ಮಂಗಳೂರು: ಸಮುದ್ರದ ಮೂಲಕ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು(ಪಿಒಎಲ್) ಮತ್ತು ಎಲ್‌ಪಿಜಿಯಂತಹ ಭಾರಿ ಪ್ರಮಾಣದ ದ್ರವ ಸರಕು ನಿರ್ವಹಣೆ ಮಾಡಲು ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಬರ್ತ್ ಸಂಖ್ಯೆ 9ನ್ನು ಪುನರ್ ನಿರ್ಮಾಣ ಮಾಡಲಿದೆ.
438 ಕೋಟಿ ವೆಚ್ಚದಲ್ಲಿ ಬರ್ತ್ ಪುನರ್ ನಿರ್ಮಾಣ
ದೇಶದ ಬಂದರು ಮೂಲಸೌಕರ್ಯ ಹೆಚ್ಚಿಸುವ ಮತ್ತು ಕಡಲ ಸರಕು ಸಾಗಾಟ ಬಲಪಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಭಾರಿ ದ್ರವ ಸರಕು ನಿರ್ವಹಿಸಲು ಹಳೆ ವ್ಯವಸ್ಥೆ ತೆರವುಗೊಳಿಸಿ, ಸಮಗ್ರ ಪುನರ್‌ನಿರ್ಮಾಣ ಯೋಜನೆ ಒಳಗೊಂಡಿದೆ.
ಆಧುನೀಕರಣದ ಭಾಗವಾಗಿ ಬರ್ತ್ ಡ್ರಾಫ್ಟನ್ನು ಈಗಿನ 10.5 ಮೀ.ನಿಂದ 14 ಮೀ.ಗೆ ಹೆಚ್ಚಿಸಲಾಗುತ್ತದೆ. ಭವಿಷ್ಯದ ಸಿದ್ಧ ವಿನ್ಯಾಸ ನಿಬಂಧನೆಯನ್ನು 19.8 ಮೀ.ವರೆಗೆ ಹೆಚ್ಚಿಸಲಾಗುತ್ತದೆ. ಇದರಿಂದ ಬಂದರಿಗೆ ಆಗಮಿಸುವ 2 ಲಕ್ಷ ಡೆಡ್ ವೈಟ್ ಟನ್ನೇಜ್(ಡಿಡಬ್ಲ್ಯುಟಿ) ಸಾಮರ್ಥ್ಯವರೆಗಿನ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ. ಇದರಲ್ಲಿಅತೀ ದೊಡ್ಡ ಅನಿಲ ಸಾಗಾಟ(ವಿಎಲ್‌ಜಿಸಿಎಸ್) ಹಡಗು ಸೇರಿವೆ.
ಭಾರತವನ್ನು ಜಲಯಾನ ನಾಯಕನಾಗಿ ಮಾಡುವ ಗುರಿ
ದೇಶದ ಕಡಲ ಮೂಲಸೌಕರ್ಯವನ್ನು ಅಭೂತಪೂರ್ವ ವೇಗದಲ್ಲಿ ಆಧುನೀಕರಿಸಲಾಗುತ್ತಿದೆ. ಹಳೆಯ ಸೌಲಭ್ಯಗಳನ್ನು ವಿಶ್ವ ದರ್ಜೆಯೊಂದಿಗೆ ಬದಲಾಯಿಸುವ ಮೂಲಕ ಸರಕು ನಿರ್ವಹಣಾ ಸಾಮರ್ಥ್ಯವನ್ನು 10.90 ಎಂಟಿಪಿಎಗೆ ಹೆಚ್ಚಿಸುವ ಮೂಲಕ ಮತ್ತು ವಿಎಲ್‌ಜಿಸಿಎಸ್ ಸೇರಿದಂತೆ ದೊಡ್ಡ ಹಡಗುಗಳ ನಿರ್ವಹಣೆ ಮಾಡಲಿದೆ. ಜಾಗತಿಕ ಜಲಯಾನ ನಾಯಕನಾಗಿ ಭಾರತವನ್ನು ಬಲಪಡಿಸಿ, ಭವಿಷ್ಯದ ಇಂಧನ ಮತ್ತು ವ್ಯಾಪಾರ ಬೇಡಿಕೆ ಪೂರೈಸಲು ಸಿದ್ಧವಾಗುತ್ತಿದೆ ಎಂದು ಸಚಿವ ಸರ್ಬಾನಂದ ಸೋನೊವಾಲ್ ಹೇಳಿಕೊಂಡಿದ್ದಾರೆ.ಬರ್ತ್ ಪುನರ್‌ನಿರ್ಮಾಣ ಯೋಜನೆಯನ್ನು ಮುಕ್ತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಖಾಸಗಿ ರಿಯಾಯಿತಿದಾರನಿಂದ ಕೈಗೊಳ್ಳಲಾಗುತ್ತದೆ. ಆತ ಕಾರ್ಯಾಚರಣೆಯ 5ನೇ ವರ್ಷದ ವೇಳೆಗೆ 7.63 ಎಂಟಿಪಿಎ ಕನಿಷ್ಠ ಖಾತರಿಪಡಿಸಿದ ಸರಕು(ಎಂಜಿಸಿ) ನಿರ್ವಹಣೆಗೆ ಬದ್ಧನಾಗಿರಬೇಕು. ನಿರ್ಮಾಣ ಅವಧಿ ಎರಡು ವರ್ಷ. 30 ವರ್ಷ ರಿಯಾಯಿತಿ ಅವಧಿ ಇರುತ್ತದೆ.
ಪ್ರಸ್ತಾವಿತ ಬರ್ತ್ ನಿಂದ ದೊಡ್ಡ ಹಡಗುಗಳು ಮತ್ತು ವಿಎಲ್‌ಜಿಸಿಗಳ ನಿರ್ವಹಣೆ ಸಾಧ್ಯವಿದ್ದು, ಆರ್ಥಿಕ ಅಭಿವೃದ್ಧಿ, ಸರಕು ನಿರ್ವಹಣೆ ವೆಚ್ಚ ಇಳಿಕೆ ಮತ್ತು ಬಂದರು ಸ್ಪರ್ಧಾತ್ಮಕತೆ ಹೆಚ್ಚಲಿದೆ. ಹೆಚ್ಚಿನ ಸಾಮರ್ಥ್ಯದ ಮೆರೈನ್ ಅನ್‌ಲೋಡಿಂಗ್ ಆರ್ಮ್ಸ್ ಮತ್ತು ಸ್ವಯಂಚಾಲಿತ ಮೂರಿಂಗ್ ವ್ಯವಸ್ಥೆಗಳ ಸ್ಥಾಪನೆ ಸೇರಿದಂತೆ ಯಾಂತ್ರೀಕರಣ ಮೂಲಕ ಕಾರ್ಯಾಚರಣೆ ದಕ್ಷತೆ ಸುಧಾರಿಸಲಿದೆ.

