ಬೆಂಗಳೂರು: ಕರ್ನಾಟಕದಲ್ಲಿ 2 ಬುಲೆಟ್ ರೈಲು ಕಾರಿಡಾರ್ ನಿರ್ಮಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೈದರಾಬಾದ್ - ಬೆಂಗಳೂರು ಹಾಗೂ ಚೆನ್ನೈ -ಬೆಂಗಳೂರು ನಡುವೆ ಈ ಹೈಸ್ಪೀಡ್ ರೈಲು ಸಂಚರಿಸಲಿದ್ದು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಸೇರಿ 3 ಜಿಲ್ಲೆಗಳಲ್ಲಿ ಒಟ್ಟು 6 ನಿಲ್ದಾಣಗಳು ಬರಲಿವೆ.
ಹೈದರಾಬಾದ್ -ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ (ಎಚ್‌ಎಸ್‌ಆರ್) ಯೋಜನೆಯಿಂದ ಎರಡು ಮಹಾನಗರಗಳ ನಡುವಿನ ಪ್ರಯಾಣದ 8.5 ತಾಸು ಅವಧಿಯಿಂದ ಕೇವಲ 2 ಗಂಟೆಗೆ ಇಳಿಯಲಿದೆ. ಒಟ್ಟು 606 ಕಿ.ಮೀ. ಉದ್ದದ ಈ ಎಚ್‌ಎಸ್‌ಆರ್ ರಾಜ್ಯದಲ್ಲಿ 100.760 ಕಿ.ಮೀ ಹಾದು ಹೋಗಲಿದೆ. ತುಮಕೂರು ಜಿಲ್ಲೆಯಲ್ಲಿ ರಾಜ್ಯವನ್ನು ಪ್ರವೇಶಿಸಲಿರುವ ಈ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಅಲಿಪುರ ಮೊದಲ ನಿಲ್ದಾಣವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಗುವ ಎಚ್‌ಎಸ್‌ಆರ್‌ನ ಮತ್ತೊಂದು ನಿಲ್ದಾಣ ದೇವನಹಳ್ಳಿ ಆಗಿರಲಿದೆ. ಸುರಂಗ ಮಾರ್ಗ ಹಾಗೂ ಮೇಲ್ಸೇತುವೆ ಮೂಲಕ ಈ ಮಾರ್ಗ ಸಾಗಲಿದ್ದು, ಕೋಡಿಹಳ್ಳಿಯಲ್ಲಿ ಮತ್ತೊಂದು ಸ್ಟಾಪ್ ಕೊಡಲಿದೆ.
ಒಟ್ಟು 306 ಕಿ.ಮೀ. ಉದ್ದದ ಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಕೂಡ ಕೋಡಿಹಳ್ಳಿಯನ್ನು ಸಂಪರ್ಕಿಸಲಿದ್ದು, ಇದು ಜಂಕ್ಷನ್ ಆಗುವುದರಿಂದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ. ದಕ್ಷಿಣದ ಪ್ರಮುಖ ಮಹಾನಗರಗಳ ನಡುವಿನ ಕೊಂಡಿಯಾಗಲಿದೆ.
ತಾಸಿಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಸಂಚರಿಸುವ ಎಚ್‌ಎಸ್‌ಆರ್ ರಾಜ್ಯದಲ್ಲಿ ಕೇವಲ 100 ಕಿ.ಮೀ. ಹಾಗೂ 3 ನಿಲ್ದಾಣಗಳಿಗೆ ಸೀಮಿತವಾಗಿದ್ದರೂ, ಲಾಭಗಳು ಹೆಚ್ಚಿರಲಿವೆ. ಹೆಚ್ಚು ಜನರ ಓಡಾಟದ ಹೈದರಾಬಾದ್ ಮತ್ತು ಚೆನ್ನೈ ಎರಡು ನಗರಗಳ ನಡುವಿನ ಸಂಚಾರ ಅವಧಿ 2 ತಾಸುಗಳಿಗೆ ಸೀಮಿತವಾಗುವ ಜತೆಗೆ, ದೇವನಹಳ್ಳಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದೆ. ಕೋಡಿಹಳ್ಳಿ ನಿಲ್ದಾಣವು 'ನಮ್ಮ ಮೆಟ್ರೊ'ಗೆ ಲಿಂಕ್ ಆಗಲಿದೆ.
ಹೈದರಾಬಾದ್ - ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ನಿಲ್ದಾಣಗಳು
| ಕ್ರಮ ಸಂಖ್ಯೆ | ನಿಲ್ದಾಣದ ಹೆಸರು | ಜಿಲ್ಲೆ | ವಿಶೇಷತೆ |
| 1 | ಅಲಿಪುರ (ಗೌರಿಬಿದನೂರು) | ಚಿಕ್ಕಬಳ್ಳಾಪುರ | ಕರ್ನಾಟಕದ ಮೊದಲ ನಿಲ್ದಾಣ |
| 2 | ದೇವನಹಳ್ಳಿ | ಬೆಂಗಳೂರು ಗ್ರಾಮಾಂತರ | ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ |
| 3 | ಕೋಡಿಹಳ್ಳಿ | ಬೆಂಗಳೂರು ನಗರ | ನಮ್ಮ ಮೆಟ್ರೋ ಲಿಂಕ್ ಮತ್ತು ಜಂಕ್ಷನ್ |
ಚೆನ್ಮೈ -ಬೆಂಗಳೂರು ಬುಲೆಟ್ ರೈಲು
ಚೆನ್ನೈ -ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಯು ಒಟ್ಟು 8 ನಿಲ್ದಾಣಗಳನ್ನು ಹೊಂದಿದ್ದು, ರಾಜ್ಯದಲ್ಲಿ ಕೋಲಾರ, ಕೋಡಿಹಳ್ಳಿ, ವೈಟ್‌ಫೀಲ್ಡ್ ಮತ್ತು ಬೈಯ್ಯಪ್ಪನಹಳ್ಳಿಯಲ್ಲಿ ನಾಲ್ಕು ನಿಲ್ದಾಣಗಳು ಇರಲಿವೆ. ಒಟ್ಟು 306 ಕಿ.ಮೀ. ಉದ್ದದ ಈ ಹೈಸ್ಪೀಡ್ ರೈಲು ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿಒಟ್ಟು 100 ಕಿ.ಮೀ. ಹಾದು ಹೋಗಲಿದೆ. ಅದಕ್ಕಾಗಿ ರಾಜ್ಯದಲ್ಲಿ1,358.96 ಹೆಕ್ಟೇರ್ ಭೂಮಿಯನ್ನು ರಾಜ್ಯ ಸರಕಾರ ಕೊಡಬೇಕಿದೆ.ಚೆನ್ನೈ - ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್
| ಕ್ರಮ ಸಂಖ್ಯೆ | ನಿಲ್ದಾಣದ ಹೆಸರು | ಜಿಲ್ಲೆ | ವಿಶೇಷತೆ |
| 1 | ಕೋಲಾರ | ಕೋಲಾರ | ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ |
| 2 | ಕೋಡಿಹಳ್ಳಿ | ಬೆಂಗಳೂರು ನಗರ | ಹೈದರಾಬಾದ್ ಮಾರ್ಗದೊಂದಿಗೆ ಜಂಕ್ಷನ್ |
| 3 | ವೈಟ್‌ಫೀಲ್ಡ್ | ಬೆಂಗಳೂರು ನಗರ | ಐಟಿ ವಲಯದ ಜನರಿಗೆ ಅನುಕೂಲ |
| 4 | ಬೈಯ್ಯಪ್ಪನಹಳ್ಳಿ | ಬೆಂಗಳೂರು ನಗರ | ಪ್ರಮುಖ ಸಾರಿಗೆ ಹಬ್ ಮತ್ತು ಮೆಟ್ರೋ ಸಂಪರ್ಕ |
ಯೋಜನೆಯ ಮುಖ್ಯಾಂಶಗಳು
- ಗರಿಷ್ಠ ವೇಗ: ಗಂಟೆಗೆ 350 ಕಿ.ಮೀ.
- ಪ್ರಯಾಣದ ಸಮಯ: ಹೈದರಾಬಾದ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಕೇವಲ 2 ಗಂಟೆ.
- ಭೂಸ್ವಾಧೀನ: ರಾಜ್ಯ ಸರ್ಕಾರವು ಒಟ್ಟು 1,358.96 ಹೆಕ್ಟೇರ್ ಭೂಮಿಯನ್ನು ಒದಗಿಸಬೇಕಿದೆ.
- ಸಂಪರ್ಕ: ಈ ರೈಲು ನಿಲ್ದಾಣಗಳು ಮೆಟ್ರೋ ಮತ್ತು ವಿಮಾನ ನಿಲ್ದಾಣದೊಂದಿಗೆ ಸಮನ್ವಯ ಸಾಧಿಸಲಿವೆ.

