ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಟನಲ್ ರಸ್ತೆ ನಿರ್ಮಾಣ ಹಾಗೂ ಉದ್ಯಾನಗಳ ಶೇ 5ರಷ್ಟು ಜಾಗ ಮಾರಾಟ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಂಡಿಸಿದ್ದು, ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.ಭಾನುವಾರ ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಂಪೇಗೌಡ ಗೋಪುರ ಬಳಿ ಬಂಡೆಗಳನ್ನು ಅಪ್ಪಿಕೊಂಡು, ನಟ ರಾಜ್ ಕುಮಾರ್ ಅವರ ಗಂಧದ ಗುಡಿ ಸಿನಿಮಾ ಗೀತೆ ಹಾಡಿ, "ಇದು ಟ್ರೈಲರ್ ಅಷ್ಟೇ, ಪಿಕ್ಚರ್ ಬಾಕಿ ಇದೆ " ಎಂದ ಸಂಸದರು ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಬೆಂಗಳೂರು ಪಾರ್ಕ್‌ಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಸಾವಿರಾರು ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಾಲ್‌ಬಾಗ್ ಉಳಿಸಿ ಎಂದು ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿದ ತೇಜಸ್ವಿ ಸೂರ್ಯ, " ಒಂದು ಸತ್ಕಾರ್ಯಕ್ಕಾಗಿ, ನ್ಯಾಯಯುತ ಕಾರಣಕ್ಕಾಗಿ ನಾವು ಧ್ವನಿ ಎತ್ತಿ ನಿಂತರೆ, ಜನ ನಮ್ಮೊಂದಿಗೆ ಕೈಜೋಡಿಸುತ್ತಾರೆ ಎಂಬುದಕ್ಕೆ ಇಂದಿನ ಈ ಒಗ್ಗಟ್ಟು ಹೊಸ ಭರವಸೆಯನ್ನು ಮೂಡಿಸಿದೆ. ಜಾಥಾದ ನೇತೃತ್ವ ವಹಿಸಿದ್ದ 91 ವರ್ಷದ ಹಿರಿಯರಾದ ಯಲ್ಲಪ್ಪ ರೆಡ್ಡಿ ಅವರಿಂದ ಹಿಡಿದು, ಆರು ತಿಂಗಳ ಹಸುಗೂಸುಗಳವರೆಗೆ ತನ್ನ ಹಸಿರನ್ನು ಮತ್ತು ಉದ್ಯಾನವನಗಳನ್ನು ಉಳಿಸಿಕೊಳ್ಳಲು ಇಡೀ ಬೆಂಗಳೂರೇ ಒಟ್ಟಾಗಿ ನಿಂತಿತು. ಎಂಥಾ ಸುಂದರ ನಗರ, ಎಂಥಾ ಅದ್ಭುತ ಜನತೆ " ಎಂದರು.
ಪ್ರತಿ ವಾರ ಹೋರಾಟ
"ಸರ್ಕಾರವು ಉದ್ಯಾನವನಗಳ ಶೇ. 5ರಷ್ಟು ಜಾಗದ ಪರಭಾರೆ ಕಾನೂನನ್ನು ಹಿಂಪಡೆಯುವವರೆಗೂ ಮತ್ತು ಪರಿಸರಕ್ಕೆ ಮಾರಕವಾದ 'ಸುರಂಗ ರಸ್ತೆ' (ಟನಲ್ ರೋಡ್) ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ನಮ್ಮ ಈ ಹೋರಾಟ ಮುಂದುವರಿಯಲಿದೆ. ಬೆಂಗಳೂರಿನ ವಿವಿಧ ಉದ್ಯಾನವನಗಳಲ್ಲಿ ಇನ್ನು ಮುಂದೆ ಪ್ರತಿ ಭಾನುವಾರವೂ ನಮ್ಮ ಈ ಹೋರಾಟ ಮುಂದುವರಿಯಲಿದೆ. ಸರ್ಕಾರ ಜನಸಾಮಾನ್ಯರ ಧ್ವನಿಯನ್ನು ಆಲಿಸಿ, ತನ್ನ ತಪ್ಪನ್ನು ತಿದ್ದಿಕೊಂಡು, ಈ ಅವಿವೇಕದ ನಿರ್ಧಾರವನ್ನು ನಿಲ್ಲಿಸುವವರೆಗೂ ಇದನ್ನು ಬೃಹತ್ ಜನ ಆಂದೋಲನವಾಗಿ ರೂಪಿಸುತ್ತೇವೆ. ಬೆಂಗಳೂರಿನ ಉದ್ಯಾನವನಗಳು ಜನಸಾಮಾನ್ಯರಿಗೆ ಸೇರಿದವು. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ " ಎಂದರು.
