೆ ಸಮಸ್ಯೆ ಕಾಡುತ್ತಿತ್ತು. ಅದು ನಿವಾರಣೆಯಾಗಲಿದೆ.
ಹಂತ ಹಂತದ ಹೋರಾಟ
2003ರಲ್ಲಿ ನೈಋುತ್ಯ ವಲಯ ಸ್ಥಾಪನೆ ಸಂದರ್ಭ ಮಂಗಳೂರನ್ನು ಸೇರಿಸುವ ಪ್ರಸ್ತಾಪವಿತ್ತು. ಆದರೆ ಅಂತಿಮ ಅಧಿಸೂಚನೆ ಬರಲಿಲ್ಲ. ಮಂಗಳೂರು-ಹಾಸನ ಬ್ರಾಡ್‌ಗೇಜ್ ಕಾಮಗಾರಿ ಮುಗಿದ ಬಳಿಕ ಮತ್ತೆ ಬೇಡಿಕೆ ಮುನ್ನೆಲೆಗೆ ಬಂತಾದರೂ ಕೈಕೂಡಲಿಲ್ಲ. 2014ರಲ್ಲಿ ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚೆಯಾಗಿತ್ತು. ಕರಾವಳಿಯ ಜನಪ್ರತಿನಿಧಿಗಳು ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದರು. 2021ರಲ್ಲಿ ದಕ್ಷಿಣ ರೈಲ್ವೆಯಲ್ಲೇ ಮಂಗಳೂರನ್ನು ಮುಂದುವರಿಸಲು ನಿರ್ಧರಿಸಲಾಯಿತು. 2023ರಲ್ಲಿ ರಾಜ್ಯಸಭೆಯಲ್ಲಿ ರೈಲ್ವೆ ಇಲಾಖೆ ನೀಡಿದ ಉತ್ತರದಲ್ಲಿ, ಇಂಥದೊಂದು ಪ್ರಸ್ತಾವನೆ ಇಲ್ಲಎಂದಿತ್ತು. ಆದರೂ ಹೋರಾಟ, ಒತ್ತಡ ನಿಂತಿರಲಿಲ್ಲ. ಮಂಗಳೂರಿನ ಜನಪ್ರತಿನಿಧಿಗಳು, ಬಳಕೆದಾರರ ನಿರಂತರ ಶ್ರಮದ ಪರಿಣಾಮ, ಹಾಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಉತ್ಸುಕತೆಯ ಫಲವಾಗಿ ಮಂಗಳೂರು ರೈಲ್ವೆ ನೈಋುತ್ಯ ವಲಯಕ್ಕೆ ಸೇರುತ್ತಿದೆ.ಕೊಂಕಣ ರೈಲ್ವೆ ವಿಲೀನ ಬೇಡಿಕೆ
ಕರ್ನಾಟಕ ಕರಾವಳಿಯನ್ನು ಮಹಾರಾಷ್ಟ್ರದ ಮೂಲಕ ಉತ್ತರ ಭಾರತಕ್ಕೆ ನೇರವಾಗಿ ಬೆಸೆಯುವ ಕೊಂಕಣ ರೈಲ್ವೆ 1990ರಲ್ಲಿಅಸ್ತಿತ್ವಕ್ಕೆ ಬಂತು. ಹೊಸ ಹಳಿ ನಿರ್ಮಾಣಗೊಂಡು ಮೂರೇ ವರ್ಷದಲ್ಲಿ ಮಂಗಳೂರು-ಉಡುಪಿ ಮಧ್ಯೆ ಪ್ಯಾಸೆಂಜರ್ ಓಡಾಡಿತು. ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗೆ 756 ಕಿ.ಮೀ. ಉದ್ದವಿರುವ ಕೊಂಕಣ ರೈಲ್ವೆ ಹಳಿ ಮಾರ್ಗದಲ್ಲಿ 1998ರಲ್ಲಿ ಪೂರ್ಣಪ್ರಮಾಣದ ರೈಲು ಸಂಚಾರ ಆರಂಭಗೊಂಡಿತು. ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್(ಕೆಆರ್‌ಸಿಎಲ್) ಸ್ವತಂತ್ರ ಸಂಸ್ಥೆಯಾಗಿದ್ದು, ಇದನ್ನು ಭಾರತೀಯ ರೈಲ್ವೆ ಜತೆ ವಿಲೀನಗೊಳಿಸಬೇಕೆಂಬ ಬೇಡಿಕೆಯಿದೆ. ಅದಿನ್ನೂ ಕಾರ್ಯಗತಗೊಂಡಿಲ್ಲ. ಕರ್ನಾಟಕದಲ್ಲಿ 251 ಕಿ.ಮೀ. ಉದ್ದದ ಹಳಿ ಹೊಂದಿರುವ ಕೊಂಕಣ ರೈಲ್ವೆ ಭವಿಷ್ಯದಲ್ಲಿ ಇಂಡಿಯನ್ ರೈಲ್ವೆ ಜತೆ ವಿಲೀನಗೊಂಡಲ್ಲಿ ಇದು ಯಾವ ವಲಯಕ್ಕೆ ಸೇರಬಹುದು ಮತ್ತು ಕರ್ನಾಟಕಕ್ಕೆ ಯಾವ ರೀತಿ ಪ್ರಯೋಜನ ತರಬಹುದು ಎಂಬುದು ಅಧ್ಯಯನ ಪೂರ್ಣ ವಿಚಾರ.
