ಬೆಂಗಳೂರು / ಕಲಬುರಗಿ : ಪಂಚ ರಾಜ್ಯಗಳ ಚುನಾವಣೆಯ ನಂತರ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಗಾಳಿ ಬಲವಾಗಿ ಬೀಸುತ್ತಿದೆ. ಹಿಂದೆಯೂ ಇಂತಹ ಗಾಳಿ ಬೀಸುತ್ತಿದ್ದರೂ, ಈಬಾರಿ ಯಾಕೋ ಈ ಬೀಸುತ್ತಿರುವ ಗಾಳಿಯಲ್ಲಿ ಏನೋ ವ್ಯತ್ಯಾಸವಿದೆ ಎನ್ನುವಂತಿದೆ ಕರ್ನಾಟಕದ ರಾಜಕಾರಣ.
ಇದಕ್ಕೆ ಪೂರಕ ಎನ್ನುವಂತೆ ಸಿದ್ದರಾಮಯ್ಯ ಸರ್ಕಾರದ ಸಚಿವರು ಎಐಸಿಸಿ ಅಧ್ಯಕ್ಷರ ಹೆಸರನ್ನು ಮುನ್ನಲೆಗೆ ತರುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೇ 15ರ ನಂತರ ಕರ್ನಾಟಕದ ಕಾಂಗ್ರೆಸ್ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎನ್ನುವ ಸುದ್ದಿಯ ನಡುವೆ, ಎಐಸಿಸಿ ಅಧ್ಯಕ್ಷರು ಆಗಿರುವ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದೆಲ್ಲೋ, ಖರ್ಗೆಯವರು ಮುಖ್ಯಮಂತ್ರಿ ಆದರೆ, ಅದನ್ನು ಸಂತೋಷದಿಂದ ಸ್ವೀಕರಿಸಲಿದ್ದೇವೆ ಎನ್ನುವ ಸಿದ್ದರಾಮಯ್ಯ ಆಪ್ತ ಬಣದ ಹೇಳಿಕೆಗೆ ಒಂದಕ್ಕೊಂದು ಸಿಂಕ್ ಆಗುತ್ತಿದೆ.
ಮತ್ತೆ ಮುನ್ನಲೆಗೆ ಬಂದ ಅಧಿಕಾರ ಹಸ್ತಾಂತರದ ಸುದ್ದಿ
ನನಗೂ ಸಿಎಂ ಆಗುವ ಒತ್ತಡವಿದೆ ಎಂದ ಖರ್ಗೆ
ಕಲಬರುಗಿಯಲ್ಲಿ ಮಾತನಾಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, "ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಂತೂ ಸದ್ಯಕ್ಕೆ ಹೈಕಮಾಂಡ್ ಮುಂದೆ ಇಲ್ಲ. ರಾಜ್ಯದಲ್ಲಿರುವ ಗೊಂದಲವನ್ನು ಆದಷ್ಟು ಬೇಗ ಪರಿಹರಿಸುತ್ತೇವೆ. ನಾನು ರಾಜ್ಯದ ಸಿಎಂ ಆದರೆ ಉತ್ತಮ ಎನ್ನುವ ಮಾತನ್ನು ನಮ್ಮ ಹೈಕಮಾಂಡ್ ಕೂಡಾ ಹೇಳಿದೆ. ಆದರೆ, ಇದನ್ನು ಹಣೆಬರಹ ಎನ್ನುವುದಕ್ಕಿಂತ, ನಮ್ಮ ಸಿದ್ದಾಂತದ ಪ್ರಕಾರ, ಸೋನಿಯಾ ಗಾಂಧಿಯವರು ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ" ಎಂದು ಖರ್ಗೆ ಹೇಳಿದ್ದಾರೆ. ಖರ್ಗೆಯವರ ಹೇಳಿಕೆ, ರಾಜ್ಯದ ಕಾಂಗ್ರೆಸ್ ಗೊಂದಲಕ್ಕೆ ಹೊಸ ಟ್ವಿಸ್ಟ್ ಕೊಡುವ ಸಾಧ್ಯತೆಯಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆಯ ಬೆನ್ನಲ್ಲೇ, ಡಾ.ಯತೀಂದ್ರ ಸಿದ್ದರಾಮಯ್ಯನವರು, ಖರ್ಗೆಯವರು ಸಿಎಂ ಆದರೆ, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಕೂಡಾ, ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಇಲ್ಲವೇ ಇಲ್ಲ ಎಂದ್ರು ಖರ್ಗೆ
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ ಎಂದು ಹೇಳಲು ಒಪ್ಪದ ಮಲ್ಲಿಕಾರ್ಜುನ ಖರ್ಗೆ, ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಎಂದಾದರೆ, ಅದನ್ನು ನಾನು, ಸೋನಿಯಾ ಗಾಂಧಿ ಮತ್ತು ರಾಹುಲ್ ನಿರ್ಧರಿಸುತ್ತೇವೆ, ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ, ಮುಖ್ಯಮಂತ್ರಿ ಬದಲಾವಣೆ ಈ ಅವಧಿಯಲ್ಲಿಇಲ್ಲವೇ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ.ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರಾ?
ಹಾಲೀ ಐದು ವರ್ಷವನ್ನು ಪೂರೈಸಲು ಮತ್ತು ರಾಜ್ಯ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಎರಡೂ ಬಣದ ತಿಕ್ಕಾಟವನ್ನು ತಪ್ಪಿಸಲು, ಮಲ್ಲಿಕಾರ್ಜುನ ಖರ್ಗೆಯವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಸೂಕ್ತ ಎನ್ನುವ ನಿರ್ಧಾರವನ್ನು ಸೋನಿಯಾ ಗಾಂಧಿ, ಹಿಂದೆಯೇ ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ, ಖರ್ಗೆಯವರು, ವಯಸ್ಸಿನ ವಿಚಾರದಲ್ಲಿ ಈ ಕನಸಿನ ಹುದ್ದೆಯನ್ನು ಬೇಡ ಎಂದಿದ್ದರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ಇದೆಲ್ಲಾ, ವಿದ್ಯಮಾನಗಳ ನಡುವೆ ಖರ್ಗೆಯವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.ಸಿಎಂ ಬದಲಾವಣೆ ನನಗೇನೂ ಗೊಂದಲವಿಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್
ಸಿಎಂ ಬದಲಾವಣೆಯ ವಿಚಾರದಲ್ಲಿ ನನ್ನಲ್ಲಿ ಏನೂ ಗೊಂದಲವಿಲ್ಲ, ನಿಮಗೇನಾದರೂ ಗೊಂದಲವಿದ್ದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳಿಕೊಳ್ಳಿ. ಈ ಬಗ್ಗೆ ಬಹಿರಂಗವಾಗಿ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ನಾನು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ, ಏನಿದ್ದರೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎರಡ್ಮೂರು ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಇದ್ದಂತಹ ಸಂದರ್ಭದಲ್ಲಿ, ನಾನೇನು ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ ಎಂದು ಡಿಕೆಶಿ ಹೇಳಿದ್ದರು.ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಮಹೂರ್ತ ಇಟ್ಟಿರುವ ರಾಮನಗರ ಶಾಸಕ
ಹಿಂದೆ ಹಲವು ಬಾರಿ ದಿನಾಂಕವನ್ನು ಹೇಳಿದ್ದೆ, ಆದರೆ, ಈ ಬಾರಿ ನೀಡುವ ದಿನಾಂಕದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಡಿಕೆ ಶಿವಕುಮಾರ್ ಬಣದ ಮತ್ತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಮೇ ಹದಿನೈದರೊಳಗೆ ಡಿಕೆಶಿ ಸಿಎಂ ಆಗುತ್ತಾರೆ. ಅವರ ನೇತೃತ್ವದಲ್ಲಿ ನಾವು ಸಾಕಷ್ಟು ಅಭಿವೃದ್ದಿ ಕೆಲಸವನ್ನು ಮಾಡುವುದಿದೆ ಎಂದು ಶಾಸಕರು ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ, ಖರ್ಗೆಯವರ ಹೇಳಿಕೆ ಕೂಡಾ ಮಹತ್ವವನ್ನು ಪಡೆದುಕೊಂಡಿದೆ.

