ಹೊಸದಿಲ್ಲಿ/ಅಬುಧಾಬಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್)ಯಿಂದ ನಿರ್ಗಮಿಸಿರುವ ಸಂಯುಕ್ತ ಅರಬ್ ರಾಷ್ಟ್ರ ಒಕ್ಕೂಟ (ಯುಎಇ) ಜಾಗತಿಕ ತೈಲ ಸರಬರಾಜಿಗೆ ಹೊಸ ಮಾರ್ಗ ಕಂಡುಕೊಂಡಿದೆ. ಹರ್ಮುಜ್ ಜಲಸಂಧಿಯನ್ನು ತಪ್ಪಿಸಿ ಭಾರತ ಸೇರಿದಂತೆ ಜಗತ್ತಿಗೆ ತೈಲ ರಫ್ತು ಮಾಡಲು ರೂಪಿಸಲಾದ ಹೊಸ ಹಾದಿಯನ್ನು ಮೇ 1 ರಿಂದ ಅಧಿಕೃತವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಒಪೆಕ್‌ನಿಂದ ನಿರ್ಗಮಿಸಿರುವುದರಿಂದ ಯುಎಇ ಈಗ ತೈಲ ಉತ್ಪಾದನೆ ಮಿತಿ ನಿಯಂತ್ರಣದಿಂದ ಮುಕ್ತವಾಗಿದೆ. ಪೂರ್ಣ ಪ್ರಮಾಣದ ಕಚ್ಚಾ ತೈಲ ಉತ್ಪಾದಿಸುವ ಮೂಲಕ ಜಾಗತಿಕ ತೈಲ ಮಾರುಕಟ್ಟೆಗೆ ಸ್ವಯಂ ಮುರ್ಬನ್ ಕಚ್ಚಾ ತೈಲ ರಫ್ತು ಮಾಡಲು ಯೋಜನೆ ರೂಪಿಸಿದೆ. ಫುಜೈರಾ ಪೈಪ್‌ಲೈನ್ ಮೂಲಕ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಕಚ್ಚಾ ತೈಲ ರಫ್ತು ಮಾಡಲು ನಿರ್ಧರಿಸಿದೆ. ಅಮೆರಿಕ ದಾಳಿ ಬಳಿಕ ಹರ್ಮುಜ್ ಜಲಸಂಧಿ ಮೇಲಿನ ಇರಾನ್ ದಿಗ್ಭಂಧನದಿಂದ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿತ್ತು. ಹರ್ಮುಜ್ ಜಲಸಂಧಿಯ ಬಂಧ ತಪ್ಪಿಸಿ ತೈಲ ರಫ್ತಿಗೆ ಪರ್ಯಾಯ ಮಾರ್ಗ ಕಂಡುಕೊಂಡಿದೆ. ಅಬುಧಾಬಿಯ ಹಬ್ಶಾನ್ ಕರವಾಳಿಯಿಂದ ಫುಜೈರಾ ಬಂದರಿಗೆ ನಿರ್ಮಿಸಲಾದ ಫುಜೈರಾ ಪೈಪ್‌ಲೈನ್ ಬಳಸಿಕೊಳ್ಳಲು ಯುಎಇ ನಿರ್ಧರಿಸಿದೆ.
ಭಾರತಕ್ಕೇನು ಪ್ರಯೋಜನ?
ಫುಜೈರಾ ಬಂದರು ಮೂಲಕ ತೈಲ ಸರಬರಾಜು ಮಾಡುವ ಯುಎಇ ಉದ್ದೇಶದಿಂದ ಭಾರತದ ತೈಲ ಆಮದು ಹಾದಿ ಸುಗಮಗೊಳ್ಳಲಿದೆ. ಭಾರತೀಯ ವಾಣಿಜ್ಯ ಹಡಗುಗಳು ಹರ್ಮುಜ್ ಸಂಪರ್ಕಿಸದೇ ತೈಲವನ್ನು ತರಬಹುದಾಗಿದೆ.ಫುಜೈರಾ ಬಂದರು ಬಹುದೊಡ್ಡ ತೈಲ ಸಂಗ್ರಹಾಗಾರ ಹೊಂದಿದ್ದು, ಹಡಗುಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಹೊಂದಿದೆ. ಪ್ರಾದೇಶಿಕ ಸಂಘರ್ಷದ ಬಿಸಿಯಿಂದ ಮುಕ್ತವಾಗಿರುವ ಬಂದರಿನಿಂದ ತೈಲ ಸರಬರಾಜು ಸುಲಭವಾಗಲಿದೆ. ಭಾರತ ಸೇರಿದಂತೆ ಏಷ್ಯಾದ ಇತರೆ ದೇಶಗಳ ತೈಲ ಸರಬರಾಜು ಸರಪಳಿ ಬಲಗೊಳ್ಳಲಿದೆ.
ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಬಂಧ ಹೊಂದಿರುವ ಭಾರತ-ಯುಎಇ ನಡುವೆ ವಾರ್ಷಿಕ 200 ಶತಕೋಟಿ ಡಾಲರ್ ವ್ಯವಹಾರ ನಡೆಯುತ್ತಿದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ಯುಎಇ ಪಾಲು ಶೇ.10ರಷ್ಟಿದ್ದು, ಫುಜೈರಾ ಬಂದರು ಮೂಲಕ ಆಮದು ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಭಾರತ 3 ಶತಕೋಟಿ ಡಾಲರ್ ಮೌಲ್ಯದ ಎಲ್‌ಎನ್‌ಜಿ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು, ಯುಎಇ ತೈಲ ಕ್ಷೇತ್ರಗಳಿಂದ ಹೆಚ್ಚಿನ ಪ್ರಮಾಣದ ಆಮದು ನಿರೀಕ್ಷೆ ಹೊಂದಲಾಗಿದೆ.
ಏನಿದು ಫುಜೈರಾ ಪೈಪ್‌ಲೈನ್ ?
ಫುಜೈರಾ ಪೈಪ್‌ಲೈನ್ ಸುಮಾರು 406 ಕಿ.ಮೀ. ಉದ್ದವಿದೆ. ಪರ್ಶಿಯನ್ ಕೊಲ್ಲಿಯ ಅಬುಧಾಬಿಯ ಹಬ್ಶಾನ್ ಕರಾವಳಿಯಿಂದ ಆರಂಭವಾಗುವ ಪೈಪ್‌ಲೈನ್ ಒಮನ್ ಕೊಲ್ಲಿಯ ಫುಜೈರಾ ಬಂದರು ಸಂಪರ್ಕಿಸುತ್ತದೆ. ಫುಜೈರಾ ಬಂದರಿನಿಂದ ಬೇರೆಡೆ ಸುಲಭವಾಗಿ ತೈಲ ಸಾಗಿಸಬಹುದು. ಫುಜೈರಾ ಪೈಪ್ ಲೈನ್ 48 ಇಂಚು ವ್ಯಾಸ ಹೊಂದಿದ್ದು, ಪ್ರತಿ ದಿನ 15 ಲಕ್ಷ ಬ್ಯಾರಲ್ ತೈಲ ಸರಬರಾಜು ಮಾಡಬಹುದಾಗಿದೆ. 18 ಲಕ್ಷ ಬ್ಯಾರಲ್‌ಗೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಪುಜೈರಾ ಬಂದರಿನಲ್ಲಿ 110 ಮೀ. ವ್ಯಾಸದ ಎಂಟು ತೈಲ ಸಂಗ್ರಹ ಟ್ಯಾಂಕ್ಗಳಿದ್ದು, ಪ್ರತಿ ದಿನ 19 ಲಕ್ಷ ಬ್ಯಾರಲ್ ತೈಲವನ್ನು ರಫ್ತು ಮಾಡುವ ಸಾಮರ್ಥ್ಯವಿದೆ.

