Dailyhunt Logo
  • Light mode
    Follow system
    Dark mode
    • Play Story
    • App Story
Google Trends: 'ಲಾಕ್‌ ಅಪ್ ಸೀಸನ್ 2' ವಿನ್ನರ್ ಆದ ಶ್ರೇಯಾ ಕಾಲ್ರಾ: ಸಿಕ್ಕ ಬಹುಮಾನ ಹಣ ಇಷ್ಟೊಂದಾ?

Google Trends: 'ಲಾಕ್‌ ಅಪ್ ಸೀಸನ್ 2' ವಿನ್ನರ್ ಆದ ಶ್ರೇಯಾ ಕಾಲ್ರಾ: ಸಿಕ್ಕ ಬಹುಮಾನ ಹಣ ಇಷ್ಟೊಂದಾ?

Vijay Karnataka 3 months ago

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ 'ಲಾಕ್ ಅಪ್: ಸಚ್ ಯಾ ಸಜಾ' ಸೀಸನ್ 2ಗೆ ಅದ್ಧೂರಿ ತೆರೆಬಿದ್ದಿದೆ. 'ಲಾಕ್ ಅಪ್‌ 2' ಮುಕ್ತಾಯಗೊಂಡಿದ್ದು, ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಶ್ರೇಯಾ ಕಾಲ್ರಾ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೊದಲ ರನ್ನರ್ ಅಪ್ ಅರ್ಥಾತ್ ಎರಡನೇ ಸ್ಥಾನದಲ್ಲಿ ಶಿವಾಂಗಿ ಜೋಶಿ ಇದ್ದರೆ, ಮೂರನೇ ಸ್ಥಾನ (ಎರಡನೇ ರನ್ನರ್ ಅಪ್‌) ಯೋಗೇಶ್ ರಾವತ್ ಪಾಲಾಗಿದೆ.

ಇದೇ ಕಾರಣದಿಂದ ಪ್ರಸ್ತುತ 'ಲಾಕ್ ಅಪ್ ಸೀಸನ್ 2 ವಿನ್ನರ್' ಗೂಗಲ್ ಟ್ರೆಂಡ್ಸ್‌ನಲ್ಲಿ ಟ್ರೆಂಡ್ ಆಗುತ್ತಿದೆ.

ಶ್ರೇಯಾ ಕಾಲ್ರಾಗೆ ಸಿಕ್ಕ ಬಹುಮಾನ ಎಷ್ಟು?

'ಲಾಕ್ ಅಪ್ ಸೀಸನ್ 2' ವಿನ್ನರ್ ಶ್ರೇಯಾ ಕಾಲ್ರಾಗೆ ಟ್ರೋಫಿ ಜೊತೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ಹಣ ಲಭಿಸಿದೆ. 'ಬಿಗ್ ಬಾಸ್' ಅಂತ ದೊಡ್ಡ ರಿಯಾಲಿಟಿ ಶೋಗೆ 50 ಲಕ್ಷ ರೂಪಾಯಿ ಬಹುಮಾನ ಇದೆ. ಇದಕ್ಕಾಗಿ 100 ದಿನಗಳ ಕಾಲ ದೊಡ್ಮನೆಯಲ್ಲಿ ಸ್ಪರ್ಧಿಗಳು ಲಾಕ್ ಆಗಿರಬೇಕು. ಆದರೆ, 'ಲಾಕ್ ಅಪ್‌ ಸೀಸನ್ 2' ನಡೆದಿದ್ದು ಕೇವಲ 6 ವಾರಗಳು ಮಾತ್ರ. ಜಸ್ಟ್ 42 ದಿನಗಳ ಕಾಲ 'ಲಾಕಪ್‌'ನಲ್ಲಿದ್ದು ವಿನ್ ಆದ ಸ್ಪರ್ಧಿ ಶ್ರೇಯಾ ಕಾಲ್ರಾಗೆ 1 ಕೋಟಿ ರೂಪಾಯಿ ಪ್ರೈಝ್ ಮನಿ ಲಭಿಸಿದೆ.

ವಿನ್ನರ್ ಆಯ್ಕೆ ಆಗಿದ್ದು ಹೇಗೆ?

ರಿತೇಶ್ ದೇಶಮುಖ್ ಮತ್ತು ಫರಾ ಖಾನ್ ನಿರೂಪಣೆ ಹೊಂದಿದ್ದ 'ಲಾಕ್ ಅಪ್ ಸೀಸನ್ 2' ಗ್ರ್ಯಾಂಡ್ ಫಿನಾಲೆ ಸಾಕಷ್ಟು ಕುತೂಹಲದಿಂದ ಕೂಡಿತ್ತು. ಮಾಜಿ ಸ್ಪರ್ಧಿಗಳ ಜೊತೆಗೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಚಿತ್ರರಂಗದ ಗಣ್ಯರು ಜ್ಯೂರಿಯಾಗಿ ಭಾಗವಹಿಸಿ, ಸ್ಪರ್ಧಿಗಳನ್ನು ಪ್ರಶ್ನಿಸುವ ಮೂಲಕ ವಿಜೇತರ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಪ್ 3 ತಲುಪುವ ಮುನ್ನವೇ ಹೊರಬಿದ್ದ ರಾಮ್ ಕಪೂರ್, ಶಿಲ್ಪಾ ಶಿಂಧೆ!

ಈ ಸೀಸನ್‌ನ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದ್ದ ಹಿಂದಿ ಕಿರುತೆರೆಯ ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಟಾಪ್ 3 ತಲುಪುವ ಮುನ್ನವೇ ಎಲಿಮಿನೇಟ್ ಆಗಿದ್ದು ವೀಕ್ಷಕರಿಗೆ ಅಚ್ಚರಿ ಮೂಡಿಸಿತು. ಫಿನಾಲೆಯ ಮೊದಲ ಟಾಸ್ಕ್‌ನಲ್ಲಿ ಟಾಪ್ 5 ಸ್ಪರ್ಧಿಗಳಾದ ರಾಮ್ ಕಪೂರ್, ಶಿಲ್ಪಾ ಶಿಂಧೆ, ಶ್ರೇಯಾ ಕಾಲ್ರಾ, ಶಿವಾಂಗಿ ಜೋಶಿ ಮತ್ತು ಯೋಗೇಶ್ ರಾವತ್ ಪಝಲ್ ಸವಾಲನ್ನು ಎದುರಿಸಿದರು. ಹೆಚ್ಚು ತಪ್ಪು ಭಾಗಗಳನ್ನು ಜೋಡಿಸಿದ ಸ್ಪರ್ಧಿ ಔಟ್ ಆದಂತೆ. ಈ ಹಂತದಲ್ಲಿ ರಾಮ್ ಕಪೂರ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ನಂತರ ನಡೆದ ಮತ್ತೊಂದು ಸವಾಲಿನಲ್ಲಿ ಸ್ಪರ್ಧಿಗಳು 'ಟರ್ಮಿನೇಟೆಡ್' ಎಂದು ಬರೆದಿದ್ದ ಬಾಕ್ಸ್ ಆಯ್ಕೆ ಮಾಡಿಸುವ ತಂತ್ರವನ್ನು ಬಳಸಬೇಕಾಗಿತ್ತು. ಯೋಗೇಶ್ ಮತ್ತು ಇತರರ ತಂತ್ರದ ಪರಿಣಾಮವಾಗಿ ಶಿಲ್ಪಾ ಶಿಂಧೆ 'ಟರ್ಮಿನೇಟೆಡ್' ಬಾಕ್ಸ್ ಆಯ್ಕೆ ಮಾಡಿಕೊಂಡು ನಾಲ್ಕನೇ ಸ್ಥಾನದಲ್ಲಿ ಎಲಿಮಿನೇಟ್ ಆದರು.

ಮಾಧ್ಯಮ ಮತ್ತು ಜ್ಯೂರಿ ಕಡೆಯಿಂದ ಕಠಿಣ ಪ್ರಶ್ನೆಗಳು

ಟಾಪ್ 3 ಪ್ರವೇಶಿಸಿದ ಶ್ರೇಯಾ ಕಾಲ್ರಾ, ಶಿವಾಂಗಿ ಜೋಶಿ ಮತ್ತು ಯೋಗೇಶ್ ರಾವತ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಜ್ಯೂರಿ ಸದಸ್ಯರು ತೀಕ್ಷ್ಣವಾಗಿ ಪ್ರಶ್ನಿಸಿದರು. ತಮ್ಮ ದುರಹಂಕಾರ ಮತ್ತು ವರ್ತನೆ ಬಗ್ಗೆ ಯೋಗೇಶ್ ರಾವತ್‌ಗೆ ಪ್ರಶ್ನೆಗಳು ಎದುರಾದರೆ, ಶಿವಾಂಗಿ ಜೋಶಿಗೆ ಹರ್ಷದ್ ಚೋಪ್ರಾ ಅವರೊಂದಿಗೆ ಹೊಂದಿದ್ದ ಸಂಬಂಧ ಹಾಗೂ ಫೈನಲಿಸ್ಟ್ ಸ್ಥಾನಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸ್ಪಷ್ಟನೆ ಕೇಳಲಾಯಿತು. ಇನ್ನೊಂದೆಡೆ, ಶ್ರೇಯಾ ಕಾಲ್ರಾ ಅವರ ಆಟವನ್ನು ಜ್ಯೂರಿ ಪ್ರಶಂಶಿಸಿದರು. ಇದೇ ವೇಳೆ ಶ್ರೇಯಾ ಕಾಲ್ರಾ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಪ್ರಶ್ನಿಸಲಾಯಿತು.

ಶ್ರೇಯಾ ಕಾಲ್ರಾಗೆ ಬಹುಮತದ ಬೆಂಬಲ

ಜ್ಯೂರಿ ಸದಸ್ಯರು, ಮಾಜಿ ಸ್ಪರ್ಧಿಗಳು ಹಾಗೂ ಜೈಲರ್‌ಗಳ ಮತದಾನದ ಆಧಾರದ ಮೇಲೆ ಮೊದಲು ಯೋಗೇಶ್ ರಾವತ್ ಎಲಿಮಿನೇಟ್ ಆದರು. ಬಳಿಕ ಶ್ರೇಯಾ ಕಾಲ್ರಾ ಮತ್ತು ಶಿವಾಂಗಿ ಜೋಶಿ ನಡುವೆ ಅಂತಿಮ ಪೈಪೋಟಿ ನಡೆಯಿತು. ಅತ್ಯಧಿಕ ಮತಗಳನ್ನು ಪಡೆದ ಶ್ರೇಯಾ ಕಾಲ್ರಾ ಅವರನ್ನು ನಿರ್ಮಾಪಕಿ ಏಕ್ತಾ ಕಪೂರ್ ವಿನ್ನರ್ ಆಗಿ ಘೋಷಿಸಿದರು. ಇದರೊಂದಿಗೆ ಟ್ರೋಫಿ ಹಾಗೂ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಶ್ರೇಯಾ ಕಾಲ್ರಾ ತಮ್ಮದಾಗಿಸಿಕೊಂಡರು.

ಗೂಗಲ್ ಟ್ರೆಂಡ್ಸ್

'ಲಾಕ್ ಅಪ್ ಸೀಸನ್ 2' ಶೋ ಅಂತ್ಯಗೊಂಡಿದ್ದು, ವಿನ್ನರ್ ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಜನ ಸರ್ಚ್ ಮಾಡುತ್ತಿದ್ದಾರೆ. 'ವಿನ್ನರ್ ಆಫ್ ಲಾಕಪ್', 'ವಿನ್ನರ್ ಆಫ್ ಲಾಕ್ ಅಪ್ ಸೀಸನ್ 2', 'ಹೂ ಈಸ್ ಲಾಕಪ್ ಸೀಸನ್ 2 ವಿನ್ನರ್' ಇತ್ಯಾದಿ ಕೀವರ್ಡ್ಸ್ ಬಳಸಿ ಶೋ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ಹೆಚ್ಚು ಜನ ಗೂಗಲ್‌ನಲ್ಲಿ ಜಾಲಾಡುತ್ತಿದ್ದಾರೆ.

 ಗೂಗಲ್ ಟ್ರೆಂಡ್ಸ್ ಲಿಂಕ್

ಮೊದಲ ದಿನದಿಂದಲೇ ಗಮನ ಸೆಳೆದ ಶ್ರೇಯಾ

ಶೋ ಆರಂಭವಾದ ಮೊದಲ ದಿನದಿಂದಲೇ ತಮ್ಮ ನೇರ ನುಡಿ ಮತ್ತು ದಿಟ್ಟ ವ್ಯಕ್ತಿತ್ವದಿಂದ ಶ್ರೇಯಾ ಕಾಲ್ರಾ ಗಮನ ಸೆಳೆದಿದ್ದರು. 'ಬದ್ತಮೀಜ್' ಎಂಬ ಟ್ಯಾಗ್‌ನೊಂದಿಗೆ ಮನೆಗೆ ಪ್ರವೇಶಿಸಿದ್ದ ಶ್ರೇಯಾ, ಪ್ರೀಮಿಯರ್ ಸಂಚಿಕೆಯಲ್ಲೇ ರಾಮ್ ಕಪೂರ್ ಜೊತೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದರು. ಆರಂಭದಲ್ಲಿ ಮನೆಯೊಳಗೆ ಹೆಚ್ಚು ಸ್ನೇಹಿತರಿಲ್ಲದಿದ್ದರೂ, ತಮ್ಮ ಅಭಿಪ್ರಾಯವನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಅಕಾಂಕ್ಷಾ ಚೌಧರಿ, ಯೋಗೇಶ್ ರಾವತ್, ಶಿವಾಂಗಿ ಜೋಶಿ ಹಾಗೂ ಹರ್ಷದ್ ಚೋಪ್ರಾ ಅವರೊಂದಿನ ಶ್ರೇಯಾ ಕಾಲ್ರಾ ಭಿನ್ನಾಭಿಪ್ರಾಯಗಳು ಶೋನ ಪ್ರಮುಖ ಆಕರ್ಷಣೆಯಾಗಿದ್ದವು.

ಅಕಾಂಕ್ಷಾ ಚಮೋಲಾ ಅವರ ಸೀಕ್ರೆಟ್‌ನ ಜಗಜ್ಜಾಹೀರು ಮಾಡಿದ ಟೀಕೆಗೂ ಗುರಿಯಾಗಿದ್ದ ಶ್ರೇಯಾ, ತಮ್ಮ ಆಟದ ಶೈಲಿಯಿಂದ ನಿರಂತರವಾಗಿ ಸುದ್ದಿಯಲ್ಲಿದ್ದರು. ಶಿಲ್ಪಾ ಶಿಂಧೆ ಮತ್ತು ಮಾಧುರಿ ಜೈನ್ ಗ್ರೋವರ್ ಮಾತ್ರ ಅವರ ಆಪ್ತ ಸ್ನೇಹಿತರಾಗಿದ್ದರು.

ವಿವಾದಗಳ ನಡುವೆಯೂ ಗೆಲುವಿನ ನಗೆ

ವಿವಾದಗಳು, ನೇರ ಮಾತು ಮತ್ತು ಆಕ್ರಮಣಕಾರಿ ಆಟದ ಶೈಲಿಯಿಂದ ಕೆಲವರು ಈ ಕಾರ್ಯಕ್ರಮವನ್ನು 'ಶ್ರೇಯಾ ಕಲ್ರಾ ಶೋ' ಎಂದೇ ಕರೆಯುವ ಮಟ್ಟಿಗೆ ಪ್ರಭಾವ ಬೀರಿದ್ದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka