Dailyhunt
ಗರ್ಭಪಾತಕ್ಕೆ ಸಮಯದ ಮಿತಿ: ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ

ಗರ್ಭಪಾತಕ್ಕೆ ಸಮಯದ ಮಿತಿ: ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ

Vijay Karnataka 2 weeks ago

ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆಯರು 20 ವಾರಗಳ ನಂತರವೂ ಗರ್ಭಪಾತ ಮಾಡಿಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಹದಿನೈದು ವರ್ಷದ ಬಾಲಕಿಯ 30 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆದುಹಾಕಲು ಅವಕಾಶ ನೀಡಿದ ಆದೇಶವನ್ನು ರದ್ದುಗೊಳಿಸಬೇಕೆಂದು ಏಮ್ಸ್‌, ಕ್ಯುರೇಟಿವ್‌ ಅರ್ಜಿ ಸಲ್ಲಿಸಿತ್ತು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ದ್ವಿಸದಸ್ಯ ನ್ಯಾಯಪೀಠವು, ''ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿದ ಪಕ್ಷದಲ್ಲಿ ಗರ್ಭಪಾತಕ್ಕೆ ಸಮಯದ ಮಿತಿ ಇರಬಾರದು. ಕಾನೂನು ಎಂಬುದು ಕಾಲಕ್ಕೆ ಅನುಗುಣವಾಗಿ ವಿಕಸನಗೊಳ್ಳುತ್ತಿರಬೇಕು. ಕಾಲಮಿತಿ ನಿರ್ಬಂಧ ಇರದಂತೆ ಗರ್ಭಪಾತ ಸಂಬಂಧಿತ ಕಾನೂನಿಗೆ ತಿದ್ದುಪಡಿ ತರುವುದನ್ನು ಪರಿಗಣಿಸಿ,'' ಎಂದು ಕೇಂದ್ರಕ್ಕೆ ಸೂಚನೆ ಕೊಟ್ಟಿದೆ.

''ಇದು ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ. 15 ವರ್ಷದ ಬಾಲಕಿಯ ಅನಗತ್ಯ ಗರ್ಭಧಾರಣೆಯಾಗಿದೆ. ಅವಳು ಈಗ ಓದುತ್ತಿರಬೇಕು, ಆದರೆ, ನಾವು ಅವಳನ್ನು ತಾಯಿಯಾಗುವಂತೆ ಒತ್ತಾಯಿಸುತ್ತಿದ್ದೇವೆ. ಇಂಥ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆಯು ಜೀವನಪರ್ಯಂತ ನೋವು ಮತ್ತು ಆಘಾತ ಅನುಭವಿಸಧಿಬೇಕಾಗುತ್ತದೆ. ಹೀಗಾಗಿ, ಗರ್ಭಿಣಿಗೆ ಶಾಶ್ವತ ಆರೋಗ್ಯ ಸಮಸ್ಯೆಗಳು ಎದುರಾಗದಿದ್ದರೆ, ಗರ್ಭಪಾತಕ್ಕೆ ಅವಕಾಶ ನೀಡಬೇಕು,'' ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

''ದತ್ತು ಪಡೆಯಲು ದೇಶದಲ್ಲಿ ಸಾಕಷ್ಟು ಮಕ್ಕಳಿವೆ. ಆದರೆ, ಬೀದಿಗಳಲ್ಲಿ ಬದುಕುತ್ತಿರುವ ಅನಾಥ ಮಕ್ಕಳನ್ನು ಗುರಿಯಾಗಿಸಿಕೊಂಡು ಮಾಫಿಯಾಗಳು ನಡೆಯುತ್ತಿವೆ. ನಾವು ಇಂಥ ಮಕ್ಕಳ ಬಗ್ಗೆಯೂ ಗಮನಹರಿಸಬೇಕಿದೆ. ಇದು 15 ವರ್ಷದ ಮಗುವಿನ ಅನಪೇಕ್ಷಿತ ಗರ್ಭಧಾರಣೆಯಾಗಿದೆ,'' ಎಂದು ಕೋರ್ಟ್‌ ಹೇಳಿದೆ.

ಚೈಲ್ಡ್‌ ವರ್ಸಸ್‌ ಚೈಲ್ಡ್‌

ವಿಚಾರಣೆ ವೇಳೆ ಏಮ್ಸ್‌ ವೈದ್ಯರೊಬ್ಬರು, ''ಇದು ಮಗು ಮತ್ತು ಭ್ರೂಣದ ನಡುವಿನ ಪ್ರಶ್ನೆಯಲ್ಲ. ಮಗು ಮತ್ತು ಮಗುವಿನ ನಡುವಿನ ಪ್ರಶ್ನೆಯಾಗಿದೆ,'' ಎಂದರು. ಏಮ್ಸ್‌ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರು, ''ಈಗ ಗರ್ಭಪಾತಕ್ಕೆ ಅವಕಾಶ ನೀಡಿದರೆ ಆ ಹೆಣ್ಣು ಮಗುವಿನ ಜೀವಕ್ಕೆ ಅಪಾಯ ಎದುರಾಗಬಹುದು. ಜೀವನ ಪರ್ಯಂತ ಆರೋಗ್ಯ ಸಮಸ್ಯೆಗಳು ಬರಬಹುದು. ಮುಂದೆ ಮಕ್ಕಳಾಗದಿರುವ ಸಾಧ್ಯತೆಯೂ ಇದೆ. ಹುಟ್ಟುವ ಮಗುವನ್ನು ದತ್ತು ನೀಡುವ ಆಯ್ಕೆಯನ್ನೂ ಪರಿಗಣಿಸಬಹುದು. ಭ್ರೂಣಕ್ಕೆ 30 ವಾರ ಆಗಿರುವ ಕಾರಣ ಗರ್ಭಪಾತ ಸಾಧ್ಯವಿಲ್ಲ,'' ಎಂದರು.

ಕೌನ್ಸೆಲಿಂಗ್‌ ನಡೆಸಿ

ಆಗ ಕೋರ್ಟ್‌, ಅಂತಿಮ ನಿರ್ಧಾರವು ಸಂತ್ರಸ್ತೆ ಹಾಗೂ ಆಕೆಯ ಪೋಷಕರ ಕೈಯಲ್ಲೇ ಇರಬೇಕು ಎಂದು ಸ್ಪಷ್ಟಪಡಿಸಿತು. ಆದರೆ ಈ ನಿರ್ಧಾರಕ್ಕೆ ವೈದ್ಯಕೀಯ ಮತ್ತು ಮಾನಸಿಕ ತಜ್ಞರ ಸಲಹೆ ಅಗತ್ಯವಿದೆ ಎಂದು ಹೇಳಿ ಕುಟುಂಬದೊಂದಿಗೆ ಸೂಕ್ತ ಕೌನ್ಸೆಲಿಂಗ್‌ ನಡೆಸುವಂತೆ ಏಮ್ಸ್‌ಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ನಿಗದಿಪಡಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka