ಮುಂಬೈ: ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಕಳೆದೊಂದು ತಿಂಗಳನಿಂದ ನಗುವುದನ್ನೇ ಮರೆತಿದ್ದ ಷೇರು ಮಾರುಕಟ್ಟೆ, ಇಂದು (ಏ.8-ಬುಧವಾರ) ಮುಗುಳ್ನಗೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಷೇರುಪೇಟೆ ವಹಿವಾಟು ಮುಕ್ತಾಯದ ಸಮಯದಲ್ಲಿ ಸೆನ್ಸೆಕ್ಸ್ 2,946 ಪಾಯಿಂಟ್‌ಗಳಿಗೂ ಹೆಚ್ಚು ಏರಿಕೆಯಾಗಿ 77,562ಕ್ಕೆ ಮುಕ್ತಾಯವಾದರೆ, ನಿಫ್ಟಿ 50 ಸುಮಾರು 874 ಪಾಯಿಂಟ್‌ಗಳ ಏರಿಕೆಯಾಗಿ 23,997 ಕ್ಕೆ ಮುಕ್ತಾಯವಾಯಿತು. ಸೆನ್ಸೆಕ್ಸ್ ಶೇ. 3.95ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ. 3.78ರಷ್ಟು ಏರಿಕೆ ಕಂಡಿದೆ.
ಈ ತೀವ್ರ ಏರಿಕೆಯು ಬಿಎಸ್‌ಇ-ಪಟ್ಟಿಮಾಡಿದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣಕ್ಕೆ ಸುಮಾರು 16.59 ಲಕ್ಷ ಕೋಟಿ ರೂ.ಗಳನ್ನು ಸೇರಿಸಿದ್ದು, ಅದನ್ನು 446 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಅಂದರೆ ಒಂದೇ ದಿನದಲ್ಲಿ ಹೂಡಿಕೆದಾರರು ಬರೋಬ್ಬರಿ 16 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಲಾಭ ಗಳಿಸಿದ್ದಾರೆ.
ಬ್ಲಾಕ್ ಟ್ರೇಡ್‌ನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರು ಮೌಲ್ಯವು ಮೌಲ್ಯವು 18.05 ರೂ. ಅಥವಾ ಶೇ. 4.98ರಷ್ಟು ಏರಿಕೆಯಾಗಿ, 80.75ರೂ.ಗೆ ವಹಿವಾಟು ನಡೆಸುತ್ತಿದೆ. ಐದು ದಿನಗಳ ಸರಾಸರಿ 11,93,120 ಷೇರುಗಳಿಗೆ ಹೋಲಿಸಿದರೆ ಸಂಪುಟಗಳು 24,53,835 ಷೇರುಗಳಿಗೆ ಏರಿದ್ದು, ಶೇ. 105.67ರಷ್ಟು ಹೆಚ್ಚಳವಾಗಿದೆ.
ಅದೇ ರೀತಿ ಅದಾನಿ ಪವರ್‌ನ ಷೇರು ಮೌಲ್ಯವು 168.75ಕ್ಕೆ ವಹಿವಾಟು ನಡೆಸುತ್ತಿದ್ದು,5.35 ರೂ. ಅಥವಾ ಶೇ. 3.27ಕ್ಕೆ ಹೆಚ್ಚಾಗಿದೆ. ಷೇರುಗಳು ದಿನದ ವಹಿವಾಟಿನಲ್ಲಿ 174.25 ರೂ. ಗರಿಷ್ಠ ಮತ್ತು 166.20 ರೂ. ಕನಿಷ್ಠ ಮಟ್ಟವನ್ನು ತಲುಪಿವೆ. ಸಂಪುಟಗಳು 78,91,171 ಷೇರುಗಳಿಗೆ ಏರಿದ್ದು, ಐದು ದಿನಗಳ ಸರಾಸರಿ 19,69,607 ಷೇರುಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಇದು ಶೇ. 300.65ರಷ್ಟು ತೀವ್ರ ಏರಿಕೆಯಾಗಿದೆ.
ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೇ ಸೆನ್ಸೆಕ್ಸ್ ಮತ್ತು ನಿಫ್ಟಿ ಹಸಿರು ಬಣ್ಣದಲ್ಲಿ ವ್ಹಿವಾಟು ನಡೆಸಲಾರಂಭಿಸಿತು. ಇದು ಸಹಜವಾಗಿ ಹೂಡಿಕೆದಾರರ ಸಂತಸಕ್ಕೆ ಕಾರಣವಾಯಿತು. ಮಧ್ಯಪ್ರಾಚ್ಯ ಕದನ ವಿರಾಮ ಒಪ್ಪಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೈತನ್ಯ ತುಂಬಿರುವುದು ಸ್ಪಷ್ಟವಾಗಿದೆ.
ಇನ್ನು ಸರಕು ಮಾರುಕಟ್ಟೆ ವಹಿವಾಟನ್ನು ಗಮನಿಸುವುದಾದರೆ, ಕಡಿಮೆ ಬೇಡಿಕೆಯಿಂದಾಗಿ ಅಲ್ಯೂಮಿನಿಯಂ ಫ್ಯೂಚರ್ ಬೆಲೆಗಳು ಕುಸಿತ ಕಂಡಿದ್ದು, ಪ್ರತಿ ಕೆಜಿಗೆ 1.20 ರೂ. ಇಳಿಕೆಯಾಗಿ 356.30 ರೂ.ಗೆ ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಮೇ ತಿಂಗಳಲ್ಲಿ ವಿತರಣೆಗಾಗಿ ಅಲ್ಯೂಮಿನಿಯಂ 64 ಲಾಟ್‌ಗಳಲ್ಲಿ ಪ್ರತಿ ಕೆಜಿಗೆ 1.20 ರೂ. ಅಥವಾ ಶೇ. 0.34ರಷ್ಟು ಇಳಿಕೆಯಾಗಿ 356.30 ರೂ.ಗೆ ತಲುಪಿತು.
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಪರಿಣಾಮವಾಗಿ, ಅಮೆರಿಕದ ಷೇರು ಮಾರುಕಟ್ಟೆಗಳಲ್ಲೂ ಹೊಸ ಹುರುಪು ನೋಡಬಹುದಾಗಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ತರೆದಿರುವುದರಿಂದ, ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಕುಸಿದಿದೆ.

