ಹಿಂದೂ ಧರ್ಮದಲ್ಲಿ ಯಾವುದೇ ಮಂಗಳಕರ ಕಾರ್ಯವನ್ನು ಮಾಡಬೇಕಾದರೂ, ಧಾರ್ಮಿಕ ಚಟುವಟಿಕೆಗಳನ್ನು ಮಾಡಬೇಕಾದರೂ ತೆಂಗಿನಕಾಯಿಯನ್ನು ಕಡ್ಡಾಯವಾಗಿ ಬಳಸುತ್ತಾರೆ. ತೆಂಗಿನಕಾಯಿಯಿಲ್ಲದೆ ಮಾಡುವ ಪೂಜೆಯು ಯಾವುದೇ ಫಲವನ್ನು ನೀಡುವುದಿಲ್ಲ ಎನ್ನುವ ನಂಬಿಕೆ ನಮ್ಮಲ್ಲಿದೆ. ತೆಂಗಿನಕಾಯಿಯನ್ನು ನಮ್ಮ ಪೂಜೆಯಲ್ಲಿ ಶುಭ ಫಲಗಳನ್ನು ತಂದುಕೊಡುವುದು ಮಾತ್ರವಲ್ಲ, ದೈವಿಕ ಆಶೀರ್ವಾದವನ್ನೂ ಪಡೆಯಲು ಸಹಾಯ ಮಾಡುವುದು.
ಹಾಗಾಗಿ ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ. ಶ್ರೀಫಲ ಎಂದರೆ ಪವಿತ್ರ ಫಲ ಅಂದರೆ ಹಣ್ಣು ಎಂಬುದಾಗಿದೆ. ಅವುಗಳನ್ನು ಬಹುತೇಕ ಎಲ್ಲಾ ಶುಭ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಆದರೆ, ಈ ಎಲ್ಲಾ ತೆಂಗಿನಕಾಯಿಗಳಲ್ಲೂ ಏಕಾಕ್ಷಿ ತೆಂಗಿನಕಾಯಿ ಅತ್ಯಂತ ವಿಶೇಷ. ನೀವು ಎಂದಾದರೂ ಈ ಏಕಾಕ್ಷಿ ತೆಂಗಿನಕಾಯಿಯ ಬಗ್ಗೆ ಕೇಳಿದ್ದೀರಾ.? ಏಕಾಕ್ಷಿ ತೆಂಗಿನಕಾಯಿ ಅತ್ಯಂತ ಅಪರೂಪದ ಫಲವಾಗಿದೆ. ಇದು ಪೂಜೆಯಲ್ಲಿ ಅತ್ಯಂತ ಶುಭವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಏಕಾಕ್ಷಿ ತೆಂಗಿನಕಾಯಿಯು ಲಕ್ಷ್ಮಿ ದೇವಿಯ ರೂಪವೆಂದು ಹೇಳಲಾಗುತ್ತದೆ. ಯಾವ ವ್ಯಕ್ತಿ ಏಕಾಕ್ಷಿ ತೆಂಗಿನಕಾಯಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾನೆಯೋ ಅವನ ಅದೃಷ್ಟ ಬದಲಾಗುವುದು ಹಾಗೂ ಅವನು ಶ್ರೀಮಂತಿಕೆಯನ್ನು ಪಡೆದುಕೊಳ್ಳುವನು. ತೆಂಗಿನಕಾಯಿಗಳು ಸಾಮಾನ್ಯವಾಗಿ 3 ಕಣ್ಣುಗಳನ್ನು ಹೊಂದಿರುತ್ತದೆ. ಆದರೆ, ಏಕಾಕ್ಷಿ ತೆಂಗಿನಕಾಯಿ ಕೇವಲ ಒಂದೇ ಒಂದು ಕಣ್ಣನ್ನು ಹೊಂದಿರುತ್ತದೆ. ಇದು ಅತ್ಯಂತ ಅಪರೂಪದ ಕಾಯಿಯಾಗಿದೆ.
1. ಏಕಾಕ್ಷಿ ತೆಂಗಿನಕಾಯಿ ಹೇಗಿರುತ್ತೆ.?
ಏಕಾಕ್ಷಿ ತೆಂಗಿನಕಾಯಿಯೆಂದರೆ ಕೇವಲ ಒಂದೇ ಒಂದು ಕಣ್ಣನ್ನು ಹೊಂದಿರುವ ತೆಂಗಿನಕಾಯಿಯಾಗಿದೆ. ಈ ತೆಂಗಿನಕಾಯಿಗಳು ಸ್ಪಷ್ಟವಾದ ಕೇವಲ ಒಂದೇ ಒಂದು ಕಣ್ಣನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತೆಂಗಿನಕಾಯಿಗೆ ಮೂರು ರಂಧ್ರಗಳಿರುತ್ತವೆ, ಇದನ್ನು ಎರಡು ಕಣ್ಣುಗಳು ಮತ್ತು ಒಂದು ಮುಖ ಎಂದು ಕರೆಯಲಾಗುತ್ತದೆ. ತೆಂಗಿನಕಾಯಿಯ ಮೇಲೆ ಮೂರು ಲಂಬ ರೇಖೆಗಳು ಸಹ ಗೋಚರಿಸುತ್ತವೆ, ಆದರೆ ಒಂದು ಕಣ್ಣಿನ ತೆಂಗಿನಕಾಯಿಯ ಮೇಲೆ ಅಂದರೆ, ಏಕಾಕ್ಷಿ ತೆಂಗಿನಕಾಯಿಯ ಮೇಲೆ ಕೇವಲ ಒಂದೇ ರಂಧ್ರವಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಒಂದು ಕಣ್ಣಿನ ತೆಂಗಿನಕಾಯಿಯನ್ನು ಹೊಂದಿರುವವರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಆರ್ಥಿಕ ತೊಂದರೆಗಳಿಂದ ಮುಕ್ತರಾಗುತ್ತಾರೆ. ಒಂದು ಕಣ್ಣಿನ ತೆಂಗಿನಕಾಯಿಯನ್ನು ಒಡೆಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
2. ಏಕಾಕ್ಷಿ ತೆಂಗಿನಕಾಯಿಯ ಪ್ರಯೋಜನಗಳು:
ತೆಂಗಿನಕಾಯಿಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ, ಏಕಾಕ್ಷಿ ತೆಂಗಿಕಾಯಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಲಾಭ ಬರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಒಬ್ಬ ವ್ಯಕ್ತಿಯು ಏಕಾಕ್ಷಿ ತೆಂಗಿನಕಾಯಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಏಕಾಕ್ಷಿ ತೆಂಗಿನಕಾಯಿಯನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದನ್ನು ಮನೆಯಲ್ಲಿ ಇಡುವುದರಿಂದ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸನ್ನು ಸಾಧಿಸಲಾಗುತ್ತದೆ.
3. ಪೂಜೆಯಲ್ಲಿ ಏಕಾಕ್ಷಿ ತೆಂಗಿನಕಾಯಿ:
ಪೂಜೆಯಲ್ಲೂ ನೀವು ಏಕಾಕ್ಷಿ ತೆಂಗಿನಕಾಯಿಯನ್ನು ಬಳಸಬಹುದಾಗಿದೆ. ಪೂಜೆಯಲ್ಲಿ ಏಕಾಕ್ಷಿ ತೆಂಗಿನಕಾಯಿಯನ್ನು ಬಳಸುವುದಾದರೆ ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಏಕಾಕ್ಷಿ ತೆಂಗಿನಕಾಯಿಯನ್ನು ಸುತ್ತಿ ಅದರ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ ಅದನ್ನು ಪೂಜಿಸಿ. ನಂತರ ಈ ಏಕಾಕ್ಷಿ ತೆಂಗಿನಕಾಯಿಯನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ಹಣ ಇಡುವ ಸ್ಥಳದಲ್ಲಿ ಇಟ್ಟುಕೊಳ್ಳಿ. ಇದರಿಂದ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ಇದು ನಿಮ್ಮ ಜೀವನದಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುವುದು. ದೀಪಾವಳಿ, ಹೋಳಿ, ರವಿ-ಪುಷ್ಯ, ಗುರು-ಪುಷ್ಯ ಮತ್ತು ಗ್ರಹಣಗಳಂತಹ ವಿಶೇಷ ಶುಭ ಸಮಯಗಳಲ್ಲಿ ಒಂದು ಕಣ್ಣಿನ ತೆಂಗಿನಕಾಯಿಯ ಮೇಲೆ ಷೋಡಶೋಪಚಾರ ಪೂಜೆಯನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತವಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಏಕಾಕ್ಷಿ ತೆಂಗಿನಕಾಯಿ ಸಂಪತ್ತನ್ನು ಆಕರ್ಷಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ.
4. ಏಕಾಕ್ಷಿ ತೆಂಗಿನಕಾಯಿ ಎಲ್ಲಿ ಹೆಚ್ಚಾಗಿ ಸಿಗುವುದು.?
ಏಕಾಕ್ಷಿ ತೆಂಗಿನಕಾಯಿಗಳು ಸುಲಭವಾಗಿ ಸಿಗುವಂತಹ ತೆಂಗಿನಕಾಯಿಯಲ್ಲ. ಅದು ಅತ್ಯಂತ ವಿರಳ ತಳಿಯ ತೆಂಗಿನಕಾಯಿಯಾಗಿದೆ. ಏಕಾಕ್ಷಿ ತೆಂಗಿನಕಾಯಿಗಳು ಎಲ್ಲಾ ಅಂಗಡಿಗಳಲ್ಲೂ ಸಿಗುವುದಿಲ್ಲ. ಕೆಲವೊಮ್ಮೆ ಅದರಲ್ಲೂ ತೀರ ಅಪರೂಪವಾಗಿ ಕೆಲವೊಂದು ದೇವಸ್ಥಾನಗಳಲ್ಲಿ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗಬಹುದು.
ಒಂದು ವೇಳೆ ನಿಮಗೆ ಎಲ್ಲಾದರೂ ಏಕಾಕ್ಷಿ ತೆಂಗಿನಕಾಯಿ ದೊರೆತರೆ ಅದನ್ನು ಎಸೆಯಬೇಡಿ ಅಥವಾ ಒಡೆಯಬೇಡಿ. ಅದನ್ನು ಪೂಜೆಯಲ್ಲಿ ಬಳಸಿ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅಥವಾ ಅದನ್ನು ಮರವಾಗಿಯೂ ಮನೆಯಲ್ಲಿ ಬೆಳೆಸಬಹುದು. ಇದು ನಿಮಗೆ ಲಕ್ಷ್ಮಿಯನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಈ ತೆಮಗಿನಕಾಯಿಯಿದ್ದರೆ ಹಣದ ಸಮಸ್ಯೆಗಳು ದೂರಾಗುವುದು.

