Dailyhunt Logo
  • Light mode
    Follow system
    Dark mode
    • Play Story
    • App Story
ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ಬೇಸರದಲ್ಲಿ 17 ವರ್ಷದ ಮಹಿಳಾ ಕ್ರಿಕೆಟರ್ ಆತ್ಮಹತ್ಯೆ; ನಾಗ್ಪುರದಲ್ಲಿ ಮನಕಲಕುವ ಘಟನೆ

ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ಬೇಸರದಲ್ಲಿ 17 ವರ್ಷದ ಮಹಿಳಾ ಕ್ರಿಕೆಟರ್ ಆತ್ಮಹತ್ಯೆ; ನಾಗ್ಪುರದಲ್ಲಿ ಮನಕಲಕುವ ಘಟನೆ

Vijay Karnataka 1 week ago

ನಾಗ್ಪುರ: ಉನ್ನತ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆಮನನೊಂದು 17 ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟ್ ಪಟುವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದದಿಂದ ವರದಿಯಾಗಿದೆ. ಬಜಾಜ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿ ನಗರದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.

ಅದಿತಿ ಚೌಖಂಡೆ (17) ಮೃತಪಟ್ಟ ಅಪ್ರಾಪ್ತ ವಯಸ್ಸಿನ ಯುವತಿಯಾಗಿದ್ದಾಳೆ. ಮೂಲತಃ ಅಕೋಲಾ ಜಿಲ್ಲೆಯವರಾದ ಅದಿತಿ, ನಾಗ್ಪುರದಲ್ಲಿ ತಮ್ಮ ತಾಯಿ ಮತ್ತು ಅಣ್ಣನೊಂದಿಗೆ ವಾಸಿಸುತ್ತಿದ್ದರು. ಆಕೆಯ ತಂದೆ ಅಕೋಲಾದಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅದಿತಿ, ಉದಯೋನ್ಮುಖ ಕ್ರಿಕೆಟರ್ ಆಗಿರುವ ತಮ್ಮ ಸಹೋದರ ಪ್ರಬಲ್ ಅವರೊಂದಿಗೇ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದರು.

ಬುಧವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡಿದ ನಂತರ ಅದಿತಿ ತಮ್ಮ ಕೊಠಡಿಗೆ ತೆರಳಿದ್ದು, ಆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಆಕೆಯ ಸಹೋದರ ಊರಿನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಡೆತ್ ನೋಟ್ ನಲ್ಲಿ ಏನಿದೆ?

ಘಟನಾ ಸ್ಥಳದಿಂದ ಪೊಲೀಸರು ಡೆತ್ ನೋಟ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಅದಿತಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದು, "ದಾದಾ (ಅಣ್ಣ), ನೀನು ತುಂಬಾ ಚೆನ್ನಾಗಿ ಆಡುತ್ತೀಯ. ನೀನು ದೊಡ್ಡ ಮಟ್ಟಕ್ಕೆ ಬೆಳೆಯುತ್ತೀಯ. ನಮ್ಮ ಪೋಷಕರು ಹೆಮ್ಮೆಪಡುವಂತೆ ಮಾಡು. ನಾನು ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಬೇಸರ ನನಗಿದೆ..." ಎಂದು ಬರೆದಿಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದೊಡ್ಡ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ಕಾರಣ ಉಂಟಾದ ತೀವ್ರ ನಿರಾಶೆಯಿಂದಲೇ ಬಾಲಕಿ ಈ ಕಠಿಣ ನಿರ್ಧಾರ ಕೈಗೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಚೇತನ್ ಚೌಹಾಣ್ ತಿಳಿಸಿದ್ದಾರೆ. ಸದ್ಯ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಇಂತಹ ಘಟನೆಗೆ ಕಾರಣಗಳೇನು?

ಕ್ರೀಡಾಲೋಕದಲ್ಲಿ ತೀವ್ರ ಸ್ಪರ್ಧೆ, ಆಯ್ಕೆಯಾಗದ ನಿರಾಶೆ, ಸೋಲಿನ ಭಯ ಹಾಗೂ ಮಾನಸಿಕ ಒತ್ತಡ ತಾಳಲಾರದೆ ಯುವ ಹಾಗೂ ಅನುಭವಿ ಕ್ರೀಡಾಪಟುಗಳು ದುರಂತ ಅಂತ್ಯ ಕಂಡ ಹಲವು ದಾರುಣ ನಿದರ್ಶನಗಳು ದೇಶ ವಿದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿವೆ. 2020ರಲ್ಲಿ ಮುಂಬೈ ಮೂಲದ 27 ವರ್ಷಧ ಉದಯೋನ್ಮುಖ ಮಧ್ಯಮ ವೇಗದ ಬೌಲರ್ ಕರಣ್ ತಿವಾರಿ ಅವರು ಐಪಿಎಲ್ (IPL) ಹರಾಜಿನ ಜೊತೆಗೆ ರಾಜ್ಯ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗದ ಕಾರಣ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಮ್ಮ ಸ್ನೇಹಿತರ ಬಳಿ "ನನಗೆ ಉನ್ನತ ತಂಡದಲ್ಲಿ ಆಡಲು ಅವಕಾಶ ಸಿಗುತ್ತಿಲ್ಲ" ಎಂದು ಬೇಸರ ತೋಡಿಕೊಂಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ, ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಇದೀಗ ಅಂತಹದ್ದೇ ಘಟನೆ ನಾಗ್ಪುರದಲ್ಲಿ ನಡೆದಿದೆ. ಬಹಳ ಸೂಕ್ಷ್ಮ ಮನಸ್ಸಿನ ಇಂದಿನ ಯುವ ಜನಾಂಗ ಸಣ್ಣಪುಟ್ಟ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಂತಹ ದುರ್ಘಟನೆಗಳಿಗೆ ಕಾರಣವಾಗಿದೆ. ಹೀಗಾಗಿ ಕ್ರೀಡಾಪಟುಗಳು ಸಣ್ಣ ಪುಟ್ಟ ಹಿನ್ನಡೆಗಳನ್ನು ಬದುಕಿನಿಂದ ಸೋಲೆಂದು ಪರಿಭಾವಿಸದೇ ಸವಾಲಾಗಿ ಸ್ವೀಕರಿಸಬೇಕು ಎಂಬುದು ವಿಜಯ ಕರ್ನಾಟಕದ ಕಳಕಳಿಯಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka