ಹೊಸದಿಲ್ಲಿ: ಕಳೆದ ಹಲವು ತಿಂಗಳುಗಳಿಂದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧವು ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ದಿನನಿತ್ಯ ಕ್ಷಿಪಣಿಗಳ ಅಬ್ಬರ, ಡ್ರೋನ್‌ಗಳ ದಾಳಿ, ತೈಲ ಹಾಗೂ ಅನಿಲ ಬೆಲೆಗಳ ಏರಿಕೆ ಜಗತ್ತನ್ನು ಜರ್ಜರಿತಗೊಳಿಸಿದೆ.
ಆದರೆ ಈ ಕಾದಾಟದ ಪರಿಣಾಮ ಕೇವಲ ನೆಲ, ಜಲ, ಆಕಾಶಕ್ಕೆ ಸೀಮಿತವಾಗಿಲ್ಲ. ಬದಲಾಗಿ ಸಮುದ್ರದ ಆಳದಲ್ಲಿರುವ ಜಗತ್ತಿನ ಅತಿ ದೊಡ್ಡ ಇಂಟರ್ನೆಟ್ ಜಾಲಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ.
ಹೌದು, ಮಧ್ಯಪಾಚ್ಯದ ಭಾರತದ ಇಂಟರ್ನೆಟ್ ಸಂಪರ್ಕಕ್ಕೆ ಭಾರೀ ಕಂಟಕವಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ITU) ಅಂಕಿ-ಅಂಶಗಳ ಪ್ರಕಾರ, ಜಗತ್ತಿನ ಸುಮಾರು ಶೇ. 99ರಷ್ಟು ಇಂಟರ್ನೆಟ್ ಟ್ರಾಫಿಕ್, ಸಮುದ್ರ ತಳದ
ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಕೇಬಲ್‌ಗಳ ಮೂಲಕ ಹಾದುಹೋಗುತ್ತದೆ. ಭಾರತದ ಸಮುದ್ರಗಳಲ್ಲೂ ಈ ಆಪ್ಟಿಕಲ್ ಕೇಬಲ್‌ಗಳ ವಿಶಾಲ ಜಾಲ ಹರಡಿಕೊಂಡಿದೆ. ಇತ್ತೀಚಿನ AI ಶೃಂಗಸಭೆಯಲ್ಲಿ ಭಾರತ-ಅಮೆರಿಕ ಸಾಗರದಾಳದ ಕೇಬಲ್ ಸಂಪರ್ಕ ಯೋಜನೆ ಘೋಷಿಸಲಾಗಿದೆ.
ಪ್ರಸ್ತುತ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ಮೂಲಕ ಹಾದುಹೋಗುವ ಈ ನಿರ್ಣಾಯಕ ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳಿಗೆ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಯಾಗಿದೆ. ಇರಾನ್ ಇದುವರೆಗೂ ಅಧಿಕೃತವಾಗಿ ಈ ಕೇಬಲ್‌ಗಳ ಮೂಲಸೌಕರ್ಯದ ಮೇಲೆ ದಾಳಿ ಮಾಡುತ್ತೇವೆ ಎಂದು ಎಲ್ಲಿಯೂ ಬೆದರಿಕೆ ಹಾಕಿಲ್ಲ. ಆದರೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಇಂತದ್ದೊಂದು ಕೃತ್ಯಕ್ಕೆ ಕೈಹಾಕಬಹುದು ಎಂಬ ಆತಂಕ ಎದುರಾಗಿದೆ.
ಭಾರತದ ಆಪ್ಟಿಕಲ್ ಕೇಬಲ್ ಜಾಲ:
ಹೌತಿ ಬಂಡುಕೋರರು ಈ ಹಿಂದೆಯೂ ಅನೇಕ ಬಾರಿ ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಕತ್ತರಿಸುವ ಬೆದರಿಕೆ ಹಾಕಿದ ಉದಾಹರಣೆಗಳಿವೆ. ಈಗ ಇರಾನ್ ಪರವಾಗಿ ಯುದ್ಧರಂಗದಲ್ಲಿರುವ ಹೌತಿ ಬಂಡುಕೋರರು, ಈ ಆಪ್ಟಿಕಲ್ ಕೇಬಲ್‌ಗಳನ್ನು ಗುರಿಯಾಗಿಸುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಈ ಕೇಬಲ್‌ಗಳ ಸುರಕ್ಷತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. CSIS ವರದಿಯ ಪ್ರಕಾರ ಸಮುದ್ರ ತಳದ ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದು, ಹೊಸ ಜಾಗತಿಕ ಬೆದರಿಕೆಯಾಗಿ ಹೊರಹೊಮ್ಮಿದೆ.ನೀರೊಳಗಿನ ಈ ಯುದ್ಧ ತಂತ್ರವು ಶತ್ರು ರಾಷ್ಟ್ರಗಳ ಡಿಜಿಟಲ್ ಆರ್ಥಿಕತೆಯನ್ನು ಸುಲಭವಾಗಿ ಕುಸಿಯುವಂತೆ ಮಾಡಬಲ್ಲದು ಎಂಬುದು ತಜ್ಞರ ಅಭಿಪ್ರಾಯ. ಈ ಯುದ್ಧದ ಕೇಂದ್ರ ಬಿಂದು ಮಧ್ಯಪ್ರಾಚ್ಯವಾದರೂ ಇದರ ನೇರ ಹೊಡೆತ ಬೀಳುವ ಸಾಧ್ಯತೆ ಇರುವುದು ಭಾರತದ ಇಂಟರ್ನೆಟ್ ವ್ಯವಸ್ಥೆಯ ಮೇಲೆ. ಏಕೆಂದರೆ ಭಾರತದ ಶೇ. 60ರಷ್ಟು ಇಂಟರ್ನೆಟ್ ಟ್ರಾಫಿಕ್, ಇದೇ ಗಲ್ಫ್ ಮತ್ತು ಕೆಂಪು ಸಮುದ್ರದ ಮೂಲಕವೇ ಹಾದುಹೋಗುತ್ತದೆ. ಹಾರ್ಮಜ್ ಜಲಸಂಧಿಯಲ್ಲಿ ಭಾರತದ ಇಂಟರ್ನೆಟ್ ಕೇಬಲ್ ಸಂಪರ್ಕ ಜಾಲ ಇದೆ ಎಂಬುದನ್ನು ಮರೆಯುವಂತಿಲ್ಲ.
ಮುಂಬೈನಿಂದ ಹೊರಟು ಗಲ್ಫ್ ಮಾರ್ಗವಾಗಿ ಯುರೋಪ್‌ಗೆ ಸಂಪರ್ಕ ಕಲ್ಪಿಸುವ ಈ ನಿರ್ಣಾಯಕ ಕೇಬಲ್ ಲಿಂಕ್ ಮೇಲೆ, ಭಾರತದ ಬಹುಪಾಲು ಡಿಜಿಟಲ್ ಅವಲಂಬನೆ ಇದೆ. ಉಳಿದ ಕೇವಲ ಶೇ. 40ರಷ್ಟು ಟ್ರಾಫಿಕ್ ಮಾತ್ರ ಚೆನ್ನೈ ಮೂಲಕ ಸಿಂಗಾಪುರ ಮತ್ತು ಪೆಸಿಫಿಕ್ ಕಡೆಗೆ ಹೋಗುತ್ತದೆ. ಅಂದರೆ ಭಾರತದ ಡಿಜಿಟಲ್ ಜೀವನಾಡಿಯೇ ಈ ಸಮುದ್ರ ಮಾರ್ಗದಲ್ಲಿದೆ. ಹೀಗಾಗಿ ಹಾರ್ಮುಜ್ ಜಲಸಂಧಿ ಅಥವಾ ಕೆಂಪು ಸಮುದ್ರದ ಭಾಗದಲ್ಲಿರುವ ಈ ಕೇಬಲ್‌ಗಳಿಗೆ ಹಾನಿಯಾದರೆ, ಅದು ಭಾರತದ ಪಾಲಿಗೆ ಅತಿ ದೊಡ್ಡ ಆಘಾತವಾಗಲಿದೆ.
ಭಾರತದ ಬಹುತೇಕ ಇಂಟರ್ನೆಟ್ ನೆಟ್‌ವರ್ಕ್ ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಗೆ ತೆರೆದುಕೊಂಡಿದೆ. ಕೆಂಪು ಸಮುದ್ರದ ಮಾರ್ಗವು ಈ ಹಿಂದೆಯೂ ಅನೇಕ ಬಾರಿ ಹಡಗುಗಳ ಲಂಗರುಗಳಿಂದಾಗಿ ಕೇಬಲ್ ಕಡಿತದ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಈಗ ಯುದ್ಧದ ಕಾರಣದಿಂದಾಗಿ ಈ ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಭಾರತದ ಐಟಿ ಕಂಪನಿಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಇಂಟರ್ನೆಟ್ ಬಂದ್ ಸಾಧ್ಯತೆ ಎಷ್ಟಿದೆ?
ಕೆಂಪು ಸಮುದ್ರದ ಮೂಲಕ ಸುಮಾರು 17 ಬೃಹತ್ ಸಬ್‌ಮೆರಿನ್ ಕೇಬಲ್‌ಗಳು ಹಾದುಹೋಗುತ್ತವೆ. ಫೈಬರ್ ಆಪ್ಟಿಕ್ ಕೋರ್, ತಾಮ್ರದ ವೈರಿಂಗ್ ಮತ್ತು ದಪ್ಪನೆಯ ಪ್ಲಾಸ್ಟಿಕ್ ಕವಚಗಳನ್ನು ಹೊಂದಿರುವ ಈ ಪ್ರತಿಯೊಂದು ಕೇಬಲ್, ಅತ್ಯಂತ ಸುರಕ್ಷಿತವಾಗಿ ವಿನ್ಯಾಸಗೊಂಡಿರುತ್ತದೆ. ಈ ಕೇಬಲ್‌ಗಳು ಪ್ರತಿ ಸೆಕೆಂಡಿಗೆ ಸರಾಸರಿ 100 ಗಿಗಾಬೈಟ್ ಡೇಟಾವನ್ನು ರವಾನಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೇ ಈ ಇಂಟರ್ನೆಟ್ ಸಂಪರ್ಕ ಕೇವಲ ಒಂದು ನಿರ್ದಿಷ್ಟ ಮಾರ್ಗವನ್ನು ಮಾತ್ರ ಅವಲಂಬಿಸಿಲ್ಲ.ಅಂದರೆ ಯಾವುದೇ ಕಾರಣಕ್ಕೆ ಒಂದು ಮಾರ್ಗ ಬ್ಲಾಕ್ ಆದರೆ ಅಥವಾ ತುಂಡಾದರೆ, ಡೇಟಾ ಟ್ರಾಫಿಕ್‌ನ್ನು ತಕ್ಷಣವೇ ಮತ್ತೊಂದು ಪರ್ಯಾಯ ಮಾರ್ಗದ ಮೂಲಕ ಕಳುಹಿಸಲು ಸಾಧ್ಯವಿದೆ. ಆದ್ದರಿಂದ ಇಂಟರ್ನೆಟ್ ಸಂಪೂರ್ಣವಾಗಿ ನಿಂತುಹೋಗುವ ಸಾಧ್ಯತೆ ತೀರಾ ಕಡಿಮೆ. ಈ ಕುರಿತು ಮಾತನಾಡಿರುವ ಲೈಟ್‌ಸ್ಟಾರ್ಮ್ ಟೆಲಿಕಾಂ ಕನೆಕ್ಟಿವಿಟಿ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾಜಿತ್ ಗುಪ್ತಾ, "ಇಂಟರ್ನೆಟ್ ಎಂದಿಗೂ ಸಂಪೂರ್ಣವಾಗಿ ಶಟ್‌ಡೌನ್ ಆಗುವುದಿಲ್ಲ. ಆದರೆ ಟ್ರಾಫಿಕ್ ಚೋಕಿಂಗ್ ಮುಂದುವರೆದರೆ ಪರಿಣಾಮಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ" ಎಂದು ಎಚ್ಚರಿಸಿದ್ದಾರೆ.
ಏನು ಪರಿಣಾಮ?
ಒಂದು ವೇಳೆ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕೆಂಪು ಸಮುದ್ರದಲ್ಲಿರುವ ಭಾರತದ ಇಂಟರ್ನೆಟ್ ಕೇಬಲ್‌ಗಳಿಗೆ ಧಕ್ಕೆಯುಂಟಾದರೆ, ಬ್ಯಾಂಕಿಂಗ್ ಮತ್ತು ಆರ್ಥಿಕ ವಹಿವಾಟುಗಳು ವಿಳಂಬವಾಗಬಹುದು. ಯುಪಿಐ ಪೇಮೆಂಟ್‌ಗಳ ಮೇಲೂ ಪರಿಣಾಮ ಬೀರಬಹುದು. ಅಲ್ಲದೇ ವಿಡಿಯೋ ಡೌನ್‌ಲೋಡ್ ಮತ್ತು ಅಪ್‌ಲೋಡ್ ಸ್ಪೀಡ್ ಕಡಿಮೆಯಾಗಿ ವೀಕ್ಷಕರು ಕಿರಿಕಿರಿ ಅನುಭವಿಸಬಹುದು ಅಷ್ಟೇ ಏಕೆ ಜಾಗತಿಕ ಸಾಮರ್ಥ್ಯ ಕೇಂದ್ರ(GCC)ಗಳಂತಹ ಬಹುರಾಷ್ಟ್ರೀಯ ಕಂಪನಿಗಳ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರವ ಸಾಧ್ಯತೆ ದಟ್ಟವಾಗಿದೆ.ಒಟ್ಟಿನಲ್ಲಿ ಮಧ್ಯಪ್ರಾಚ್ಯ ಸಂಘರ್ಷ ಭಾರತದಲ್ಲಿ ಇಂಟರ್ನೆಟ್ ಸೇವೆಗೆ ಧಕ್ಕೆ ತರುವ ಸಾಧ್ಯತೆ ಇದೆಯಾದರೂ, ಅದು ಅಷ್ಟು ಸುಲಭದ ಮಾತು ಕೂಡ ಅಲ್ಲ. ಆಪ್ಟಿಕಲ್ ಕೇಬಲ್‌ಗಳ ಗುಣಮಟ್ಟ ಒಂದೆಡೆಯಾದರೆ, ಯಾವುದೇ ದೇಶ ಅಥವಾ ಸಂಘಟನೆ, ಸಮುದ್ರ ಆಳದಲ್ಲಿರುವ ಈ ಕೇಬಲ್‌ಗಳಿಗೆ ಧಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಬಹುದು.

