ಕನ್ನಡ ನೆಲದ ಕಥೆ, ಜಗತ್ತಿನಾದ್ಯಂತ ಸೃಷ್ಟಿಸಿದ ಸಂಚಲನ ಇಂದು ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದೆ. ಅಚ್ಚಕನ್ನಡದ ಮಣ್ಣಿನ ವಾಸನೆ, ದೈವಾರಾಧನೆಯ ಭಕ್ತಿ ಮತ್ತು ಅದ್ಭುತ ಮೇಕಿಂಗ್ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದ ʻಕಾಂತಾರʼ ಖ್ಯಾತಿಯ ರಿಷಬ್ ಶೆಟ್ಟಿ, ಈಗ ಜಾಗತಿಕ ಮಟ್ಟದ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರತಿಷ್ಠಿತ ʻಫೋರ್ಬ್ಸ್ ಇಂಡಿಯಾʼ ರಿಲೀಸ್ ಮಾಡಿರುವ ದೇಶದ ಟಾಪ್ 100 ಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ, ಸ್ಯಾಂಡಲ್‌ವುಡ್‌ನ ಕೀರ್ತಿಪತಾಕೆಯನ್ನ ದೇಶ-ವಿದೇಶಗಳಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಯಾರೂ ಮಾಡದ ತ್ರಿವಳಿ ಸಾಧನೆ ಈ ಬಾರಿಯ ʻಫೋರ್ಬ್ಸ್ ಪಟ್ಟಿʼಯಲ್ಲಿ ರಿಷಬ್ ಶೆಟ್ಟಿ ಅವರ ಸೇರ್ಪಡೆ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವಿಶಿಷ್ಟವಾದದ್ದು. ನಟ, ನಿರ್ದೇಶಕ ಹಾಗೂ ಬರಹಗಾರ.. ಈ ಮೂರೂ ವಿಭಾಗಗಳಲ್ಲಿ ಜಂಟಿಯಾಗಿ ಆಯ್ಕೆಯಾದ ದೇಶದ ಏಕೈಕ ಸೆಲೆಬ್ರಿಟಿ ಎಂಬ ಸಾರ್ವಕಾಲಿಕ ದಾಖಲೆಯನ್ನ ರಿಷಬ್ ಬರೆದಿದ್ದಾರೆ. ಭಾರತದ ಬೇರಾವ ಭಾಷೆಯ ಸೂಪರ್‌ಸ್ಟಾರ್‌ಗೂ ಸಾಧ್ಯವಾಗದ ಈ ವಿಶಿಷ್ಟ ಮನ್ನಣೆಯನ್ನ ಕನ್ನಡದ ನಟ ಪಡೆದಿರುವುದು ಇಡೀ ಕರ್ನಾಟಕ ಸಂಭ್ರಮಿಸುವಂತೆ ಮಾಡಿದೆ.
ʻಹೊಂಬಾಳೆ ಫಿಲ್ಮ್ಸ್ʼ ಲಾಂಛನದಲ್ಲಿ ಮೂಡಿಬಂದ ಪೌರಾಣಿಕ ಪ್ರೀಕ್ವೆಲ್ 'ಕಾಂತಾರ: ಚಾಪ್ಟರ್ 1' ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡು, ₹800 ಕೋಟಿಗೂ ಅಧಿಕ ಗಳಿಕೆ ಮಾಡಿ ಧೂಳೆಬ್ಬಿಸಿತ್ತು. 2025ರ ಅತ್ಯಂತ ಯಶಸ್ವಿ ಪ್ರಮುಖ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದ ಈ ಸಿನಿಮಾ, ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ʻಛಾವಾʼದ ಗಳಿಕೆಯನ್ನೂ ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ ಅಗ್ರಸ್ಥಾನಕ್ಕೆ ಸೇರಿತು.
ಸಂಸ್ಕೃತಿ ಮತ್ತು ಕಲೆಯ ಜಾಗತಿಕ ಯಶಸ್ಸು ಕರಾವಳಿಯ ಸ್ಥಳೀಯ ಜನಪದ, ದೈವಾರಾಧನೆ ಮತ್ತು ಪ್ರಕೃತಿ-ಮಾನವನ ನಡುವಿನ ಸಂಘರ್ಷದ ಕಥಾವಸ್ತುವನ್ನ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ತೆರೆಗೆ ತಂದಿದ್ದು ಈ ಸಿನಿಮಾದ ಹೆಗ್ಗಳಿಕೆ. ಅಂತಾರಾಷ್ಟ್ರೀಯ ವಿಮರ್ಶಕರ ಮೆಚ್ಚುಗೆ ಗಳಿಸಿದ ಈ ಸಿನಿಮಾ ಭಾರತೀಯ ಸಂಸ್ಕೃತಿಯ ಸತ್ವವನ್ನ ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸಿತು.
ಸ್ಯಾಂಡಲ್‌ವುಡ್ ಇತಿಹಾಸದ ಹೊಸ ಮೈಲಿಗಲ್ಲು ಸಿನಿಮಾದ ಈ ಅಪಾರ ಯಶಸ್ಸು ʻಹೊಂಬಾಳೆ ಫಿಲ್ಮ್ಸ್ʼ ಸಂಸ್ಥೆಯ ಮೌಲ್ಯವನ್ನ ಹೆಚ್ಚಿಸುವುದರ ಜೊತೆಗೆ ರಿಷಬ್ ಶೆಟ್ಟಿ ಅವರನ್ನ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ನಟ, ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿದೆ. ನೈಜ ಸ್ಥಳೀಯ ಕಥೆಗಳನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ದೇಶದ ಟಾಪ್ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ರಿಷಬ್ ಶೆಟ್ಟಿ ಅವರ ಸಾಧನೆ, ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲಾಗಿದೆ.

