ಬೆಂಗಳೂರು: ಹೊಸದಾಗಿ ಆರಂಭವಾಗಿರುವ ಹೊಸಪೇಟೆ - ಅರಸೀಕೆರೆ ಡೆಮು ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಟಿಕೆಟ್ ದರವನ್ನು ಗಣನೀಯವಾಗಿ ಕಡಿತಗೊಳಿಸಿದ್ದು, ಹೊಸಪೇಟೆಯಿಂದ ದಾವಣಗೆರೆಗೆ ಕೇವಲ 35 ರೂಪಾಯಿಗೆ ಪ್ರಯಾಣಿಸಬಹುದಾಗಿದೆ.
ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ಮೊದಲ ದಿನಗಳಲ್ಲಿ 'ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್' ದರ ವಿಧಿಸಲಾಗುತ್ತಿತ್ತು. ಇದರಿಂದಾಗಿ ಹೊಸಪೇಟೆ-ದಾವಣಗೆರೆ ನಡುವೆ ಬರೋಬ್ಬರಿ 85 ರೂ. ಟಿಕೆಟ್ ದರ ನಿಗದಿಯಾಗಿ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿತ್ತು. ಬಳ್ಳಾರಿ-ಹೊಸಪೇಟೆ-ದಾವಣಗೆರೆ ನಡುವೆ ಓಡಾಡುವ ಡೆಮು ರೈಲಿಗೆ ಸಾಮಾನ್ಯ ಪ್ಯಾಸೆಂಜರ್ ದರವನ್ನೇ ಪಡೆಯಲಾಗುತ್ತಿದೆ. ಅದೇ ಮಾದರಿಯಲ್ಲೇ ಈ ಹೊಸ ರೈಲಿಗೂ ದರ ನಿಗದಿಪಡಿಸಬೇಕು ಎಂದು 'ವಿಜಯನಗರ ರೈಲ್ವೆ ಬಳಕೆದಾರರ ಸಂಘ'ವು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಮೂಲಕ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರ ಗಮನ ಸೆಳೆದಿತ್ತು.
ತ್ವರಿತ ಸ್ಪಂದನೆ - ಹೊಸ ದರ ಜಾರಿ
ಸಂಘದ ಮನವಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಮಹಾಪ್ರಬಂಧಕರು, ದರ ತಾರತಮ್ಯವನ್ನು ಸರಿಪಡಿಸಲು ಆದೇಶಿಸಿದ್ದಾರೆ. ಪರಿಣಾಮವಾಗಿ ಹೊಸಪೇಟೆ-ದಾವಣಗೆರೆ ಟಿಕೆಟ್ ದರ 85 ರೂ.ನಿಂದ ನೇರವಾಗಿ 35 ರೂ.ಗೆ ಇಳಿಕೆಯಾಗಿದೆ.ಬಸ್ ಟಿಕೆಟ್ ದರಕ್ಕೆ ಹೋಲಿಸಿದರೆ 5 ಪಟ್ಟು ಕಡಿಮೆ
ಪ್ರಸ್ತುತ ಈ ಮಾರ್ಗದಲ್ಲಿ ಬಸ್ ಪ್ರಯಾಣ ದರ 170 ರೂ. ಇದ್ದು, ಅದಕ್ಕೆ ಹೋಲಿಸಿದರೆ ರೈಲು ಪ್ರಯಾಣವು ಅತ್ಯಂತ ಅಗ್ಗ ಹಾಗೂ ಆರಾಮದಾಯಕವಾಗಿದೆ. ಈ ಪರಿಷ್ಕೃತ ದರವು ಹೊಸಪೇಟೆ ಮತ್ತು ಅರಸೀಕೆರೆ ನಡುವೆ ರೈಲು ನಿಲುಗಡೆಯಾಗುವ ಎಲ್ಲಾ ನಿಲ್ದಾಣಗಳಿಗೂ ಅನ್ವಯವಾಗಲಿದೆ. ಕಡಿಮೆ ವೆಚ್ಚದ ಈ ರೈಲು ಸೌಲಭ್ಯವನ್ನು ವಿಜಯನಗರ, ಬಳ್ಳಾರಿ, ದಾವಣಗೆರೆ ಸೇರಿದಂತೆ ಮಾರ್ಗದ ಎಲ್ಲಾ ಭಾಗದ ಸಾರ್ವಜನಿಕರು ಮತ್ತು ಪ್ರಯಾಣಿಕರು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ವಿಜಯನಗರ ರೈಲ್ವೆ ಬಳಕೆದಾರರ ಸಂಘ ಮನವಿ ಮಾಡಿದೆ.ಪ್ರಮುಖ ನಿಲ್ದಾಣಗಳ ನಡುವೆ ಟಿಕೆಟ್ ದರ
- ಹೊಸಪೇಟೆ - ಕೊಟ್ಟೂರು: 25 ರೂ.
- ಹೊಸಪೇಟೆ - ದಾವಣಗೆರೆ: 35 ರೂ.
- ಹೊಸಪೇಟೆ - ಚಿಕ್ಕಜಾಜೂರು: 50 ರೂ.
- ಹೊಸಪೇಟೆ - ಕಡೂರು: 60 ರೂ.
- ಹೊಸಪೇಟೆ - ಅರಸೀಕೆರೆ: 65 ರೂ.
- ದಾವಣಗೆರೆ - ಅರಸೀಕೆರೆ: 40 ರೂ.
- ದಾವಣಗೆರೆ - ಕೊಟ್ಟೂರು: 25 ರೂ.
- ದಾವಣಗೆರೆ - ಹರಪನಹಳ್ಳಿ: 20 ರೂ.

