ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್‌ನೊಂದಿಗಿನ ಯುದ್ಧದ ನಡುವೆ ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗಾಜಾದತ್ತ ಗಮನವಹಿಸಿದ್ದು, ಗಾಜಾದಲ್ಲಿ ಹಮಾಸ್ ಮತ್ತು ಇತರ ಸಶಸ್ತ್ರ ಗುಂಪುಗಳ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ತಮ್ಮ ಗಾಜಾ ಶಾಂತಿ ಮಂಡಳಿ ಒಪ್ಪಂದಕ್ಕೆ ಬಂದಿದೆ ಎಂದು ಘೋಷಿಸಿದ್ದು, ಈ ಒಪ್ಪಂದ ಐತಿಹಾಸಿಕವಾಗಿದ್ದು ಶಾಶ್ವತ ಶಾಂತಿ ಹಾಗೂ ಭದ್ರತೆಯತ್ತ ಒಂದು ಸ್ಮರಣೀಯ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಗಾಜದಲ್ಲಿ ಹಮಾಸ್ ಪಡೆಗಳ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಒಪ್ಪಂದ
ಇರಾನ್‌ನಲ್ಲಿ ತಮ್ಮ ಆಕ್ರಮಣಕಾರಿ ದಾಳಿಗಳ ನಡುವೆ ಇಸ್ರೇಲ್ ಹಾಗೂ ಹಮಾಸ್ ಸಂಘರ್ಷ ಅಂತ್ಯದ ಬಳಿಕ ತಾವೂ ರೂಪಿಸಿದ್ದ ಗಾಜಾ ಶಾಂತಿ ಒಪ್ಪಂದದ ಪ್ರಮುಖ ಗುರಿಯಾಗಿರುವ ಗಾಜಾದಲ್ಲಿ ಹಮಾಸ್ ಪಡೆಗಳ ನಿಶ್ಶಸ್ತ್ರೀಕರಣದ ಕುರಿತು ಗುರುವಾರ(ಜು.30) ತಡರಾತ್ರಿ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯ ಮೂಲಕ ಮಹತ್ವದ ಘೋಷಣೆ ಮಾಡಿದ್ದು, "ಇಂದು(ಜು.30) ಶಾಂತಿ ಮಂಡಳಿಯು ಗಾಜಾದಲ್ಲಿ ಹಮಾಸ್ ಮತ್ತು ಇತರ ಎಲ್ಲಾ ಸಶಸ್ತ್ರ ಗುಂಪುಗಳ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕಾಗಿ ಐತಿಹಾಸಿಕ ಒಪ್ಪಂದವನ್ನು ತಲುಪಿದೆ. ಇದು ಶಾಶ್ವತ ಶಾಂತಿ ಮತ್ತು ಸುರಕ್ಷತೆಯ ಕಡೆಗೆ ಒಂದು ಸ್ಮರಣೀಯ ಹೆಜ್ಜೆಯಾಗಿದೆ" ಎಂದು ತಿಳಿಸಿದ್ದಾರೆ. ಅಲ್ಲದೆ, "ಈ ಒಪ್ಪಂದವು ಗಾಜ ಪ್ರದೇಶವನ್ನು ಹೊಸ ಪ್ಯಾಲೇಸ್ತೀಯನ್ ಸರ್ಕಾರ ಆಳುವತ್ತಾ ನಿರ್ಣಾಯಕ ಹೆಜ್ಜೆಯಾಗಲಿದ್ದು, ಪ್ಯಾಲೆಸ್ತೀನಿಯನ್ ಜನರಿಗೆ ಸಹಾಯ ಮಾಡಲು ಶಾಂತಿ ಮಂಡಳಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಇಸ್ರೇಲ್ ಅರ್ಹವಾದ ಭದ್ರತೆಯನ್ನು ಒದಗಿಸಲಿದ್ದು, ಗಾಜಾವನ್ನು ಇನ್ನು ಮುಂದೆ ಭಯೋತ್ಪಾದಕ ದಾಳಿಗಳಿಗೆ ನೆಲೆಯಾಗಿ ಬಳಸಲಾಗದಂತೆ ತಡೆಯಲಿದೆ" ಎಂದು ತಿಳಿಸಿದ್ದಾರೆ.
ಗಾಜದಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯಲಿದೆ
ಮುಂದುವರೆದಂತೆ "ಟ್ರಂಪ್ 20-ಅಂಶಗಳ ಯೋಜನೆಯ ಅನುಷ್ಠಾನದಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲು. ಒಪ್ಪಂದವನ್ನು ಎಚ್ಚರಿಕೆಯಿಂದ ರಚನಾತ್ಮಕ ಹಂತಗಳಲ್ಲಿ ಕೈಗೊಳ್ಳಲಾಗುವುದು. ನಿಶ್ಶಸ್ತ್ರೀಕರಣ ಪೂರ್ಣಗೊಂಡಂತೆ, ಇಸ್ರೇಲಿ ಪಡೆಗಳು ಹಿಂದೆ ಸರಿಯುತ್ತವೆ ಮತ್ತು ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ ಹೊಸ ಪ್ಯಾಲೆಸ್ತೀನಿಯನ್ ಪೊಲೀಸ್ ಪಡೆಗಳೊಂದಿಗೆ ಕೆಲಸ ಮಾಡಿ ಗಾಜಾ ತನ್ನ ನಿವಾಸಿಗಳು ಮತ್ತು ಅದರ ನೆರೆಹೊರೆಯವರಿಗೆ ಸುರಕ್ಷಿತವಾಗಿರಲು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಒಪ್ಪಂದದ ಪ್ರಕಾರ, ಗಾಜಾ ಅಂತಿಮವಾಗಿ ತನ್ನ ಜನರಿಗೆ ಸೇವೆ ಸಲ್ಲಿಸುವ ಹೊಸ ಪ್ಯಾಲೆಸ್ತೀನಿಯನ್ ಸರ್ಕಾರದ ಕೈಯಲ್ಲಿರುತ್ತದೆ" ಎಂದು ಹೇಳಿದ್ದಾರೆ.ಟ್ರಂಪ್ ಘೋಷಣೆ ಖಚಿತಪಡಿಸಿದ ಹಮಾಸ್
ಟ್ರಂಪ್ ಘೋಷಣೆ ಬೆನ್ನಲ್ಲೇ, ಈ ಕುರಿತು ಹಮಾಸ್ ಅಧಿಕಾರಿಗಳು ಶಸ್ತ್ರಾಸ್ತ್ರಗಳು ಮತ್ತು ಇಸ್ರೇಲಿ ಪಡೆಗಳ ಹಿಂತೆಗೆದುಕೊಳ್ಳುವಿಕೆ ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡ ಒಪ್ಪಂದವನ್ನು ಇಸ್ರೇಲ್‌ನೊಂದಿಗೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದು, "ಗಾಜಾದಿಂದ ಇಸ್ರೇಲಿ ಪಡೆಗಳನ್ನು ಕ್ರಮೇಣ ಹಿಂತೆಗೆದುಕೊಳ್ಳುವ ಬಗ್ಗೆ ತಿಳುವಳಿಕೆಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಹಮಾಸ್ ಶಸ್ತ್ರಾಸ್ತ್ರಗಳನ್ನು ಕೈಬಿಡಲು ಸಜ್ಜಾಗಿದೆ. ಆದಾಗ್ಯೂ, ಮಧ್ಯವರ್ತಿಗಳು ಮತ್ತು ಶಾಂತಿ ಮಂಡಳಿಯು ಇಸ್ರೇಲ್ ಒಪ್ಪಂದದ ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸುತ್ತದೆ ಎಂದು ಹಮಾಸ್ ನಿರೀಕ್ಷಿಸುತ್ತದೆ" ಎಂದು ತಿಳಿಸಿರುವುದಾಗಿ AFP ವರದಿ ಮಾಡಿದೆ.ಗಾಜಾಶಾಂತಿ ಒಪ್ಪಂದಕ್ಕೆ ಸಹಾಯ ಮಾಡಿದ ರಾಷ್ಟ್ರಗಳಿಗೆ ಟ್ರಂಪ್ ಧನ್ಯವಾದ!
ಇಸ್ರೇಲ್-ಗಾಜಾ ನಡುವಿನ ವರ್ಷಗಳ ಯುದ್ಧದ ಬಳಿಕ ಕೊನೆಗೂ ಅಮೆರಿಕಾ ಮಧ್ಯಸ್ಥಿಕೆಯಲ್ಲಿ 2025ರ ಅಕ್ಟೋಬರ್ 7ರಂದು ಗಾಜಶಾಂತಿ ಒಪ್ಪಂದ ಮಾಡಿಕೊಳ್ಳಾಲಾಗಿತ್ತು. ಅಂದಿನಿಂದಲೂ ಹಮಾಸ್ ನಿಶ್ಶಸ್ತ್ರೀಕರಣ ಒಂದು ದೊಡ್ಡ ಸಮಸ್ಯೆಯಾಗಿದ್ದು, ಸದ್ಯ ಈ ಕುರಿತು ಒಪ್ಪಂದವಾಗಿದೆ. ಇನ್ನು, ಈ ಕುರಿತಂತೆ ಮಧ್ಯಸ್ಥಿಕೆ ವಹಿಸಿದ ರಾಷ್ಟ್ರಗಳಾದ ಈಜಿಪ್ಟ್, ಕತಾರ್ ಮತ್ತು ಟರ್ಕಿ ದೇಶಗಳಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದು, "ಅಕ್ಟೋಬರ್ 7 ರಂದು ಗಾಜಾದಿಂದ ಹೊರಹೊಮ್ಮಿದ ಬೆದರಿಕೆಯನ್ನು ಪುನರ್ನಿರ್ಮಿಸಲು ಬಿಡುವುದಿಲ್ಲ. ಒಂದು ವರ್ಷದ ಹಿಂದೆ ಹಿಂಸಾತ್ಮಕ ಯುದ್ಧ, ಮಾನವೀಯ ಬಿಕ್ಕಟ್ಟು ಮತ್ತು ಒತ್ತೆಯಾಳುಗಳನ್ನು ಕ್ರೂರ ಸೆರೆಯಲ್ಲಿಡಲಾಗಿತ್ತು. ಆದರೆ, ಇದೀಗ ನಾವು ಐತಿಹಾಸಿಕ ಪ್ರಗತಿಯನ್ನು ಸಾಧಿಸಿದ್ದೇವೆ ಮತ್ತು ಈ ಕುರಿತಂತೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗಿದೆ" ಎಂದು ತಿಳಿಸಿದ್ದಾರೆ.
