Dailyhunt
ಜಿಲ್ಲಾ ನ್ಯಾಯಾಧೀಶರ ಸೇವಾಹಿರಿತನ ಪಟ್ಟಿ ಎತ್ತಿಹಿಡಿದ ಹೈಕೋರ್ಟ್‌ ಪೂರ್ಣಪೀಠ: ಅಧಿಕಾರಿಗಳ ಬಡ್ತಿಗೆ 4 ಅಂಶಗಳ ರೋಸ್ಟರ್‌

ಜಿಲ್ಲಾ ನ್ಯಾಯಾಧೀಶರ ಸೇವಾಹಿರಿತನ ಪಟ್ಟಿ ಎತ್ತಿಹಿಡಿದ ಹೈಕೋರ್ಟ್‌ ಪೂರ್ಣಪೀಠ: ಅಧಿಕಾರಿಗಳ ಬಡ್ತಿಗೆ 4 ಅಂಶಗಳ ರೋಸ್ಟರ್‌

Vijay Karnataka 1 week ago

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಹೈಕೋರ್ಟ್‌ ಪೂರ್ಣಪೀಠ ಎತ್ತಿ ಹಿಡಿದಿದೆ. ಅಲ್ಲದೆ, ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಬಡ್ತಿ ನೀಡಲು ನಾಲ್ಕು ಅಂಶಗಳ ರೋಸ್ಟರ್‌ ಪದ್ಧತಿ ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಮತ್ತು ಬಡ್ತಿ ಪಡೆದ ನ್ಯಾಯಾಧೀಶರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾ. ಸುನಿಲ್‌ದತ್‌ ಯಾದವ್‌, ನ್ಯಾ. ಲಲಿತಾ ಕನ್ನೆಗಂಟಿ ಮತ್ತು ನ್ಯಾ. ವಿಜಯಕುಮಾರ್‌ ಪಾಟೀಲ್‌ ಅವರಿದ್ದ ಪೂರ್ಣಪೀಠ ಈ ತೀರ್ಪು ನೀಡಿದೆ. ಪೀಠವು ಏಕಸದಸ್ಯ ಪೀಠ ನೀಡಿದ್ದ ಆದೇಶ ಅನೂರ್ಜಿತಗೊಳಿಸಿದೆ.

ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶ ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನಿರಾಕರಿಸಲಾಗಿದ್ದರೂ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಭವಿಷ್ಯದಲ್ಲಿ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು. ಹೈಕೋರ್ಟ್‌ ಮತ್ತು ರಾಜ್ಯ ಸರಕಾರ 4 ಅಂಶಗಳ ರೋಸ್ಟರ್‌ ಅಳವಡಿಸಿಕೊಳ್ಳಬೇಕು,'' ಎಂದು ಆದೇಶಿಸಿದೆ.

4 ರೋಸ್ಟರ್‌ ಅಂಶಗಳು

ಅಲ್ಲದೆ, ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡಿದೆ. ಅವುಗಳೆಂದರೆ, ''ಮೊದಲಿಗೆ ಹೈಕೋರ್ಟ್‌ ಎಲ್ಲಾಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ನ್ಯಾಯಾಂಗ ಅಧಿಕಾರಿಗಳ ವೃಂದ ಬಲವನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಬೇಕು. ಎರಡನೆಯದಾಗಿ ಆ ವೃಂದ ಬಲದ ಅಧಿಸೂಚನೆ ಆಧರಿಸಿ '4 ಅಂಶಗಳ ರೋಸ್ಟರ್‌' ಜಾರಿಗೊಳಿಸಬೇಕು. ಮೂರನೆಯದಾಗಿ 4 ಅಂಶಗಳ ರೋಸ್ಟರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರಕಾರ ಒಂದು ತಿಂಗಳೊಳಗೆ ವೃಂದ ಬಲದ ಅಧಿಸೂಚನೆ ಹೊರಡಿಸಬೇಕು. ಬಡ್ತಿ ಕೋಟಾದಲ್ಲಿ ಬದಲಾವಣೆಯಾಗಿ ಶೇ.50ರಷ್ಟು ಬಡ್ತಿ, ಶೇ.25ರಷ್ಟು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೇ.25ರಷ್ಟು ನೇರವಾಗಿ ನೇಮಕಗೊಂಡ ಜಿಲ್ಲಾ ನ್ಯಾಯಾಧೀಶರ ಕೋಟಾ ಪರಿಗಣಿಸಿ ಹೊಸ ಕೋಟಾ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಬೇಕು,'' ಎಂದು ಆದೇಶಿಸಿದೆ.

ಹಾಲಿ ಪ್ರತ್ಯೇಕ ಸೇವಾಹಿರಿತನ ನಿಯಮಗಳು ಜಾರಿಯಲ್ಲಿಲ್ಲದ ಕಾರಣ ಹೈಕೋರ್ಟ್‌ ಜತೆ ಸಮಾಲೋಚನೆ ನಡೆಸಿ ರಾಜ್ಯ ಸರಕಾರ ಹೊಸ ಸೇವಾ ಹಿರಿತನ ನಿಯಮ ರೂಪಿಸಬೇಕು. ಹೈಕೋರ್ಟ್‌ ಜಿಲ್ಲಾ ನ್ಯಾಯಾಧೀಶರ ಹಿರಿತನ ಮತ್ತು ವೃಂದ ನಿಯಂತ್ರಿಸುವ ಕಾನೂನು ಚೌಕಟ್ಟನ್ನು ರೂಪಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಹೈಕೋರ್ಟ್‌ 2016ರಲ್ಲಿ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 2015ರಲ್ಲಿ ಎರಡು ಬಾರಿ ಪದೋನ್ನತಿ ನೀಡಲಾದ ಅಧಿಕಾರಿಗಳನ್ನು ಸೇವಾ ಹಿರಿತನ ಪಟ್ಟಿಯಲ್ಲಿ ನೇರ ನೇಮಕಾತಿ ಆಗಿರುವ ನ್ಯಾಯಾಧೀಶರಿಗಿಂತ ಮೇಲೆ ನಮೂದಿಸಲಾಗಿತ್ತು. ಇದನ್ನು ನೇರ ನೇಮಕಾತಿಯಾಗಿದ್ದ ಡಿ. ಪವನೇಶ್‌ ಮತ್ತಿತರರು ಪ್ರಶ್ನಿಸಿದ್ದರು. ಆ ಅರ್ಜಿ ಪರಿಶೀಲಿಸಿದ ಏಕಸದಸ್ಯ ಪೀಠ, ಸೇವಾ ಹಿರಿತನ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವಂತೆ ಆದೇಶ ನೀಡಿತ್ತು.

ಆ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಮತ್ತು ಬಡ್ತಿ ಪಡೆದ ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿ ಪರಿಶೀಲಿಸಿದ ನ್ಯಾ.ಅನು ಸಿವರಾಮನ್‌ ಮತ್ತು ನ್ಯಾ.ರಾಜೇಶ್‌ ಕೆ. ರೈ ಅವರಿದ್ದ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು. ಅನು ಸಿವರಾಮನ್‌ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಬೇಕೆಂದರೆ, ರಾಜೇಶ್‌ ರೈ ಏಕಸದಸ್ಯ ಪೀಠದ ಆದೇಶದಂತೆ ಹೊಸದಾಗಿ ಸೇವಾ ಹಿರಿತನ ಪಟ್ಟಿ ಮಾಡಬೇಕು ಎಂದು ಪ್ರತಿಪಾದಿಸಿದ್ದರು. ಭಿನ್ನ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೇಲ್ಮನವಿಗಳ ಇತ್ಯರ್ಥಕ್ಕೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠವನ್ನು ರಚನೆ ಮಾಡಿದ್ದರು. ಆ ಪೀಠ ಸಮಗ್ರ ವಿಚಾರಣೆ ನಂತರ 142 ಪುಟಗಳ ತೀರ್ಪು ಪ್ರಕಟಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka