ರಾಯಚೂರು: ಮಳೆಗಾಲ ಆರಂಭವಾಗಿ 2 ತಿಂಗಳು ಮುಗಿದರೂ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಗ್ಗಿಲ್ಲ. ಕಳೆದ 2 ವರ್ಷಕ್ಕೆ ಹೋಲಿಸಿದರೆ ಸದ್ಯ 300 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಮಳೆ ಕೊರತೆಯೇ ಇದಕ್ಕೆ ಮೂಲ ಕಾರಣವಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ಪ್ರಮಾಣ ಹೆಚ್ಚಾದಂತೆ ಕೃಷಿ ಪಂಪ್‌ಸೆಟ್, ಮನೆಗಳಲ್ಲಿ ಕೂಲರ್, ಸಾಮಾನ್ಯ ಫ್ಯಾನ್‌ಗಳ ಬಳಕೆ ಸೇರಿ ವಿದ್ಯುತ್ ಬೇಡಿಕೆ ಸ್ವಲ್ಪಮಟ್ಟಿಗೆ ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಇರುವ ಕಾರಣ ಸಹಜವಾಗಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಿದೆ.
ಎಷ್ಟು ಹೆಚ್ಚಳ
ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿದಿನ ಅಂದಾಜು 200 ರಿಂದ 220 ಮಿಲಿಯನ್ ಯೂನಿಟ್ ಬಳಕೆಯಾಗುತ್ತಿದ್ದ ವಿದ್ಯುತ್ ಪ್ರಮಾಣ ಈಗ ಹೆಚ್ಚಿದೆ. ಗ್ರಾಹಕರ ಬೇಡಿಕೆ ಪೂರೈಸಲು ರಾಜ್ಯದ ನಾನಾ ವಿದ್ಯುತ್ ಉತ್ಪಾದನಾ ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಥರ್ಮಲ್, ಸೋಲಾರ್, ಹೈಡ್ರೊ, ವಿಂಡ್ ಸೇರಿ ಮುಂತಾದ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಈ ಎಲ್ಲ ಮೂಲಗಳಿಂದ ಉತ್ಪಾದನೆಗೊಳ್ಳುತ್ತಿರುವ 300 ಮಿಲಿಯನ್ ಯೂನಿಟ್ ವಿದ್ಯುತ್ ಪ್ರತಿದಿನ ಬಳಕೆಯಾಗುತ್ತಿದೆ.ಕಲ್ಲಿದ್ದಲು ಸಂಗ್ರಹ
ಪ್ರತಿ ದಿನ 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ ಆರ್‌ಟಿಪಿಎಸ್‌ನಲ್ಲಿ ಒಟ್ಟು 8ರ ಪೈಕಿ 5 ಘಟಕಗಳು ಸೇವೆಯಲ್ಲಿದ್ದು, ಒಂದು ಆ.6 ರಂದು ಪುನಾರಂಭವಾಗಲಿದೆ. ಇನ್ನೆರಡು ತಾಂತ್ರಿಕ ತೊಂದರೆಯಿಂದ ಉತ್ಪಾದನೆ ಸ್ಥಗಿತಗೊಳಿಸಿವೆ. ಪ್ರಸ್ತುತ ಆರ್‌ಟಿಪಿಎಸ್‌ನಿಂದ ಅಂದಾಜು 1090 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇಲ್ಲಿ ಪ್ರಸ್ತುತ ಅಂದಾಜು 1.70 ಲಕ್ಷ ಟನ್ ಕಲ್ಲಿದ್ದಲು ದಾಸ್ತಾನು ಮಾಡಲಾಗಿದ್ದು, 10ರಿಂದ 11ದಿನಗಳಿಗೆ ಸಾಕಾಗಲಿದೆ.ಅದೇ ರೀತಿ ವೈಟಿಪಿಎಸ್‌ನ ತಲಾ 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 2 ಘಟಕಗಳಲ್ಲಿ ಒಂದು ವಾರ್ಷಿಕ ದುರಸ್ತಿಯಲ್ಲಿದ್ದು, ಇನ್ನೊಂದು ಮಾತ್ರ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. 2 ಲಕ್ಷ ಟನ್ ಕಲ್ಲಿದ್ದಲು ಪ್ರಸ್ತುತ ದಾಸ್ತಾನಿದ್ದು, 12ದಿನಕ್ಕಾಗುತ್ತದೆ. ಸೋಲಾರ್ ಹಾಗೂ ಪವನ ಸೇರಿ 7 ಸಾವಿರ ಮೆ.ವ್ಯಾ. ವಿದ್ಯುತ್ ಸದ್ಯ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಬೇಡಿಕೆ ಇದೇ ರೀತಿ ಮುಂದುವರಿದರೆ ನಿರಂತರ ಉತ್ಪಾದನೆಗಾಗಿ ಹೆಚ್ಚು ಕಲ್ಲಿದ್ದಲು ಪೂರೈಕೆ ಮಾಡುವುದು ಅನಿವಾರ್ಯವಾಗಲಿದೆ.
ಸಮತೋಲನ ಅನಿವಾರ್ಯ
ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಅಗತ್ಯವಿರುವ ಈ ಸಂದರ್ಭ ಥರ್ಮಲ್ ಜತೆಗೆ ಸೋಲಾರ್, ವಿಂಡ್ ಸೇರಿ ನಾನಾ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬೇಡಿಕೆ ಮತ್ತು ಉತ್ಪಾದನೆಯ ಮಧ್ಯೆ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯ. ಒಟ್ಟಾರೆ, ಮಳೆ ಕೊರತೆಯೇ ವಿದ್ಯುತ್ ಬಳಕೆ ಹೆಚ್ಚಿಸಿರುವುದು ಈ ಬಾರಿಯ ಮಳೆಗಾಲದ ವೈರುಧ್ಯವಾಗಿದೆ."ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆ ಸುರಿದಿಲ್ಲ. ಮಳೆಗಾಲ ಆರಂಭವಾಗಿ 2 ತಿಂಗಳಾದರೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಮಳೆಗಾಲದ ಸಂದರ್ಭ ಹೆಚ್ಚು ವಿದ್ಯುತ್ ಬೇಡಿಕೆ ಕಂಡುಬಂದಿರುವುದು ಈ ಬಾರಿ ಮಾತ್ರ. ಬೇಡಿಕೆಗನುಗುಣವಾಗಿ ನಾನಾ ಮೂಲಗಳಿಂದ ಉತ್ಪಾದನೆಯಾಗಿರುವ ಅಂದಾಜು 300 ಮಿಲಿಯನ್ ಯೂನಿಟ್ ವಿದ್ಯುತ್ ಸದ್ಯ ರಾಜ್ಯದಲ್ಲಿ ಬಳಕೆಯಾಗುತ್ತಿದೆ."
-ರಮೇಶ್.ಎಚ್.ಆರ್., ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್, ಶಕ್ತಿನಗರ

