ಐಪಿಎಲ್ 2026ರ ಸೀಸನ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕನ್ನಡಿಗ ಮನೀಶ್ ಪಾಂಡೆ ಇದೀಗ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಐಪಿಎಲ್ ನ 19 ಸೀಸನ್ ಗಳನ್ನೂ ಆಡಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಮೂರನೇಯವರಾಗಿ ಸೇರಿಕೊಂಡಿದ್ದಾರೆ.
ಇದು ಈಗ ಗೂಗಲ್ ನಲ್ಲಿ ಟ್ರೆಂಟ್ ಆಗಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 3ರ ಭಾನುವಾರದಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯದಲ್ಲಿ ಮನೀಶ್ ಪಾಂಡೆ ಅವರು ಗಾಯಾಳು ರಮಣ್ ದೀರ್ ಸಿಂಗ್ ಅವರ ಬದಲಿಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದರು. ಐಪಿಎಲ್ ನಲ್ಲಿ ಮೊದಲ ಶತಕ ಗಳಿಸಿದ ದಾಖಲೆ ಮನೀಶ್ ಪಾಂಡೆ ಅವರ ಹೆಸರಿನಲ್ಲಿದೆ.
ಸಿಗದ ಬ್ಯಾಟಿಂಗ್ ಅವಕಾಶ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅವರ ಮಾಂತ್ರಿಕ ಬೌಲಿಂಗ್ ಅನ್ನು ಎದುರಿಸಲಾಗದೆ 19 ಓವರ್ ಗಳಲ್ಲಿ 165 ರನ್ ಗಳಿಗ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಜಿಂಕ್ಯ ರಹಾನೆ ಮತ್ತು ಅಂಗ್ ಕ್ರಿಶ್ ರಘುವಂಶಿ ಅವರ ಶತಕದ ಜೊತೆಯಾಟದ ನೆರವಿನಿಂದ 18.2 ಓವರ್ ಗಳಲ್ಲೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯಗಳಿಸಿತು. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಶ್ ಪಾಂಡೆಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ 36 ವರ್ಷದ ಮನೀಶ್ ಪಾಂಡೆ 19 ಸೀಸನ್ ನಲ್ಲಿ ಆಡಿದ ಅಪೂರ್ವ ಗೌರವಕ್ಕೆ ಪಾತ್ರರಾದರು.(ಸ್ಕೋರ್ ಕಾರ್ಡ್)
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸಹ ಈ ಸೀಸನ್ ನಲ್ಲಿ ಆಡಿದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಕ್ರಿಕೆಟಿಗರಾಗಲಿದ್ದಾರೆ. ಆದರೆ ಗಾಯದ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವರು ಈವರೆಗೂ ಕಾಣಿಸಿಕೊಂಡಿಲ್ಲ.
ಗೂಗಲ್ ನಲ್ಲಿ ಟ್ರೆಂಡ್

ಐಪಿಎಲ್ ಪ್ರಾರಂಭ ಆದಾಗಿನಿಂದಲೂ ಆಡುತ್ತಿರುವ ಮನೀಶ್ ಪಾಂಡೆ ಅವರಿಗೆ ಈ ಬಾರಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಬಗ್ಗ ಅನುಮಾನವಿತ್ತು. ಆದರ ಇದೀಗ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡು ದಾಖಲೆ ನಿರ್ಮಿಸಿರುವುದು ಗೂಗಲ್ ನಲ್ಲಿ ಟ್ರೆಂಡ್ ಆಗಿದೆ. ಒಡಿಶಾದಲ್ಲಿ ಶೇಕಡಾ 100, ಬಿಹಾರದಲ್ಲಿ ಶೇಕಡಾ83, ಪಶ್ಚಿಮ ಬಂಗಾಳದಲ್ಲಿ ಶೇಕಡಾ 75, ರಾಜಸ್ಥಾನದಲ್ಲಿ ಶೇಕಡಾ 72 ಮತ್ತು ಜಾರ್ಖಂಡ್ ನಲ್ಲಿ ಶೇಕಡಾ 71ರಷ್ಟು ಮಂದಿ ಅವರ ಬಗ್ಗೆ ಜವರು ಗೂಗಲ್ ನಲ್ಲಿ ಮಾಹಿತಿ ಸರ್ಚ್ ಮಾಡಿದ್ದಾರೆ.
7 ತಂಡಗಳಲ್ಲಿ ಆಡಿದ ಅನುಭವ
ಮನೀಶ್ ಪಾಂಡೆ ಅವರು ಈವರೆಗೆ ಒಟ್ಟು 7 ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. 2008ರ ಉದ್ಘಾಟನಾ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರು ಆಡಿದ್ದರು. 2009ರಲ್ಲಿ ಆರ್ ಸಿಬಿ ತೆಕ್ಕೆಗೆ ಬಿದ್ದ ಅವರು ಮುಂದಿನ ಸೀಸನ್ ಅನ್ನೂ ಬೆಂಗಳೂರು ಫ್ರಾಂಚೈಸಿಯಲ್ಲೇ ಕಳೆದಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದೆ ಇದ್ದ ಹಿನ್ನೆಲೆಯಲ್ಲಿ ರಿಲೀಸ್ ಆದರು. 20011ರಲ್ಲಿ ಪುಣೆ ವಾರಿಯರ್ಸ್ ತಂಡವನ್ನು ಸೇರಿಕೊಂಡ ಅವರು ನಿರಂತರ 3 ವರ್ಷ ಅಲ್ಲೇ ಇದ್ದರು.2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡ ಮನೀಶ್ ಆ ವರ್ಷ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಡಿದ 16 ಪಂದ್ಯಗಳಿಂದ 30.84 ಸರಾಸರಿಯಲ್ಲಿ 401 ರನ್ ಪೇರಿಸಿದರು. ಅಲ್ಲಿ ನಾಲ್ಕು ಸೀಸನ್ ಆಡಿದ ಅವರು 2018ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾದರು. 2021ರವರೆಗೂ ಅಲ್ಲಿದ್ದ ಅವರು 2022ರಲ್ಲಿ ಲಖನೌ ಸೂಪರ್ ಜೈಂಟ್ಸ್ , 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪರ ಆಡಿದರು. 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡರು.
ಒಟ್ಟಾರೆ ಐಪಿಎಲ್ ನಲ್ಲಿ 175 ಪಂದ್ಯಗಳನ್ನು ಆಡಿರುವ ಅವರು 29.41 ಸರಾಸರಿಯಲ್ಲಿ 3942 ರನ್ ಗಳನ್ನು ಕಲೆ ಹಾಕಿದ್ದಾರೆ. ಮುಂದಿನ ಪಂದ್ಯದಲ್ಲೂ ಅವರಿಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದ್ದು ಅವರಿಂದ ದೊಡ್ಡ ಇನ್ನಿಂಗ್ಸ್ ಅನ್ನು ಕನ್ನಡಿಗರು ಎದುರು ನೋಡುತ್ತಿದ್ದಾರೆ.

