ಬೆಂಗಳೂರು: ಪೆಟ್ರೋಲ್ ದರ ಏರಿಕೆ ಮತ್ತು ಅಭಾವದ ಆತಂಕದ ಹಿನ್ನೆಲೆಯಲ್ಲಿ ಜನರು ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ಒಲವು ತೋರುತ್ತಿದ್ದಾರೆ. ಪರಿಣಾಮ, ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ನಗರದ 11 ಆರ್‌ಟಿಒ ಕಚೇರಿಗಳಲ್ಲಿ ಮಾರ್ಚ್ 31ರಂದು ಒಂದೇ ದಿನ 13 ಸಾವಿರಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿ ರಸ್ತೆಗಿಳಿದಿವೆ.
ಇದರಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಹೆಚ್ಚಿದೆ.
ಏ.1ರಿಂದ ಜಾರಿಯಾಗಿರುವ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯಿದೆಯಿಂದಾಗಿ ಇವಿ ವಾಹನಗಳ ಖರೀದಿ ಮತ್ತು ನೋಂದಣಿ ಹೆಚ್ಚಳವಾಗಿದೆ. ಇದಲ್ಲದೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಇಂಧನ ಕೊರತೆ ಉಂಟಾಗಿದೆ. ಇತ್ತೀಚೆಗಷ್ಟೆ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಂದ ಇವಿ ವಾಹನಗಳ ಖರೀದಿಯತ್ತ ಜನ ಮುಖ ಮಾಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸರಾಸರಿ ದೈನಂದಿನ ವಿದ್ಯುತ್ ವಾಹನಗಳ ನೋಂದಣಿಯಲ್ಲಿ ಶೇ.400ರಷ್ಟು ಹೆಚ್ಚಳವಾಗಿದೆ. 2026ರ ಜನವರಿಯಿಂದ ಈವರೆಗೆ ದಿನಕ್ಕೆ ಸರಾಸರಿ 267 ಇವಿ ವಾಹನಗಳನ್ನು ನೋಂದಾಯಿಸಲಾಗಿದೆ. ಕಳೆದ ವರ್ಷ ನಿತ್ಯ ಸರಾಸರಿ ಒಂದು ವಾಹನವಷ್ಟೇ ನೋಂದಣಿಯಾಗುತ್ತಿತ್ತು.
ಇವಿ ವಾಹನಗಳಿಗೆ ಹೊಸ ತೆರಿಗೆ ಪದ್ದತಿ
ಹೊಸ ತೆರಿಗೆ ಪದ್ಧತಿಯಡಿ 10 ಲಕ್ಷ ರೂ. ವರೆಗೆ ದರ ಹೊಂದಿರುವ ಇವಿ ಕಾರುಗಳು,ವಾಹನದ ಒಟ್ಟು ವೆಚ್ಚದ ಮೇಲೆ ಶೇ.5ರಷ್ಟು ಜೀವಿತಾವಧಿಯ ತೆರಿಗೆ ಪಾವತಿಸಬೇಕು. 10 ಲಕ್ಷದಿಂದ 25 ಲಕ್ಷ ರೂ. ಬೆಲೆಯ ಬ್ಯಾಟರಿ ಚಾಲಿತ ಕಾರುಗಳು ಶೇ. 8 ಹಾಗೂ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳು ನೋಂದಣಿ ಸಮಯದಲ್ಲಿ ವಾಹನದ ಒಟ್ಟು ವೆಚ್ಚದ ಶೇ. 10ರಷ್ಟು ಪಾವತಿಸಬೇಕಿದೆ. ರಾಜ್ಯದಲ್ಲಿ ಈವರೆಗೆ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಇವಿ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಜೀವಿತಾವಧಿವರೆಗೆ ಶೂನ್ಯ ರಸ್ತೆ ತೆರಿಗೆಗೆ ಒಳಪಟ್ಟಿವೆ. ಏ.1ರಿಂದ ಇದು ಬದಲಾಗಿದೆ.ರಾಜ್ಯದಲ್ಲಿನ ವಿದ್ಯುತ್ ವಾಹನಗಳ ನೋಂದಣಿ ಹೆಚ್ಚಳ
ಪ್ರಸಕ್ತ ವರ್ಷ ರಾಜ್ಯದಲ್ಲಿ ವಿದ್ಯುತ್ ವಾಹನಗಳ ನೋಂದಣಿ ಈಗಾಗಲೇ 50 ಸಾವಿರ ಗಡಿ ದಾಟಿದೆ. ಜನವರಿ ಮತ್ತು ಮಾರ್ಚ್ ನಡುವೆ ರಾಜ್ಯಾದ್ಯಂತ 54,379 ಹೊಸ ಇವಿ ವಾಹನಗಳು ನೋಂದಾಯಿಲ್ಪಟ್ಟಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 35 ಸಾವಿರಕ್ಕೂ ಹೆಚ್ಚು ವಾಹನಗಳು ನೋಂದಾಯಿಸಲ್ಪಟ್ಟಿದ್ದವು. ಕಳೆದ ವರ್ಷದ ಹೊಸ ವಾಹನ ನೋಂದಣಿ ದತ್ತಾಂಶಕ್ಕೆ ಹೋಲಿಸಿದರೆ ಈ ವರ್ಷ ಶೇ. 40ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದೇ ವರ್ಷದ ಮಾರ್ಚ್ ತಿಂಗಳೊಂದರಲ್ಲಿಯೇ ಅತ್ಯಧಿಕ 24 ಸಾವಿರ ಇವಿ ವಾಹನಗಳು ನೋಂದಾಯಿಸಲ್ಪಟ್ಟಿವೆ. ಹೊಸದಾಗಿ ನೋಂದಾಯಿಸಲ್ಪಟ್ಟ ಒಟ್ಟು ವಾಹನಗಳಲ್ಲಿ 13,000ಕ್ಕೂ ಹೆಚ್ಚು ಬೆಂಗಳೂರಿನಲ್ಲೇ ಇವೆ.
