ಬೆಂಗಳೂರು: ವೈದ್ಯೋ ನಾರಯಣೋ ಹರಿ ಎಂಬ ಮಾತಿದೆ. ಅಂದರೆ ಒಬ್ಬ ಮನುಷ್ಯನ ಜೀವ ಉಳಿಸುವ ಶಕ್ತಿ ಆ ದೇವರ ಬಳಿಕ ಭೂಮಿಯ ಮೇಲೆ ಇರುವುದು ವೈದ್ಯರಿಗೆ ಮಾತ್ರ. ಅದು ಸತ್ಯವೆಂದು ನಿರೂಪಿಸುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯರು ರೋಗಿಯನ್ನು ಕಾಪಾಡಲು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ.
ಆದರೆ, ಯಾವುದೇ ವೈದ್ಯನೇ ಆಗಲಿ ಅಥವಾ ಮನುಷ್ಯನೇ ಆಗಲಿ ತನ್ನ ದೇಹದ ಅಂಗಾಗಗಳನ್ನು ಬೇರೆಯವರಿಗೆ ತಾನೂ ಬದುಕಿರುವಾಗಲೇ ನೀಡಲು ಒಪ್ಪಿಕೊಳ್ಳುವುದಿಲ್ಲ. ಆದರೆ ಅಪರಿಚಿತ ವ್ಯಕ್ತಿಯೊಬ್ಬರಿಗೆ ತಮ್ಮ ಸ್ವಂತ ಕಿಡ್ನಿಯನ್ನೇ ದಾನ ಮಾಡಲು ವೈದ್ಯರೊಬ್ಬರು ಕಾನೂನು ಹೋರಾಟವನ್ನೇ ಮಾಡಿರುವ ಅಪರೂಪದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಜೀವಂತ ಅಂಗಾಗದಾನಿಯಾದ ಬೆಂಗಳೂರಿನ ವೈದ್ಯೆ
ಹೌದು, ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಭ್ರೂಣ ಔಷಧ ತಜ್ಞೆಯಾಗಿರುವ ಡಾ. ಥಂಕಮ್ ಎಸ್, 2014 ರಲ್ಲಿ ಮರಣೋತ್ತರ ಅಂಗಾಂಗ ದಾನ ಮಾಡುವುದಾಗಿ ಮೊದಲು ಪ್ರತಿಜ್ಞೆ ಮಾಡಿದ್ದರು.ಆದರೆ, ಮೃತರ ಅಂಗಾಗಳನ್ನು ದಾನ ಮಾಡಿದರೆ ಅದರ ಪರಿವರ್ತನಾ ದರ ಕಡಿಮೆಯಾಗಲಿದೆ ಎಂದು ತಿಳಿದುಕೊಂಡ ವೈದ್ಯೆ ಆಗೇ ಆಗದಂತೆ ತಾವು ಜೀವಂತಾವಾಗಿರುವಾಗಲೇ ಕಿಡ್ನಿಯನ್ನು ದಾನ ಮಾಡುವ ಮೂಲಕ ʼಜೀವಂತ ಅಂಗಾಗದಾನಿʼಯಾಗಲು ಬಯಸಿದ್ದಾರೆ.ಆದರೆ, ಇದಕ್ಕೆ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದು, ಇದರೊಂದಿಗೆ ರೋಗಿ ಈ ವೈದ್ಯೆಯ ಸಂಬಂಧಿಯಾಗಿರದ ಕಾರಣ ಈ ಪ್ರಕ್ರಿಯೆಗೆ ಆಸ್ಪತ್ರೆಯ ಆಡಳಿತ ಮಂಡಳಿ ಇದಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ 2023 ರಲ್ಲಿ, ಅವರು ಕಸಿ ಮಾಡಿಸಿಕೊಳ್ಳುವ ಲಿಸ್ಟ್ ನಲ್ಲಿದ್ದ 24 ವರ್ಷದ ಅನಾಥನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಆದರೆ ಆಡಳಿತ ಮಂಡಳಿ ದಾನಿ ಮತ್ತು ಸ್ವೀಕರಿಸುವವರ ನಡುವೆ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಮತ್ತೊಮ್ಮೆ ಅನುಮತಿ ನಿರಾಕರಿಸಿದೆ.
ಕಿಡ್ನಿದಾನ ಮಾಡಲು ಕಾನೂನು ಹೋರಾಟ
ಇದರಿಂದ ಈ ಕಾನೂನು ಅಡೆತಡೆಗಳನ್ನು ಬಗೆಹರಿಸಿಕೊಂಡು ಕಿಡ್ನಿದಾನ ಮಾಡಲು ಮುಂದಾದ ಡಾ.ಥಂಕಮ್ 2025ರ ಜೂನ್ ತಿಂಗಳಿನಲ್ಲಿ ಹೈಕೋರ್ಟ್ ಮೊರೆ ಹೋಗಿ ಮೊಕದ್ದಮೆ ಹೂಡಿದ್ದಾರೆ. ಇನ್ನು, ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಡಿಸೆಂಬರ್ 2025ರಲ್ಲಿ ಕಿಡ್ನಿದಾನಮಾಡಲು ಅನುಮತಿ ನೀಡುವಂತೆ ಅಸ್ಪತ್ರೆಗೆ ಆದೇಶಿಸಿದೆ.ಈ ಕುರಿತು ಕೋರ್ಟ್ 5 ವಾರಗಳೊಗೆ ಕಿಡ್ನಿ ಸ್ವೀಕರಿಸಲು ಅರ್ಹರಾಗಿರುವ 5 ಮಂದಿಯನ್ನು ಗುರುತಿಸಬೇಕು ಎಂದು ಆದೇಶಿಸಿದ್ದು, ಇದರಂತೆ ಮೊದಲನೇ ವ್ಯಕ್ತಿಯೊಂದಿಗೆ ಮ್ಯಾಚ್ ಮಾಡಿದಾಗ ಅದು ಅನರ್ಹವಾಗಿದೆ. ನಂತರ 56 ವರ್ಷದ ಮಹಿಳೆಗೆ ಕಿಡ್ನಿ ಕಸಿ ಮಾಡಲು ಮ್ಯಾಚ್ ಆಗಿದ್ದು, ಫೆ.2ರಂದು ಕಸಿ ಮಾಡಲು ಅನುಮತಿ ನೀಡಿದ್ದು, ಅಲ್ಲಿಯ ತನಕ ಈ ಕಿಡ್ನಿಯನ್ನು ಯಾರೂ ಸ್ವೀಕರಿಸಲಿದ್ದಾರೆ ಎಂಬ ವಿಚಾರವೇ ಈ ವೈದ್ಯೆಗೆ ತಿಳಿದಿರಲಿಲ್ಲ. ಹೀಗೆ ಫೆ.10ರಂದು ಯಶಸ್ವಿಯಾಗಿ ಕಿಡ್ನಿ ಕಸಿ ನಡೆದಿದೆ.
ಯುವ ಪೀಳಿಗೆಗೆ ಡಾ.ಥಂಕಮ್ ಸಂದೇಶ
ಈ ಕುರಿತು TOIಗೆ ವೈದ್ಯೆ ಹೇಳುವಂತೆ, "ಇದು ನನ್ನ ಬಹುಕಾಲದ ಕನಸು, ಇದು ಕೇವಲ ಕಿಡ್ನಿದಾನ ಮಾಡುವುದರ ಕುರಿತಲ್ಲ. ಬದಲಾಗಿ ಯುವಜನರಲ್ಲಿ ಇದರ ಕುರಿತು ಅರಿವು ಮೂಡಿಸುವ ಸಲುವಾಗಿ, ಏಕೆಂದರೆ ಕಿಡ್ನಿದಾನ ಮಾಡುವುದು ತುಂಬಾನೇ ಸುರಕ್ಷಿತವಾಗಿದೆ.ಹಾಗಾಗಿ ಒಬ್ಬ ವೈದ್ಯರೇ ಇದನ್ನು ಮಾಡಿದ್ದಾರೆ ಎಂದು ಕೇಳಿದಾಗ ಬಹುಶಃ ಅವರಲ್ಲಿ ಈ ಕುರಿತು ಆತ್ಮವಿಶ್ವಾಸ ಹೆಚ್ಚಾಗಬಹುದು. ಇನ್ನು, ಬೇರೆ ರಾಜ್ಯಗಳಲ್ಲಿ ಸಂಬಂಧವಿಲ್ಲದವರಿಗೆ ಈ ರೀತಿ ದಾನ ಮಾಡುವುದು ಸಾಮಾನ್ಯವಾಗಿದೆ ಆದರೆ, ಈ ಪ್ರವೃತ್ತಿ ಕರ್ನಾಟಕದಲ್ಲೂ ಹೆಚ್ಚಾಗಬೇಕು ಎಂಬುದೇ ನನ್ನ ಆಶಯ" ಎಂದು ಹೇಳಿದ್ದಾರೆ.ಹೀಗೆ ತಾವು ಜೀವಂತವಾಗಿರುವಾಗಲೇ ತಮಗೆ ಎಷ್ಟು ಮಾತ್ರವೂ ಸಂಬಂಧವಿರದ ಹಾಗೂ ತಾವು ಅಂಗಾಗ ಕಸಿ ಮಾಡುವವರೆಗೂ ಆ ರೋಗಿ ಯಾರು ಎಂದು ಸಹ ತಿಳಿಯದೇ ಇದ್ದಾಗಲೂ ಒಂದು ಜೀವವನ್ನು ಉಳಿಸಬೇಕೆಂಬ ಅವರ ಹಂಬಲ ಕಾನೂನು ಹೋರಾಟವನ್ನೇ ಮಾಡಿ ಕೊನೆಗೆ ಸಫಲವಾಗಿದ್ದು, ರಿಯಲ್ ಹಿರೋ ಆಗಿದ್ದಾರೆ ಎಂದರೆ ತಪ್ಪಿಲ್ಲ.

