ಹೊಸದಿಲ್ಲಿ: ಅತ್ಯಂತ ಹಿಂದುಳಿದ ದಲಿತ ವರ್ಗಗಳಿಗೆ ಪ್ರತ್ಯೇಕ ಉಪ-ವರ್ಗವನ್ನು ಕಲ್ಪಿಸುವ ವಿಷಯದ ಕುರಿತು, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥರಾದ ಚಿರಾಗ್ ಪಾಸ್ವಾನ್ ಇದನ್ನು ಸಮುದಾಯದಲ್ಲಿ ಒಡಕು ಮೂಡಿಸುವ ಕ್ರಮ ಎಂದು ವಿರೋಧಿಸಿದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇದು ಸಮುದಾಯಕ್ಕೆ ಪ್ರಯೋಜನಕಾರಿ ಎಂದು ಪ್ರತಿಪಾದಿಸಿದ್ದಾರೆ.
ಉಪ-ಮೀಸಲಾತಿಯನ್ನು ಬೆಂಬಲಿಸಿ ಮಾಂಝಿ ಮತ್ತು ಅವರ ಪುತ್ರ ಹಾಗೂ ಬಿಹಾರದ ಸಚಿವರಾದ ಸಂತೋಷ್ ಕುಮಾರ್ ಸುಮನ್ ನೀಡಿದ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಪತ್ರಕರ್ತರು ಕೇಳಿದಾಗ, ಚಿರಾಗ್ ಪಾಸ್ವಾನ್ ಅವರು "ಇದು ಸಮುದಾಯದೊಳಗೆ ಒಡಕನ್ನು ಸೃಷ್ಟಿಸುತ್ತದೆ. ಅವರು 'ಕ್ರೀಮಿ ಲೇಯರ್' ಪರಿಕಲ್ಪನೆಯನ್ನು ಬೆಂಬಲಿಸಲಿ ಮತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿ" ಎಂದು ಗುಡುಗಿದರು.
ಗಮನಾರ್ಹವಾಗಿ, ಪಾಸ್ವಾನ್ ಅವರ ಈ ನಿಲುವು ಅವರ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ನಿಲುವಿಗೆ ಅನುಗುಣವಾಗಿದೆ. ರಾಮ್ ವಿಲಾಸ್ ಪಾಸ್ವಾನ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲದ ಹಿಂದೆ ಅಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ಪರಿಚಯಿಸಿದ್ದ ಪ್ರತ್ಯೇಕ "ಮಹಾದಲಿತ" ವರ್ಗದ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿದ್ದರು.
ಮಾಂಝಿ ಪ್ರತಿಪಾದನೆ ಏನು?
ಮುಸಾಹರ್ ಸಮುದಾಯಕ್ಕೆ ಸೇರಿದ ಮಾಂಝಿ ಅವರ ಪ್ರಕಾರ, ದಲಿತರಲ್ಲಿನ ಅಂಚಿನಲ್ಲಿರುವ ವರ್ಗಗಳಿಗೆ ನಿರ್ದಿಷ್ಟ ಕಲ್ಯಾಣ ಕ್ರಮಗಳನ್ನು ಕೈಗೊಳ್ಳುವುದನ್ನು ಪಾಸ್ವಾನ್ ಕುಟುಂಬ ವಿರೋಧಿಸುತ್ತಿರುವುದರ ಹಿಂದೆ, ದುಸಾದ್ ಸಮುದಾಯದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನ ಅಡಗಿದೆ.ಚಿರಾಗ್ ಪಾಸ್ವಾನ್ ಅವರ ಇತ್ತೀಚಿನ ಪ್ರತಿಕ್ರಿಯೆಯತ್ತ ಮಾಂಝಿ ಅವರ ಗಮನ ಸೆಳೆದಾಗ, "ದಲಿತರ ವಿಶಾಲ ಹಿತದೃಷ್ಟಿಯಿಂದ ಸಂತೋಷ್ ಮತ್ತು ನಾನು ಮಂಡಿಸುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಚಿರಾಗ್ ಪಾಸ್ವಾನ್ ಅವರೇ ರಾಜೀನಾಮೆ ನೀಡಬೇಕೇ ಹೊರತು ನಾವಲ್ಲ" ಎಂದು ಕಿಡಿಕಾರಿದ್ದಾರೆ.
"ದಲಿತರಲ್ಲೇ ತುಲನಾತ್ಮಕವಾಗಿ ಹೆಚ್ಚು ದುರ್ಬಲವಾಗಿರುವ ಜಾತಿಗಳಿವೆ ಮತ್ತು ಅವುಗಳಿಗೆ ನಿರ್ದಿಷ್ಟ ಕಲ್ಯಾಣ ಕ್ರಮಗಳ ಅಗತ್ಯವಿದೆ ಎಂಬುದು ಸತ್ಯ. ಉಪ-ವರ್ಗೀಕರಣವನ್ನು ಪರಿಚಯಿಸುವ ಮೂಲಕ ಇದನ್ನು ಸಾಧಿಸಬಹುದು. ಹೀಗಿರುವಾಗ 'ಕ್ರೀಮಿ ಲೇಯರ್' ಪ್ರಶ್ನೆ ಎಲ್ಲಿಂದ ಬರುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ" ಎಂದು ಗಯಾ ಸಂಸದರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸುಮ್ಮನಿರದ ಸುಮನ್:
ತಮ್ಮ ತಂದೆ ಸ್ಥಾಪಿಸಿದ 'ಹಿಂದೂಸ್ತಾನಿ ಅವಾಮ್ ಮೋರ್ಚಾ' ಪಕ್ಷದ ಮುಖ್ಯಸ್ಥರಾಗಿರುವ ಸಂತೋಷ್ ಕುಮಾರ್ ಸುಮನ್ ಕೂಡ, ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಆಕ್ರೋಶಭರಿತ ಸರಣಿ ಪೋಸ್ಟ್‌ಗಳನ್ನು ಮಾಡಿದ್ದಾರೆ."ನನ್ನ ಕಿರಿಯ ಸಹೋದರನ ಪಕ್ಷವು ದೊಡ್ಡದಾಗಿದೆ ಮತ್ತು ಸಂಸತ್ತು ಹಾಗೂ ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿದೆ. ಅವರು ಮುಂಚೂಣಿಯಲ್ಲಿರಲಿ, ನಾನು ಅವರೊಂದಿಗೆ ರಾಜೀನಾಮೆ ನೀಡುತ್ತೇನೆ. ಆದರೆ ನಾನು ಮೀಸಲಾತಿಯ ವಿರುದ್ಧವಾಗಲಿ ಅಥವಾ 'ಕ್ರೀಮಿ ಲೇಯರ್' ಪರಿಚಯಿಸುವ ಪರವಾಗಲಿ ಮಾತನಾಡುತ್ತಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು" ಎಂದು ಸಂತೋಷ್ ಕುಮಾರ್ ಸುಮನ್ ಹೇಳಿದ್ದಾರೆ.
ಒಟ್ಟಿನಲ್ಲಿ ಉಪ ಮೀಸಲಾತಿ ವಿಚಾರವಾಗಿ ಇಬ್ಬರು ಕೇಂದ್ರ ಸಚಿವರ ನಡುವೆ ಬಹಿರಂಗ ಅಸಮಾಧಾನ ಸ್ಪೋಟಗೊಂಡಿರುವುದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

