ಬೆಂಗಳೂರು: ಅರ್ಹರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ತಲುಪಬೇಕೆಂಬ ಆಶಯದಿಂದ ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣ ಕಡ್ಡಾಯಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣ ಪ್ರಕ್ರಿಯೆಯು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯ ಅಭಿವೃದ್ಧಿಪಡಿಸಿದ ಮೊಬೈಲ್ ಆಯಪ್ ಮೂಲಕ ನಡೆಯಲಿದೆ.
ಮನೆ-ಮನೆ ಸಮೀಕ್ಷೆ ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅನುಷ್ಠಾನಗೊಳ್ಳಲಿದೆ. ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಅನ್ವಯವೇ ಕಟ್ಟುನಿಟ್ಟಾಗಿ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಕೈಗೊಳ್ಳಬೇಕು ಎಂದು ಸರಕಾರ ಹೊರಡಿಸಿದ ಆದೇಶದಲ್ಲಿ ವಿವರಿಸಲಾಗಿದೆ.
ಆದೇಶದಲ್ಲಿ ಏನಿದೆ?:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಾದರಿ ನಮೂನೆಗಳನ್ನು ಸಿದ್ಧಪಡಿಸಿ, ಮಾಸ್ಟರ್ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ತರಬೇತಿ ನೀಡಿ, ಇದೇ 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಬೇಕು. ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಸಮಿತಿಗಳು, ಸ್ಥಳೀಯ ಮಟ್ಟದ ಸಮಿತಿಗಳು ಪರಿಶೀಲನಾ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ಯಾರಂಟಿ ಸಮಿತಿ ಸದಸ್ಯರನ್ನು ಸಜ್ಜುಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್‌ಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಸಿಬ್ಬಂದಿಯನ್ನು ಗಣತಿದಾರರನ್ನಾಗಿ ನೇಮಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ವಾರ್ಡ್ ಹಾಗೂ ಗ್ರಾಮವಾರು ಸ್ಪಷ್ಟ ನಿಯೋಜನೆಯೊಂದಿಗೆ ಗಣತಿದಾರರಿಗೆ ಲಿಖಿತ ಆದೇಶಗಳನ್ನು ನೀಡಬೇಕು ಎಂದೂ ತಿಳಿಸಲಾಗಿದೆ.ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಬೇಕು. ಫಲಾನುಭವಿಗಳು ಅಥವಾ ಅವರ ಕುಟುಂಬದ ಸದಸ್ಯರು ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸಬೇಕು. ಯಾವುದೇ ಕಾರಣಕ್ಕೂ ಮನೆ ಭೇಟಿ ತಪ್ಪಿಸಕೂಡದು. ಗಣತಿದಾರರು ಮೊಬೈಲ್ ಆಯಪ್ ಬಳಸಿ ಫಲಾನುಭವಿಯ ಭಾವಚಿತ್ರ ಅಥವಾ ಮನೆಯ ಫೋಟೊ ಹಾಗೂ ಜಿಪಿಎಸ್ ಮ್ಯಾಪಿಂಗ್ ಮಾಡಬೇಕು. ಸ್ಥಳದಲ್ಲೇ ಮುಖ ದೃಢೀಕರಣ ಹಾಗೂ ಮತದಾರರ ಗುರುತಿನ ಚೀಟಿ ವಿವರಗಳನ್ನು ಮೊಬೈಲ್ ಆಯಪ್‌ನಲ್ಲಿ ದಾಖಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.(ಗೃಹಲಕ್ಷ್ಮೀ ಯೋಜನೆಗೆ 3 ವರ್ಷ)

