Dailyhunt
'ಕನ್ನಡ ನಾಡಿನ ವೀರ ರಮಣಿಯ' - ನಾಗರಹಾವು ಚಿತ್ರದ ಹಾಡು ಹಳತಾದರೇನು ಭಾವ ನವನವೀನ!

'ಕನ್ನಡ ನಾಡಿನ ವೀರ ರಮಣಿಯ' - ನಾಗರಹಾವು ಚಿತ್ರದ ಹಾಡು ಹಳತಾದರೇನು ಭಾವ ನವನವೀನ!

Vijay Karnataka 2 weeks ago

ಲ್ಲರಿಗೂ ನಮಸ್ಕಾರಗಳು. ಇಂದಿನ ಈ ಕಂತಿನಲ್ಲಿ ಒಂದು ವಿಶಿಷ್ಟವಾದ ಗೀತೆಯನ್ನು ನೋಡೋಣ. ಸಿನಿಮಾದಲ್ಲಿ ಅವಳಡಿಸಲಾಗಿರುವ ಚಿತ್ರದುರ್ಗದ ಓಬವ್ವಳ ಕಥೆ. ನಾಗರಹಾವು ಚಿತ್ರದ ಅನೇಕ ಜನಪ್ರಿಯ ಹಾಡುಗಳಲ್ಲಿ "ಕನ್ನಡ ನಾಡಿನ ವೀರ ರಮಣಿಯ" ಗೀತೆಯು ವಿಭಿನ್ನವಾಗಿ ಎದ್ದು ನಿಲ್ಲುತ್ತದೆ.

ನಾಯಕ ಪಾತ್ರಧಾರಿಯೇ ಹಾಡನ್ನು ಶುರು ಮಾಡಿದರೂ, ಮುಖ್ಯವಾಹಿನಿಯಲ್ಲಿ ಅತಿಥಿ ನಟಿಯದ್ದೇ ವಿಜೃಂಭಣೆ. ಇಂದಿಗೂ ಈ ಗೀತೆಯನ್ನು ನೆನೆಯುವುದೇ ಅತಿಥಿ ನಟಿಯ ಪಾತ್ರಕ್ಕೆ. ಇಂಥಾ ಯತ್ನ ಮಾಡುವುದು ರಿಸ್ಕ್ ಆದರೆ ಅಂಥದ್ರಲ್ಲಿ ಜಯಿಸುವುದು ಪುಟ್ಟಣ್ಣ ಕಣಗಾಲ್ ಅಂತಹ ಕೆಲವು ನಿರ್ದೇಶಕರು ಮಾತ್ರ.

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..
ಚಿತ್ರದುರ್ಗದ ಕಲ್ಲಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ
ಮದಕರಿ ನಾಯಕರಾಳಿದ ಕೋಟೆ..
ಪುಣ್ಯ ಭೂಮಿಯು ಈ ಬೀಡು
ಸಿದ್ದರು ಹರಸಿದ ಸಿರಿನಾಡು..

ವೀರ ಮದಕರಿ ಆಳುತಲಿರಲು
ಹೈದರಾಲಿಯು ಯುದ್ದಕೆ ಬರಲು.
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು..
ವೈರಿ ಚಿಂತೆಯಲಿ ಬಸವಳಿದ
ದಾರಿ ಕಾಣದೆ ಮಂಕಾದ

ಗೂಢಚಾರರು ಅಲೆದು ಬಂದರು
ಹೈದಾರಾಲಿಗೆ ವಿಷಯ ತಂದರು..
ಚಿತ್ರದುರ್ಗದ ಕೋಟೆಯಲಿ
ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು
ಲಗ್ಗೆ ಹತ್ತಲು ಹೇಳಿದರು

ಕೈಗೆ ಸಿಕ್ಕಿದ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಳು...
ದುರ್ಗಿಯನ್ನು ಮನದಲ್ಲಿ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು..
ಯಾರವಳು......ಯಾರವಳು
ವೀರ ಒನಕೆ ಆ..ಓಬವ್ವಾ...
ದುರ್ಗವು ಮರೆಯದ ಓಬವ್ವಾ...

ತೆವಳುತ ಒಳಗೆ ಬರುತಿರೆ ವೈರೀ
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತಾ..
ಮತ್ತೆ ನಿಂತಳು ಹಲ್ಲು ಮಸೆಯುತಾ..
ವೈರಿ ರುಂಡ ಚೆಂಡಾಡಿದಳು
ರಕುತದ ಕೋಡಿ ಹರಿಸಿದಳು..

ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನೂ...
ಮಾತು ಹೊರಡದೆ ಬೆಚ್ಚಿ ನಿಂತನೂ
ಹೆಣದ ರಾಶಿಯ ಬಳಿಯೇ ಕಂಡನೂ
ರಣಚಂಡಿ ಅವತಾರವನು
ಕೋಟೆ ಸಲಹಿದ ತಾಯಿಯನು

ರಣ ಕಹಳೆಯನು ಊದುತಲಿರಲೂ
ಸಾಗರದಂತೆ ಸೈನ್ಯ ನುಗ್ಗಲೂ...
ವೈರಿಪಡೆಯು ನಿಷ್ಯೇಶವಾಗಲೂ..
ಕಾಳಗದಲ್ಲಿ ಜಯವನು ತರಲೂ..
ಅಮರಳಾದಳೂ ಓಬವ್ವ
ಚಿತ್ರದುರ್ಗದ ಓಬವ್ವಾ



'ಗಂಡು ಭೂಮಿ' ಎಂಬುದನ್ನು ಬಹಳಷ್ಟು ಕಾಲ ಚಿತ್ರದುರ್ಗದ ಬಗ್ಗೆ ಹೇಳಿದ್ದಾರೆ ಎಂದುಕೊಂಡಿದ್ದೆ ಆದರೆ ನಂತರ ಅರಿವಾಗಿದ್ದು 'ಗಂಡು ಭೂಮಿ' ಎಂದರೆ ಕನ್ನಡ ನಾಡು" ಎಂದು. 'ಗಂಡು ಭೂಮಿ' ಎಂದ ಮಾತ್ರಕ್ಕೆ ಅದು ಗಂಡಸರಿಗೆ ಸಲ್ಲುವಂಥದ್ದಲ್ಲ ಬದಲಿಗೆ ನುಡಿಗಟ್ಟು. ಯಾವ ಭೂಮಿಯು ಸಾಹಿತ್ಯಿಕ, ಐತಿಹಾಸಿಕ, ಸಾಂಸ್ಕೃತಿಕ ಮೊದಲಾದವುಗಳ ವಿಷಯದಲ್ಲಿ ಶ್ರೀಮಂತವಾಗಿರುವುದೋ ಅವೆಲ್ಲವೂ 'ಗಂಡು ಭೂಮಿ'. ನಮ್ಮ ಕನ್ನಡ ನಾಡು ಅಂಥಾ 'ಗಂಡು ಭೂಮಿ'ಗಳಲ್ಲಿ ಒಂದು. "ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು" ಎಂದಿದ್ದಾರೆ ನಮ್ಮ ಬಿ.ಆರ್. ಲಕ್ಷ್ಮಣ್ ರಾವ್.

ಇಂಥಾ 'ಗಂಡು ಭೂಮಿ'ಯಲ್ಲಿ ಜನಿಸಿದ ಒಬ್ಬ ಸಾಮಾನ್ಯಳ ಅಸಾಮಾನ್ಯ ಶೌರ್ಯದ ಕಥೆಯೇ ಈ ಹಾಡಿನ ಜೀವಾಳ. ಚಿತ್ರದುರ್ಗದ ಕಲ್ಲಿನ ಕೋಟೆಯ ರಕ್ಷಣೆಯಲ್ಲಿ ಚಿತ್ರದುರ್ಗದ ಆಡಳಿತ ನಡೆಸಿದ್ದು ವೀರ ಮದಕರಿನಾಯಕ 'ದುರ್ಗದ ಹುಲಿ' ಎಂದೇ ಖ್ಯಾತರಾದವರು. ಮದವೇರಿದ್ದ ಆನೆಯನ್ನು ಏಕಾಂಗಿಯಾಗಿ ಹತೋಟಿಗೆ ತಂದಿದ್ದ ಎಂಬ ಖ್ಯಾತಿವೆತ್ತಿದ್ದ ಮದಕರಿನಾಯಕ ಜನಾನುರಾಗಿಯಾಗಿದ್ದ. ಕೋಟೆಯ ರಕ್ಷಣೆಯಲ್ಲಿ, ಒಳ್ಳೆಯ ರಾಜನ ಆಡಳಿತದಲ್ಲಿ, ಸಿದ್ಧಪುರುಷರು ಹರಸಿದ ನಾಡಿನಲ್ಲಿ ಪ್ರಜೆಗಳು ಸುಖವಾಗಿದ್ದರು. ಆದರೆ ಎಲ್ಲ ಸುಖಕ್ಕೂ ಕೇಡಿಗರ ಕಣ್ಣು ಬಿದ್ದೇ ಬೀಳುತ್ತದೆ ಎಂಬುದು ಅನಾದಿಕಾಲದಿಂದಲೂ ಗೊತ್ತಿರುವ ವಿಷಯ. ಆಧುನಿಕ ಯುಗದಲ್ಲಿ ಮೊಗಲ ಕಣ್ಣಿಗೆ ಈ ಪ್ರಾಂತ್ಯವೂ ಬಿತ್ತು. ಹೈದರಾಲಿ ಆಕ್ರಮಣ ಮಾಡಲು ಬಂದನಾದರೂ ಕೋಟೆಯನ್ನು ಭೇದಿಸಲು ಆಗಲಿಲ್ಲ.

ಯಾವುದೇ ಒಂದು ರಕ್ಷಣೆಯ ವಿಷಯದಲ್ಲಿ ಒಂದು ಮಾತಿಗೆ. ಅದು ಒಂದು ಮನೆಯ ವಿಷಯವೂ ಆಗಬಹುದು, ಪ್ರಾಂತ್ಯ, ರಾಜ್ಯ ಅಥವಾ ದೇಶಕ್ಕೂ ಅನ್ವಯ. ಒಳಗಿನವರಿಂದಲೇ ಹೊರಗಿನವರಿಗೆ ಬಲು ಬೇಗ ಮಾಹಿತಿ ದೊರೆಯೋದು. ಹಣದಾಸೆಗೋ, ಪದವಿಯ ಆಸೆಗೋ ಬಿದ್ದು ನಮ್ಮನ್ನೇ ನಾವು ಮಾರಿಕೊಳ್ಳುವುದು. ಕೋಟೆಯೊಳಗೆ ನುಸುಳಿ ಹೋಗಲು ಅಲ್ಲೊಂದು ಕಿಂಡಿಯಿದೆ ಎಂದು ಗೂಢಚಾರರು ಹೇಳಿದರು ಎಂದು ಗೀತರಚನಾಕಾರರು ಹೇಳಿದ್ದರೂ ಆ ಗೂಢಚಾರಿ ಯಾವ ಕಡೆಯವನು ಎಂದು ಹೇಳಿಲ್ಲ. ಸಣ್ಣ ಸುಳಿವನ್ನೇ ಬಲವಾಗಿರಿಸಿಕೊಂಡು, ಯಥಾಪ್ರಕಾರ ಕಳ್ಳಮಾರ್ಗವನ್ನೇ ಅನುಸರಿಸಿದ ಹೈದರಾಲಿ.

ಕೋಟೆಯ ಕಾವಲುಗಾರನು ತನ್ನ ಊಟದ ಸಮಯಕ್ಕೆ ಮನೆಗೆ ಹೋಗುವ ಸಮಯವನ್ನೇ ಕಾಯ್ದುಕೊಂಡು ಆ ಕಿಂಡಿಯಲ್ಲಿ ಶತ್ರು ಸೈನ್ಯದ ಒಬ್ಬೊಬ್ಬರೇ ಸೈನಿಕರು ನುಗ್ಗಿ ಒಳಗೆ ಬರಲು ಆರಂಭಿಸಿದ್ದರು. ಅದೇ ಸಮಯಕ್ಕೆ ನೀರನ್ನು ತೆಗೆದುಕೊಂಡು ಹೋಗಲು ಬಂದ ಆ ಕಾವಲುಗಾರನ ಪತ್ನಿ ಓಬವ್ವಗೆ ಇದರ ಸುಳಿವು ಸಿಕ್ಕಿತು. ಊಟಕ್ಕೆ ಕುಳಿತ ಗಂಡನನ್ನು ಎಬ್ಬಿಸುವುದು ಬೇಡ ಎಂಬ ಪತಿಧರ್ಮವನ್ನು ಪಾಲಿಸಿದ ಆಕೆ ತನ್ನ ಮನೆಯಲ್ಲಿದ್ದ ಒಂದು ಒನಕೆಯನ್ನೇ ಹಿಡಿದು ಶತ್ರುವನ್ನು ಎದುರಿಸಲು ಹೊರಟಳು.

ಇಲ್ಲಿ ಒಂದೆರಡು ವಿಷಯಗಳನ್ನೂ ಗಮನಿಸಬೇಕು. ಇಡೀ ಕೋಟೆಗೆ ಒಬ್ಬನೇ ಕಾವಲುಗಾರನೇ? ಇಲ್ಲ ಬಿಡಿ, ಬಹುಶ: ಕೋಟೆಯ ಆ ದಿಕ್ಕಿಗೆ ಅಂದರೆ 'ವಾಯುವ್ಯ' ಅಥವಾ North-West ದಿಕ್ಕಿಗೆ ಈತನು ಕಾವಲುಗಾರ. ಮಿಕ್ಕ ಏಳು ದಿಕ್ಕುಗಳಿಗೆ ಬೇರೆಯವರು ಇದ್ದೇ ಇರುತ್ತಾರೆ, ಜೊತೆಗೆ ಎಲ್ಲ ಕಾವಲುಗಾರರ ಊಟದ ಸಮಯವೂ ಒಂದೇ ಆಗಿರುವುದಿಲ್ಲ. ಇದು ಭದ್ರತೆಯ ವಿಷಯ. ಮಿಕ್ಕವರ ದೃಷ್ಟಿ ಎಲ್ಲೆಡೆ ಇದ್ದರೂ ಸುರಂಗದ ಮಾಹಿತಿ ಯಾರಿಗೂ ಇದ್ದಿಲ್ಲ ಎಂದುಕೊಳ್ಳಬೇಕು. ಕಾವಲುಗಾರನ ಪತ್ನಿ ಅಲ್ಲಿಗೆ ಬಂದು ನೋಡುವ ಹೊತ್ತಿಗೆ ಎಷ್ಟು ಜನ ಒಳ ಸೇರಿದ್ದರು. ಆಕೆ ವಿಷಯ ತಿಳಿಸಲು ಮನೆಗೆ ಹೋಗಿ ಮತ್ತೆ ಒನಕೆಯೊಂದಿಗೆ ವಾಪಸ್ ಬರುವಷ್ಟರಲ್ಲಿ ಇನ್ನೆಷ್ಟು ಜನ ನುಗ್ಗಿರಬಹುದು? ಒಬ್ಬಿಬ್ಬರೇ ನುಗ್ಗಿದ್ದರೂ ಎಲ್ಲರೂ ಶತ್ರುಗಳೇ, ಮತ್ತು ಅವರಿಂದಲೇ ಮುಂದಿನ ಅನಾಹುತಗಳೂ ಆಗಿದ್ದು.

ಸಾಮಾನ್ಯ ಮಹಿಳೆಯಾಗಿ ಕಂಡಿದ್ದ ಆಕೆ, ಶತ್ರುಸೈನ್ಯ ಕಪತನದಿಂದ ನುಗ್ಗುತ್ತಿದೆ ಎಂದು ಅರಿವಾದಾಗ ಆವೇಶಭರಿತಳಾಗಿ ನಾಡಿನ ರಕ್ಷಣೆಗೆ ನಿಂತಳು. ಭದ್ರತೆಯ ವಿಷಯಕ್ಕೆ ಬಂದಾಗ ಕಾವಲುಗಾರರ ಸಂಸಾರಗಳೂ ಅಂಥದ್ದೇ ಮನೋಬಲ ಉಳ್ಳವರಾಗಿರುತ್ತಾರೆ ಎಂದೂ ಅರ್ಥೈಸಿಕೊಳ್ಳಬಹುದು. ಅದು ಅವರ ರಕ್ತದಲ್ಲೇ ಬೆರೆತಿರುತ್ತದೆ ಎಂದರೂ ಅಡ್ಡಿಯಿಲ್ಲ.

ದುಷ್ಟ ಸಂಹಾರಕಿಯಾದ ದುರ್ಗೆ'ಯನ್ನು ನೆನೆಯುತ್ತ , ಮರಣ ಸಂಕೇತವಾದ ಕಾಳಿಯಂತೆ ಸುರಂಗದ ಕೊನೆಯಲ್ಲಿ ಬಲಿಗಾಗಿ ಕಾಯುತ್ತ, ಭಯಾನಕವಾದ ಚಂಡಿಯಂತೆ ವೈರಿ ರುಂಡಗಳನ್ನು ಚೆಂಡಾಡಿದಳು. ಚಂಡಿಯನ್ನು ಕಣ್ಣಾರೆ ಕಂಡಂತೆ ಆದ ಓಬವ್ವಳ ಪತಿಯು ಮೂರ್ಛೆ ಹೋಗದೇ ಇದ್ದುದೇ ಅಚ್ಚರಿಯ ಸಂಗತಿ. ಕಾವಲುಗಾರನು ಧೈರ್ಯಗುಂದಿದವನಲ್ಲ ಆದರೆ ಅಡುಗೆಯ ಮನೆಯ ಕೆಲಸಗಳಲ್ಲಿ ಮಾತ್ರ ಆಕೆಯನ್ನು ಕಂಡಿದ್ದ ಆಕೆಯ ಪತಿಯು ತನ್ನ ಪತ್ನಿಯನ್ನು ವಿಭಿನ್ನ ರೂಪದಲ್ಲಿ ಕಂಡಾಗ ಬವಳಿ ಬಂದಂತೆ ಆಗಿದ್ದು ಆಶ್ಚರ್ಯವಿಲ್ಲ.

ತಕ್ಷಣ ಜಾಗರೂಕನಾದ ಕಾವಲುಗಾರ ವೀರ ಕಹಳೆಯನ್ನು ಊದುತ್ತಲೇ, ಸದಾಕಾಲ ಸಿದ್ಧರಾಗಿಯೇ ಇರುವ ಸೈನ್ಯವು ಶತ್ರುಗಳ ಮೇಲೆ ಆಕ್ರಮಣ ಮಾಡಲು ವೀರಾವೇಶದಿಂದ ಹೊರ ನುಗ್ಗಿದರು. ಸುರಂಗದ ದ್ವಾರದಲ್ಲಿ ನಿಂತು ಚೆಂಡಾಡಿದ ಓಬವ್ವ ತಮ್ಮ ಸೈನ್ಯವು ವೀರಾವೇಶದಿಂದ ನುಗ್ಗುವುದನ್ನು ನೋಡುತ್ತಾ ಮೈಮರೆತಿದ್ದಳು. ಭದ್ರತೆಯ ವಿಷಯದಲ್ಲಿ ಒಂದು ಕ್ಷಣ ಮೈ ಮರೆತರೂ ಎಂಥಾ ಅನಾಹುತವೂ ಆಗಬಹುದು ಎಂಬುದಕ್ಕೆ ಓಬವ್ವಳೇ ಸಾಕ್ಷಿ. ಕೊನೆಯಲ್ಲಿ ಬಂದ ಒಬ್ಬ ಸೈನಿಕ ಆಕೆಯನ್ನು ಹಿಂದಿನಿಂದ ಬಂದು ಇರಿದು ಕೊಂದ. ತನ್ನವರು ಹೆಣಗಳಾಗಿ ಬಿದ್ದಿರುವುದನ್ನು ಕಂಡ ಆ ಸೈನಿಕ, ಓಬವ್ವಳ ಎದುರು ನಿಂತು ಹೋರಾಡುವ ಧೈರ್ಯ ತಾಳದೇ ಹಿಂದಿನಿಂದ ಇರಿದು ಕೊಂದ.

ನೀರನ್ನು ತರಲು ಬಂದಾಕೆ ಒಬ್ಬ ಸಾಮಾನ್ಯ ನಾರಿ. ಆಕೆಯ ಹೆಸರು ಅಲ್ಲಿಯವರೆಗೆ ಎಷ್ಟು ಜನಕ್ಕೆ ಗೊತ್ತಿತ್ತೋ ಅರಿವಿಲ್ಲ. ಮುಂದಿನ, ಬಹುಶ: ಅರ್ಧಘಂಟೆಯಲ್ಲಿ ಕೋಟೆಯನ್ನು ರಕ್ಷಿಸಿದ ಮಹಾತಾಯಿಯಾಗಿ ಗಂಡುಭೂಮಿಯಲ್ಲಿ ಶಾಶ್ವತ ಹೆಸರನ್ನು ಗಳಿಸಿ ಧ್ರುವತಾರೆಯಾಗಿ ಮೆರೆದಳು. ಎಲ್ಲರಲ್ಲೂ ಸಾಮರ್ಥ್ಯವಿದೆ ಎಂಬುದು ನಿತ್ಯಸತ್ಯ. ಎಲ್ಲರ ಜೀವನದಲ್ಲೂ ಒಂದೊಮ್ಮೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂಬುದೂ ಸತ್ಯವೇ. ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಸಾಮರ್ಥ್ಯ ಸಾಬೀತಾಗುತ್ತದೆ. ಊಟ ಮಾಡುತ್ತಿದ್ದ ಪತಿಯನ್ನು ಎಬ್ಬಿಸಿ ಕಹಳೆ ಊದಲು ಕಳುಹಿಸಿದ್ದರೆ ಇಂದಿಗೆ 'ಓಬವ್ವ' ಎಂಬ ಹೆಸರು ಯಾರಿಗೂ ತಿಳಿದಿರುತ್ತಿರಲಿಲ್ಲ. ಏನಂತೀರಿ?

Dailyhunt
Disclaimer: This content has not been generated, created or edited by Dailyhunt. Publisher: Vijay Karnataka