Dailyhunt
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: ಹೈಕೋರ್ಟ್‌ ವಿಚಾರಣೆಗೆ ಹಾಜರಾದ ಸೌಮ್ಯ ರೆಡ್ಡಿ; ಜಡ್ಜ್‌ ಮುಂದೆ ಹೇಳಿದ್ದೇನು?

ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: ಹೈಕೋರ್ಟ್‌ ವಿಚಾರಣೆಗೆ ಹಾಜರಾದ ಸೌಮ್ಯ ರೆಡ್ಡಿ; ಜಡ್ಜ್‌ ಮುಂದೆ ಹೇಳಿದ್ದೇನು?

Vijay Karnataka 2 weeks ago

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತಗಳ ಮರುಎಣಿಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ನಡೆಸಿತು. ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿಯವರು ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡಿದರು. ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ಏಕಸದಸ್ಯಪೀಠವು ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿತು.

ಈ ವೇಳೆ ಪ್ರತಿವಾದಿಯಾಗಿರುವ ವಿಜೇತ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಪರ ವಕೀಲರ ಸವಾಲುಗಳಿಗೆ ಸೌಮ್ಯ ರೆಡ್ಡಿ ಉತ್ತರಿಸಿದರು.

ರಾಜ್ಯದಲ್ಲಿ 2023 ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ನಡೆದ ಮತಗಳ ಮರುಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ಸಂಪೂರ್ಣ ಕಾನೂನುಬಾಹಿರವಾಗಿತ್ತು ಎಂದು ಸೌಮ್ಯ ರೆಡ್ಡಿ ಆರೋಪಿಸಿದರು. ಮತದಾನದ ವೇಳೆ ಚಲಾವಣೆಯಾದ ಎಲ್ಲಾ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿದರು.

''ನಿಮ್ಮ ಮನವಿಯಂತೆ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ತಿರಸ್ಕೃತಗೊಂಡ 198 ಅಂಚೆ ಮತಗಳನ್ನು ಮರು ಪರಿಶೀಲಿಸಿ ಅದರಲ್ಲಿ 124 ಮತಗಳು ಸಿಂಧು ಎಂದು ನಿರ್ಧರಿಸಿದ್ದಾರೆ. ಬಳಿಕ ಒಟ್ಟಾರೆ ಮತಗಳ ಮರು ಎಣಿಕೆ, ಮರು ಪರಿಶೀಲನೆ ಬಳಿಕ ಅಂತಿಮವಾಗಿ ಸಿಕೆ ರಾಮಮೂರ್ತಿ 16 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಘೋಷಿಸಿದ್ದು ನಿಜವೇ?'' ಎಂದು ವಕೀಲರು ಪ್ರಶ್ನಿಸಿದರು.

ಪ್ರಕ್ರಿಯೆ ಸಂಪೂರ್ಣ ಕಾನೂನುಬಾಹಿರವಾಗಿದೆ

ಅದಕ್ಕೆ ಉತ್ತರಿಸಿದ ಸೌಮ್ಯ ರೆಡ್ಡಿ, ''ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಘೋಷಣೆ ತಾಂತ್ರಿಕವಾಗಿ ಸರಿ. ಆದರೆ, ಮತಗಳ ಮರು ಎಣಿಕೆ ಮತ್ತು ಮರು ಪರಿಶೀಲನೆ ಪ್ರಕ್ರಿಯೆ ಸಂಪೂರ್ಣ ಕಾನೂನುಬಾಹಿರವಾಗಿ ಮಾಡಲಾಗಿದೆ ಎನ್ನುವುದು ನನ್ನ ಬಲವಾದ ಆಕ್ಷೇಪವಾಗಿತ್ತು. ಅದಕ್ಕಾಗಿಯೇ ನಾನು ಹೈಕೋರ್ಟ್‌ ಮೆಟ್ಟಿಲೇರಿದ್ದೇನೆ'' ಎಂದು ವಿವರಿಸಿದರು.

ಮತ ಎಣಿಕೆ ಕೇಂದ್ರಕ್ಕೆ ಭೇಟಿ ಕೊಟ್ಟಾಗ ಗೊಂದಲ ಆರಂಭ

ವಕೀಲರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೌಮ್ಯ ರೆಡ್ಡಿ, ''ನಾನು 42 ಮತಗಳ ಅಂತರದಿಂದ ಗೆದ್ದಿದ್ದೇನೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಅದನ್ನು ನೋಡಿ ಗೆಲುವಿನ ಸರ್ಟಿಫಿಕೇಟ್‌ ಪಡೆದುಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ಭೇಟಿ ಕೊಟ್ಟೆ. ಆಗ ಈ ಎಲ್ಲಾ ವಿವಾದ, ಗೊಂದಲ ಆರಂಭವಾಯಿತು'' ಎಂದರು.

ವಿಚಾರಣೆ ಏಪ್ರಿಲ್‌ 6 ಕ್ಕೆ ಮುಂದೂಡಿಕೆ

ಇದರ ಜೊತೆಗೆ ವಕೀಲರ ಇನ್ನೂ ಕೆಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಸಾಕ್ಷಿ ವಿಚಾರಣೆಗೆ ವಕೀಲರು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬೇಕಿರುವ ಕಾರಣಕ್ಕೆ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಲಾಯಿತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka