Dailyhunt Logo
  • Light mode
    Follow system
    Dark mode
    • Play Story
    • App Story
ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗಕ್ಕೆ ಸು'ಭದ್ರ' ಬದುಕು ನೀಡಿದ ಜಲಾಶಯ

ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗಕ್ಕೆ ಸು'ಭದ್ರ' ಬದುಕು ನೀಡಿದ ಜಲಾಶಯ

Vijay Karnataka 6 days ago

ಶಿವಮೊಗ್ಗ: ಭದ್ರಾ ಜಲಾಶಯ ಕೇವಲ ನೀರು ಹಿಡಿದಿಡುವ ಜಲಪಾತ್ರೆಯಲ್ಲ; ಪಶ್ಚಿಮಘಟ್ಟದ ಮಳೆ, ಮಲೆನಾಡಿನ ಜೀವ ವೈವಿಧ್ಯತೆ, ಮಧ್ಯ ಕರ್ನಾಟಕದ ರೈತರ ನಿರೀಕ್ಷೆಯನ್ನು ಒಳಗೊಂಡ ಮಹತ್ವದ ಅಧ್ಯಾಯ. ಮಲೆನಾಡಿನಿಂದ ಒಣಭೂಮಿಗೆ ಸಾಗುವ ನೀರಿನ ರಾಜಕೀಯ, ಕೃಷಿ, ಆರ್ಥಿಕತೆ, ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಜಲಭದ್ರತೆಯ ಸಂಕೇತವೂ ಹೌದು.

ಜಲಾಶಯವು ಇಲ್ಲಿನ ಕೃಷಿ, ಸಂಸ್ಕೃತಿ, ಆರ್ಥಿಕತೆಯನ್ನೇ ಬದಲಿಸಿದೆ. ಜಲಾಶಯವಿಲ್ಲದ ಪೂರ್ಣ ದಾವಣಗೆರೆ, ಭಾಗಶಃ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಆರ್ಥಿಕತೆಯನ್ನು ಊಹಿಸಿಕೊಳ್ಳುವುದು ಕಷ್ಟ. ಅರೆಮಲೆನಾಡು ಮತ್ತು ಬಯಲು ಸೀಮೆಯ ಒಣ ಭೂಮಿಯನ್ನು ಹಸಿರಾಗಿಸಿದ್ದೆ ಅಲ್ಲದೆ ಸ್ಥಳೀಯ ಆರ್ಥಿಕ ವಹಿವಾಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜಲಾಶಯ ತುಂಬಿದರೆ ಈ ನಾಲ್ಕೂ ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮ. ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ನೀರಡಿಕೆ ನೀಗಿದ ಸಮಾಧಾನ. ಬರ ಎದುರಾಗಿ ತುಂಬದೆ ಹೋದಲ್ಲಿ ಈ ಎಲ್ಲ ಜಿಲ್ಲೆಗಳಲ್ಲೂ ತಳಮಳ, ಚಡಪಡಿಕೆ ಕಾಣಿಸಿಕೊಳ್ಳುತ್ತದೆ. ಆರ್ಥಿಕ ವಹಿವಾಟು ಏರುಪೇರಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿನ ಜನಜೀವನದ ಮೇಲೆ ಪ್ರಭಾವಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಪಶ್ಚಿಮಘಟ್ಟದ ಕುದುರೆಮುಖ ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿಯು ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ತುಂಗಾಭದ್ರಾ ನದಿಯಾಗಿ ಕೃಷ್ಣಾ ನದಿ ಸೇರುತ್ತವೆ. ತರೀಕೆರೆ ತಾಲೂಕು ಲಕ್ಕವಳ್ಳಿ ಬಳಿ ಎರಡು ಗುಡ್ಡಗಳ ನಡುವೆ 1,708 ಮೀ. ಉದ್ದ, 59.14 ಮೀ. ಎತ್ತರ ಮತ್ತು 71.50 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗಿದೆ. 117.30 ಚ.ಕಿ.ಮೀ. ವಿಸ್ತೀರ್ಣ, 1,968.40 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಸ್ವಾತಂತ್ರ್ಯನಂತರದಲ್ಲಿ 1947ರಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡು ಅಣೆಕಟ್ಟು ಕಾಮಗಾರಿಯನ್ನು 1959ರಲ್ಲಿ, ನಾಲೆಗಳ ಕಾಮಗಾರಿಯನ್ನು 1966ರಲ್ಲಿ ಪೂರ್ಣಗೊಳಿಸಲಾಯಿತು.

ಹಸಿರಾದ ಬರಡು ಭೂಮಿ:

ಎಡದಂಡೆ ನಾಲೆಯು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ77.24 ಕಿ.ಮೀ. ಹರಿದು 8,300 ಹೆಕ್ಟೇರ್‌ಗೆ ನೀರು ಕೊಡುತ್ತದೆ. ಬಲದಂಡೆ ನಾಲೆಯು ತರೀಕೆರೆ, ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ 366.90 ಕಿ.ಮೀ. ಹರಿದು 1 ಲಕ್ಷ ಹೆಕ್ಟೇರ್‌ಗೆ ನೀರು ಕೊಡುತ್ತದೆ. ಆರಂಭದಲ್ಲಿ ಭತ್ತ, ಕಬ್ಬು ಬೆಳೆಯುತಿದ್ದ ರೈತರು ಈಗ ಭತ್ತ ಮತ್ತು ಕಬ್ಬಿಗಿಂತ ಹೆಚ್ಚು ಅಡಕೆ ತೋಟ ಮಾಡಿದ್ದಾರೆ. ಭದ್ರಾ ನೀರು ಕೃಷಿ ಮೂಲಕ ವಾರ್ಷಿಕ ಸಾವಿರಾರು ಕೋಟಿ ರೂ. ಆದಾಯ ತಂದುಕೊಡುತ್ತದೆ.

ಕುಡಿಯುವ ನೀರು:

ಮಧ್ಯ ಕರ್ನಾಟಕದ 30ಕ್ಕೂ ಹೆಚ್ಚು ನಗರಗಳು, ಪಟ್ಟಣಗಳು, ಸಾವಿರಾರು ಹಳ್ಳಿಗಳು ಕುಡಿಯಲು ಭದ್ರಾ ನೀರನ್ನೇ ಅವಲಂಬಿಸಿವೆ. ಕುಡಿಯುವುದಕ್ಕೆ ಜಲಾಶಯದಲ್ಲಿ 8.50 ಟಿಎಂಸಿ ನೀರು ಮೀಸಲಿರಿಸಲಾಗಿದೆ. ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಚನ್ನಗಿರಿ, ದಾವಣಗೆರೆ, ಹರಿಹರ, ಮಲೆಬೆನ್ನೂರು, ಚಿತ್ರದುರ್ಗ, ಮಲ್ಲಾಡಿಹಳ್ಳಿ, ಸಿರಿಗೆರೆ, ಭರಮಸಾಗರ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ, ಗದಗ, ಬೆಟಗೇರಿ, ಮುಂಡರಗಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳು ಅಲ್ಲದೆ ಸಾವಿರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ.

ಹೂಳು- ಯುಬಿಪಿ:

ತುಂಗಭದ್ರಾದಂತೆ ಭದ್ರಾಕ್ಕೂ ಹೂಳಿನ ಸಮಸ್ಯೆ ಎದುರಾಗಿದೆ. 2,025.87 ಮಿಲಿಯನ್‌ ಘನ ಮೀಟರ್‌ಗಳಷ್ಟಿದ್ದ ನೀರಿನ ಸಂಗ್ರಹ ಈಗ 1,930.12 ಮಿಲಿಯನ್‌ ಘನ ಮೀಟರ್‌ಗೆ ಇಳಿದಿದೆ. 95.74 ಮಿಲಿಯನ್‌ ಘನ ಮೀಟರ್‌ ಅಂದರೆ 4.87 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಆದರೆ, ಜಲಾಶಯದಲ್ಲಿ 13.83 ಟಿಎಂಸಿ ಡೆಡ್‌ಸ್ಟೋರೇಜ್‌ ಇರುವುದಿಂದ ಸದ್ಯಕ್ಕೆ ಬಳಕೆ ಮಾಡುವ ನೀರಿನ ಸಂಗ್ರಹಕ್ಕೆ ಸಮಸ್ಯೆ ಇಲ್ಲ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳ 2,25,515 ಹೆಕ್ಟೇರ್‌ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಒದಗಿಸಲು ಮತ್ತು 367 ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾಕ್ಕೆ ಹರಿಸಿ ಅಲ್ಲಿಂದ ಒಟ್ಟಾರೆ 29.90 ಟಿಎಂಸಿ ನೀರು ಹರಿಸುವುದು ಯೋಜನೆ ಗುರಿ. ಮೂರು ವರ್ಷಗಳಿಂದ ವಾಣಿವಿಲಾಸ ಸಾಗರ ಅಣೆಕಟ್ಟೆಗೆ ನೀರು ಹರಿಸಲಾಗುತ್ತಿದೆ.

ಎಡ ಮತ್ತು ಬಲದಂಡೆ ನಾಲೆಗಳಲ್ಲಿ 37.2 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಜಲಾಶಯದ ಮುಂಭಾಗದಲ್ಲಿ ರಾಜ್ಯದ ಅತಿದೊಡ್ಡ ಮೀನು ಮರಿ ಸಾಕಣೆ ಕೇಂದ್ರವಿದ್ದು ಪ್ರತಿವರ್ಷ ಲಕ್ಷಾಂತರ ಕೋಟಿ ಮೀನು ಮರಿಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತದೆ.

ಜಲಾನಯನ ಪ್ರದೇಶ- 1,968.40 ಚ.ಕಿ.ಮೀ.

ಅಣೆಕಟ್ಟು ಎತ್ತರ- 59.14 ಮೀ.

ಅಣೆಕಟ್ಟು ಉದ್ದ: 1,708 ಮೀ.

ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ

ಅಚ್ಚುಕಟ್ಟು ಪ್ರದೇಶ- 1,05,570 ಹೆಕ್ಟೇರ್‌

ನಾಲೆಗಳ ಉದ್ದ- 444.14 ಕಿ.ಮೀ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka