Dailyhunt
ಹಾರ್ಮುಜ್‌ ಜಲಸಂಧಿ ತೆರೆಸುವ 35 ದೇಶಗಳ ಪ್ರಯತ್ನಕ್ಕೆ ಕೈಜೋಡಿಸುವ ಯುಕೆ ಮನವಿಗೆ ಭಾರತ ಓಕೆ

ಹಾರ್ಮುಜ್‌ ಜಲಸಂಧಿ ತೆರೆಸುವ 35 ದೇಶಗಳ ಪ್ರಯತ್ನಕ್ಕೆ ಕೈಜೋಡಿಸುವ ಯುಕೆ ಮನವಿಗೆ ಭಾರತ ಓಕೆ

Vijay Karnataka 1 week ago

ಹೊಸದಿಲ್ಲಿ: ತೈಲ ಬೆಲೆ ಏರಿಕೆಗೆ ಕಾರಣವಾಗಿರುವ ಪ್ರಮುಖ ಹಾರ್ಮುಜ್ ಜಲಸಂಧಿ ಮರುತೆರೆಯುವಿಕೆ ಮಾರ್ಗಗಳನ್ನು ಅನ್ವೇಷಿಸುವ 35 ದೇಶಗಳ ಸಭೆಯಲ್ಲಿ ಭಾಗವಹಿಸಲು ಯುಕೆ ಭಾರತವನ್ನು ಆಹ್ವಾನಿಸಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾ ರಣಧೀರ್‌ ಜೈಸ್ವಾಲ್‌, "ಇಂದು (ಏ.2-ಗುರುವಾರ) ಸಂಜೆ ನಡೆಯಲಿರುವ ಸಭೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

"ಯುಕೆ ಕಡೆಯವರು ಹಾರ್ಮುಜ್ ಜಲಸಂಧಿಯ ಕುರಿತು ಮಾತುಕತೆ ನಡೆಸಲು, ಭಾರತ ಸೇರಿದಂತೆ ಹಲವಾರು ದೇಶಗಳನ್ನು ಆಹ್ವಾನಿಸಿದ್ದಾರೆ. ನಮ್ಮ ಕಡೆಯಿಂದ,ವಿದೇಶಾಂಗ ಕಾರ್ಯದರ್ಶಿ ಇಂದು ಸಂಜೆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ" ಎಂದು ರಣಧೀರ್‌ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಇತರ ಉತ್ಪನ್ನಗಳನ್ನು ಸಾಗಿಸುವ ನಮ್ಮ ಹಡಗುಗಳಿಗೆ ಅಡೆತಡೆಯಿಲ್ಲದ ಸಾಗಣೆ ಮತ್ತು ಸುರಕ್ಷಿತ ಸಾಗಣೆಯನ್ನು ಹೇಗೆ ಉತ್ತಮವಾಗಿ ಪಡೆಯಬಹುದು ಎಂಬುದನ್ನು ನೋಡಲು ನಾವು ಇರಾನ್ ಮತ್ತು ಅಲ್ಲಿನ ಇತರ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಕಳೆದ ಹಲವಾರು ದಿನಗಳಿಂದ ನಾವು ನಡೆಸುತ್ತಿರುವ ಈ ಸಂಭಾಷಣೆಯ ಮೂಲಕವೇ ನಮ್ಮ ಹಡಗುಗಳು ಹಾರ್ಮುಜ್‌ ದಾಟಿ ಬರುತ್ತಿವೆ" ಎಂದು ರಣಧೀರ್‌ ಜೈಸ್ವಾಲ್‌ ಹೇಳಿದರು. ಇರಾನ್‌ ರಾಯಭಾರ ಕಚೇರಿ "ಭಾರತೀಯ ಗೆಳೆಯರು ಸುರಕ್ಷಿತ ಕೈಗಳಲ್ಲಿದ್ದಾರೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


ಹಾರ್ಮುಜ್ ಜಲಸಂಧಿಯು ವಿಶ್ವ ಆರ್ಥಿಕತೆಗೆ ನಿರ್ಣಾಯಕವಾಗಿದೆ ಏಕೆಂದರೆ ಜಾಗತಿಕ ಇಂಧನ ಪೂರೈಕೆಯ ಶೇ. 20ರಷ್ಟು ಕಿರಿದಾದ ಜಲಮಾರ್ಗದ ಮೂಲಕ ಹಾದುಹೋಗುತ್ತದೆ. ಇಸ್ರೇಲ್ ಮತ್ತು ಯುಎಸ್ ದಾಳಿಯ ನಂತರ ಇರಾನ್ ಈ ಜಲಸಂಧಿಯನ್ನು ಮುಚ್ಚಿದೆ. ಭಾರತ
ಆಮದು ಮಾಡಿಕೊಳ್ಳುವ ಸುಮಾರು ಶೇ. 40ರಷ್ಟು ತೈಲ ಮತ್ತು ಶೇ. 50ರಷ್ಟು ದ್ರವೀಕೃತ ನೈಸರ್ಗಿಕ ಅನಿಲ ಹಾಗೂ ಮತ್ತು ಶೇ. 80ಕ್ಕಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಈ ಮಾರ್ಗದ ಮೂಲಕವೇ ಬರುತ್ತದೆ.

ಜಲಸಂಧಿಯನ್ನು ಪುನಃ ತೆರೆಯುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂದು ಹೇಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಇರಾನ್‌ಗೆ ಎಚ್ಚರಿಕೆ ನೀಡಿರುವ ಟ್ರಂಪ್‌, ಅದರ ಜೊತೆಯಲ್ಲೇ ತಮ್ಮ ಮಿತ್ರರ ವಿರುದ್ಧವೂ ಗುಡುಗಿದ್ದಾರೆ. "ಯುಕೆ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳು ತಮ್ಮದೇ ಆದ ತೈಲವನ್ನು ಪಡೆದುಕೊಳ್ಳಲಿ, ಅಮೆರಿಕ ಇನ್ನು ಮುಂದೆ ಅವರಿಗೆ ಸಹಾಯ ಮಾಡುವುದಿಲ್ಲ" ಎಂದು ಅಮೆರಿಕ ಅಧ್ಯಕ್ಷರು ಸೂಚ್ಯವಾಗಿ ಹೇಳಿದ್ದಾರೆ.

ಯುದ್ಧ ಪ್ರಾರಂಭವಾದಾಗಿನಿಂದ ಟ್ರಂಪ್ ಅವರ ವಾಗ್ದಾಳಿಗೆ ಗುರಿಯಾಗಿರುವ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, "ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೆನಡಾ ಮತ್ತು ಯುಎಇ ಸೇರಿದಂತೆ 35 ದೇಶಗಳು ಕಡಲ ಭದ್ರತೆಯನ್ನು ಪುನಃಸ್ಥಾಪಿಸಲು ಸಹಕರಿಸಲು ಒಪ್ಪಿಕೊಂಡ ಹೇಳಿಕೆಗೆ ಸಹಿ ಹಾಕಿವೆ" ಎಂದು ಹೇಳಿದ್ದಾರೆ.


ಸದ್ಯ ಹಾರ್ಮುಜ್‌ ಜಲಸಂಧಿ ತರೆಸುವ ಪ್ರಯತ್ನ ಆರಂಭಿಸಲಾಗಿದ್ದು, ಅದ ಮೊದಲ ಸಭೆಯು ಯುಕೆ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅದರ ನಂತರ ವಿವರಗಳನ್ನು ರೂಪಿಸಲು ಅಧಿಕಾರಿಗಳ ಕಾರ್ಯ ಮಟ್ಟದ ಸಭೆಗಳು ನಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka