ಇಸ್ಲಾಮಾಬಾದ್: ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಕೇವಲ ಆರ್ಥಿಕವಾಗಿ ಅಷ್ಟೇ ದಿವಾಳಿಯಾಗಿಲ್ಲ, ಬದಲಿಗೆ ಅದು ನೈತಿಕವಾಗಿಯೂ ಸಂಪೂರ್ಣವಾಗಿ ಅಧಃಪತನಗೊಂಡಿದೆ. ಜಗತ್ತಿಗೆ ಪಾಕಿಸ್ತಾನದ ಅಸ್ತಿತ್ವದ ಬಗ್ಗೆ ಬಣ್ಣ ಬಣ್ಣದ ಮಾತುಗಳನ್ನಾಡುವ ಅದರ ನಾಯಕರು, ತಮ್ಮದೇ ಸಂಬಂಧಿಗಳ ದುಷ್ಕೃತ್ಯಗಳಿಂದ ತಲೆ ಎತ್ತಿ ಓಡಾದಂತಹ ಪರಿಸ್ಥಿತಿಯನ್ನು ತಮಗೆ ತಾವೇ ನಿರ್ಮಿಸಿಕೊಂಡಿದ್ದಾರೆ.
ಇತ್ತೀಚಿಗೆ ಲಾಹೋರ್‌ನಲ್ಲಿ ಪುರುಷರ ಗುಂಪೊಂದು ನೆದರ್‌ಲ್ಯಾಂಡ್ಸ್ ಮತ್ತು ವೆನೆಜುವೆಲಾ ಮೂಲದ ಇಬ್ಬರು ಮಹಿಳೆಯರನ್ನು ಅಪಹಿರಿಸಿ, ಗ್ಯಾಂಗ್‌ರೇಪ್ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ
ಇಶಾಕ್ ದಾರ್ ಅವರ ಸಂಬಂಧಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮುಹಮ್ಮದ್ ರಜಾ ದಾರ್ ಎಂಬ ವ್ಯಕ್ತಿ ರಕ್ತ ಸಂಬಂಧದಲ್ಲಿ ಇಶಾಕ್ ದಾರ್ ಅವರ ಮೊಮ್ಮಗನಾಗಬೇಕು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಇಶಾಕ್ ದಾರ್ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಇಶಾಕ್ ದಾರ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಾಕಿಸ್ತಾನದ ಸೆನೆಟರ್ ಒಬ್ಬರು ಒತ್ತಾಯಿಸಿದ್ದಾರೆ.
ಪಂಜಾಬ್‌ನಲ್ಲಿನ ಫೆಡರಲ್ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರವು, ಇಶಾಕ್ ದಾರ್ ಸಂಬಂಧಿಯನ್ನು ರಕ್ಷಿಸುತ್ತಿದೆ ಎಂದು ಸೆನೆಟರ್ ಫೈಸಲ್ ವಾವ್ಡಾ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಇಶಾಕ್ ದಾರ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ವಾವ್ಡಾ, "ಸಂಬಂಧಿತ ವಿದೇಶಿ ರಾಯಭಾರ ಕಚೇರಿಯ ಹಸ್ತಕ್ಷೇಪದ ನಂತರವೇ ರಜಾ ದಾರ್ ಅವರನ್ನು ಬಂಧಿಸಲಾಗಿದೆ. ಇಂತಹ ಗಂಭೀರ ಆರೋಪಗಳ ನಂತರ, ಇಶಾಕ್ ದಾರ್ ಉಪಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರಾಗಿ ವಿಶ್ವದ ಮುಂದೆ ಪಾಕಿಸ್ತಾನವನ್ನು ಪ್ರತಿನಿಧಿಸುವುದನ್ನು ಹೇಗೆ ಮುಂದುವರಿಸಬಹುದು?" ಎಂದು ಪ್ರಶ್ನಿಸಿದ್ದಾರೆ.
ಕಳೆದ ಜೂನ್ 29 ರಂದು ನೆದರ್‌ಲ್ಯಾಂಡ್ಸ್‌ನ ಮತ್ತು ವೆನೆಜುವೆಲಾ ಮೂಲದ ಇಬ್ಬರು ಮಹಿಳೆಯರನ್ನು, ಪುರುಷರ ಗುಂಪೊಂದು ಅಪಹರಿಸಿ ಲಾಹೋರ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಪ್ರಕರಣಕ್ಕೆ ಸಮಬಂಧಿಸಿದಂತೆ ಲಾಹೋರ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬನಾದ ಮುಹಮ್ಮದ್ ರಜಾ ದಾರ್, ಪಾಕಿಸ್ತಾನ ಉಪಪ್ರಧಾನಿ ಇಶಾಕ್ ದಾರ್ ಅವರ ಮೊಮ್ಮಗ ಎಂಬುದು ಸ್ಪಷ್ಟವಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಲಾಹೋರ್ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ನಾಲ್ವರನ್ನು ಲಾಹೋರ್ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ತನಿಖೆಯ ಸಮಯದಲ್ಲಿ, ರಜಾ ದಾರ್ ಕಳೆದ ವರ್ಷ ಸಿಂಗಾಪುರದಲ್ಲಿ ಇಬ್ಬರು ಮಹಿಳೆಯರನ್ನು ಭೇಟಿಯಾಗಿದ್ದರು ಮತ್ತು ಅವರು ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಪಾಲುದಾರರಾಗಿದ್ದರು. ಇಬ್ಬರಿಗೂ ಪಾಕಿಸ್ತಾನಕ್ಕೆ ಭೇಟಿ ನೀಡಲು, ರಜಾ ದಾರ್ ಅವರೇ ವ್ಯಾಪಾರ ವೀಸಾ ವ್ಯವಸ್ಥೆಗಳನ್ನು ಮಾಡಿದ್ದರು ಎಂಬುದು ತಿಳಿದುಬಂದಿದೆ.
ಒಟ್ಟಿನಲ್ಲಿ ವಿದೇಶಿ ಮಹಿಳೆಯರ ಅಪಹರಣ ಮತ್ತು ಗುಂಪು ಅತ್ಯಾಚಾರ ಪ್ರಕರಣದಲ್ಲಿ, ಪಾಕಿಸ್ತಾನ ಉಪಪ್ರಧಾನಿ ಇಶಾಕ್ ದಾರ್ ಮೊಮ್ಮಗನ ಹೆಸರು ಕೇಳಿಬಂದಿರುವುದು, ಪಾಕಿಸ್ತಾಣನ ನೈತಿಕವಾಗಿ ಅದೆಷ್ಟು ಕುಸಿದಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

