Dailyhunt
ಗೆದ್ದು ಬಂದರೆ 2 ಸಿಲಿಂಡರ್‌ ಉಚಿತ; ಅಸ್ಸಾಂನಲ್ಲಿ ʻಟಫ್‌ ಟಾಸ್ಕ್‌ʼ ತೊಗೊಂಡ್ರಾ ಹೀಮಂತ ಬಿಸ್ವಾ ಶರ್ಮಾ?

ಗೆದ್ದು ಬಂದರೆ 2 ಸಿಲಿಂಡರ್‌ ಉಚಿತ; ಅಸ್ಸಾಂನಲ್ಲಿ ʻಟಫ್‌ ಟಾಸ್ಕ್‌ʼ ತೊಗೊಂಡ್ರಾ ಹೀಮಂತ ಬಿಸ್ವಾ ಶರ್ಮಾ?

Vijay Karnataka 1 week ago

ಗುವಹಾಟಿ: ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ನಿನ್ನೆ ದುಧೋನಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, "ಅಸ್ಸಾಂನಲ್ಲಿ ಯುಸಿಸಿ ಜಾರಿ ಖಚಿತ" ಎಂದು ಭರವಸೆ ನೀಡಿದ್ದರು.

ಇದೀಗ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಕೂಡ ರಾಜ್ಯದ ಜನತೆಗೆ ವಿಶೇಷವಾದ ವಾಗ್ದಾನವನ್ನು ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಜಿ ಬಿಕ್ಕಟ್ಟು ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಿಕ್ಕಟ್ಟಿನ ಮಧ್ಯೆ ಹೀಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪುನರಾಯ್ಕೆಯಾದರೆ, ರಾಜ್ಯದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಎರಡು ಉಚಿತ ಸಿಲಿಂಡರ್‌ ನೀಡುವುದಾಗಿ ಘೋಷಿಸಿದ್ದಾರೆ.

ಇಂದು (ಏ.4-ಶನಿವಾರ) ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಹೀಮಂತ ಬಿಸ್ವಾ ಶರ್ಮಾ, "ಅಸ್ಸಾಂನಲ್ಲಿ ನಮ್ಮ ಸರ್ಕಾರ ಪುನರಾಯ್ಕೆಯಾದರೆ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಿದೆ. ಇದರಲ್ಲಿ ಒಂದು ಬಿಹು ಮೊದಲು ಮತ್ತು ಇನ್ನೊಂದು ದುರ್ಗಾ ಪೂಜೆ ಮೊದಲು ನೀಡಲಾಗುವುದು. ನೀವು ಇದಕ್ಕೆ ಹಣ ಪಾವತಿಸಬೇಕಾಗಿಲ್ಲ. ನಿಮ್ಮ ಮಾಮಾ (ಹೀಮಂತ ಬಿಸ್ವಾ ಶರ್ಮಾ ಅವರನ್ನು ಪ್ರೀತಿಯಿಂದ ಕರೆಯುವ ಪದ) ಇದರ ಹಣ ಪಾವತಿಸುತ್ತಾರೆ" ಎಂದು ಭರವಸೆ ನೀಡಿದರು.


ಏತನ್ಮಧ್ಯೆ, ಕೇಂದ್ರ ಸರ್ಕಾರ ಹೊರಡಿಸಿದ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ಪಾಲಿಸದ ಕಾರಣಕ್ಕೆ, ಅಸ್ಸಾಂನಲ್ಲಿ ಐದು ಎಲ್‌ಪಿಜಿ ವಿತರಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

"ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕ್ರಿಯಾ ಯೋಜನೆಗೆ ಅನುಗುಣವಾಗಿ, ತೈಲ ಮಾರುಕಟ್ಟೆ ಕಂಪನಿಗಳ ಸಮನ್ವಯದೊಂದಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಲ್‌ಪಿಜಿ ಸರಬರಾಜಿನ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಕೈಗೊಳ್ಳಲಾಗುತ್ತಿದೆ. ವಿತರಣಾ ಪದ್ಧತಿಗಳು ಮತ್ತು ಅನುಸರಣೆ ಮಾನದಂಡಗಳಿಗೆ ಸಂಬಂಧಿಸಿದ ಕೆಲವು ಅಕ್ರಮಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ರಾಜ್ಯದಲ್ಲಿ ಎಲ್‌ಪಿಜಿಯ ಸಾಕಷ್ಟು ದಾಸ್ತಾನು ಲಭ್ಯವಿದ್ದು, ದೇಶೀಯ ಗ್ರಾಹಕರು ಶೇ. 100ರಷ್ಟು ಹಂಚಿಕೆಯನ್ನು ಪಡೆಯುತ್ತಿದ್ದಾರೆ" ಎಂದು ಅಸ್ಸಾಂ ಸರ್ಕಾರ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಅಸ್ಸಾಂ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಎಲ್‌ಪಿಜಿ ಕೊರತೆ ಆತಂಕದ ನಡುವೆ ಇರಾನ್‌ ಮುಚ್ಚಿರುವ ಹಾರ್ಮುಜ್‌ ಜಲಸಂಧಿಯಿಂದ ಭಾರತದ 8 ಹಡಗುಗಳು ಬಂದಿರುವ ಮಾಹಿತಿ, ಭಾರತದ ಯಶಸ್ವಿ ರಾಜತಾಂತ್ರಿಕ ಮಾತುಕತೆಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka