Dailyhunt Logo
  • Light mode
    Follow system
    Dark mode
    • Play Story
    • App Story
ಇ.ಡಿ ನಿಯಮಬಾಹಿರ ಜಪ್ತಿ ಆದೇಶಕ್ಕೆ ಹೈಕೋರ್ಟ್ ಬ್ರೇಕ್: ಮುಡಾ ನಿವೇಶನ ಮುಟ್ಟುಗೋಲು ಪ್ರಕ್ರಿಯೆ ರದ್ದು

ಇ.ಡಿ ನಿಯಮಬಾಹಿರ ಜಪ್ತಿ ಆದೇಶಕ್ಕೆ ಹೈಕೋರ್ಟ್ ಬ್ರೇಕ್: ಮುಡಾ ನಿವೇಶನ ಮುಟ್ಟುಗೋಲು ಪ್ರಕ್ರಿಯೆ ರದ್ದು

Vijay Karnataka 2 days ago

ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಕಾನೂನು ಪಾಲಿಸುತ್ತಿದ್ದೇವೆಂದು ತೋರಿಸಲು ಕಾನೂನಿನಲ್ಲಿರುವ ಪದಗಳನ್ನೇ ನಕಲು ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ''ಅಲ್ಲದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಹೊರಡಿಸಲಾಗುವ ಇಂತಹ ತಾತ್ಕಾಲಿಕ ಜಪ್ತಿ ಆದೇಶಗಳು ಕಾನೂನು ಪ್ರಕಾರ ಸಮರ್ಥನೀಯವಲ್ಲ,'' ಎಂದು ನ್ಯಾಯಪೀಠ ಹೇಳಿದೆ.

. ಈ ಹಿನ್ನೆಲೆಯಲ್ಲಿ ಮೈಸೂರಿನ ಜಯಮ್ಮ ಅವರ ಮುಡಾ ನಿವೇಶನವನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಇ.ಡಿ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ.

ಮೈಸೂರಿನ ಕೆ.ಜಿ. ಕೊಪ್ಪಲಿನ 70 ವರ್ಷದ ಜಯಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ, ಇ.ಡಿ ಅಧಿಕಾರಿಗಳು 2025ರ ಜೂನ್ 9ರಂದು ಅರ್ಜಿದಾರರ ಆಸ್ತಿಯನ್ನು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಮತ್ತು ಅದರ ಮುಂದುವರಿದ ಎಲ್ಲಾ ಪ್ರಕ್ರಿಯೆ ರದ್ದುಗೊಳಿಸಿದೆ.

''ಅಧಿಕಾರಿಗಳು ಕೇವಲ ಕಾಯಿದೆಯ ಸೆಕ್ಷನ್‌ 5(1)ರಲ್ಲಿರುವ ಅಂಶಗಳನ್ನು ಯಾಂತ್ರಿಕವಾಗಿ ಆದೇಶದಲ್ಲಿನಕಲು ಮಾಡಿದರೆ ಸಾಲದು. ಆಸ್ತಿಯನ್ನು ತಕ್ಷಣವೇ ಜಪ್ತಿ ಮಾಡದಿದ್ದರೆ ತನಿಖಾ ಪ್ರಕ್ರಿಯೆಗೆ ಹಿನ್ನಡೆಯಾಗುತ್ತದೆ ಎಂಬುದಕ್ಕೆ ಅಧಿಕಾರಿ ಬಳಿ ಸ್ಪಷ್ಟವಾದ ವಸ್ತುನಿಷ್ಠ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಇ.ಡಿ ಮುಟ್ಟುಗೋಲು ಹಾಕಿಕೊಂಡಿದ್ದ ನಿವೇಶನಗಳ ಖಾತೆ ಇನ್ನೂ ಜಯಮ್ಮ ಹೆಸರಿಗೆ ವರ್ಗಾವಣೆಯಾಗಿರಲಿಲ್ಲ. ಖಾತೆಯೇ ಆಗದ ಸ್ಥಿರಾಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ಹಸ್ತಾಂತರಿಸಲು ಸಾಧ್ಯವೇ ಇಲ್ಲದಿರುವಾಗ ಆಸ್ತಿ ಹಸ್ತಾಂತರವಾಗಿ ತನಿಖೆಗೆ ಧಕ್ಕೆಯಾಗುತ್ತದೆ ಎಂಬ ಇ.ಡಿ ಆತಂಕಕ್ಕೆ ಆಧಾರವಿಲ್ಲ,'' ಎಂದು ನ್ಯಾಯಪೀಠ ಹೇಳಿದೆ.

''ಆರಂಭಿಕ ಹಂತದ ತಾತ್ಕಾಲಿಕ ಜಪ್ತಿ ಆದೇಶವೇ ಕಾನೂನುಬದ್ಧವಾಗಿ ದೋಷಪೂರಿತವಾಗಿದ್ದಾಗ ಅದರ ಆಧಾರದ ಮೇಲೆ ನಂತರದ ಪ್ರಾಧಿಕಾರಗಳು ನೀಡುವ ದೃಢೀಕರಣ ಆದೇಶಗಳೂ ಅಸಿಂಧುಗೊಳ್ಳುತ್ತವೆ,'' ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಇ.ಡಿ ಆದೇಶವನ್ನು ರದ್ದುಗೊಳಿಸಿದೆ. ''ಅಲ್ಲದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್‌ 5(1)ರಡಿ ಸೂಕ್ತ ಕಾರಣ ಮತ್ತು ಅಗತ್ಯ ಸಂದರ್ಭಗಳು ಎದುರಾದರೆ ಕಾನೂನು ಚೌಕಟ್ಟಿನಲ್ಲಿಅರ್ಜಿದಾರರ ವಿರುದ್ಧ ಹೊಸದಾಗಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು,'' ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಜಯನಗರ ಲೇಔಟ್‌ ನಿರ್ಮಾಣಕ್ಕೆ ಅರ್ಜಿದಾರರಾದ ಜಯಮ್ಮ ಅವರ ಜಮೀನನ್ನು ಬಳಸಿಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಪರಿಹಾರದ ರೂಪದಲ್ಲಿ ಮುಡಾ ಜಯಮ್ಮಗೆ ಕೆಲವು ನಿವೇಶನಗಳನ್ನು ಕ್ರಯಪತ್ರದ ಮೂಲಕ ಮಂಜೂರು ಮಾಡಿತ್ತು. ಆದರೆ, ಈ ನಿವೇಶನಗಳ ಖಾತೆ ವರ್ಗಾವಣೆಗೆ ಕಂದಾಯ ಅಧಿಕಾರಿಗಳು ನಿರಾಕರಿಸಿದ್ದರು.

ಈ ನಡುವೆ, ಸ್ನೇಹಮಯಿ ಕೃಷ್ಣ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನನ್ವಯ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಅದರ ಬೆನ್ನಲ್ಲೇ ಇ.ಡಿ ಪ್ರಕರಣ ದಾಖಲಿಸಿಕೊಂಡು, ಜಯಮ್ಮಗೆ ಮಂಜೂರಾಗಿದ್ದ ನಿವೇಶನಗಳು 'ಅಪರಾಧದ ಮೂಲಕ ಗಳಿಸಿದ ಆಸ್ತಿ' ಎಂದು ಆರೋಪಿಸಿ ತಾತ್ಕಾಲಿಕ ಮುಟ್ಟುಗೋಲು ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಜಯಮ್ಮ ಹೈಕೋರ್ಟ್‌ ಮೆಟ್ಟಿಲೇರಿದ್ದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka