Dailyhunt
ಮಧ್ಯಪ್ರಾಚ್ಯ ಯುದ್ಧದಲ್ಲಿ ರಷ್ಯಾ, ಚೀನಾ ಜಯಶಾಲಿಗಳು; ಕೊನೆಗೊಳ್ಳದ ಮಹಾಯುದ್ಧದ ಬಗ್ಗೆ ಬಿಲಿಯನೇರ್‌ ಎಚ್ಚರಿಕೆ!

ಮಧ್ಯಪ್ರಾಚ್ಯ ಯುದ್ಧದಲ್ಲಿ ರಷ್ಯಾ, ಚೀನಾ ಜಯಶಾಲಿಗಳು; ಕೊನೆಗೊಳ್ಳದ ಮಹಾಯುದ್ಧದ ಬಗ್ಗೆ ಬಿಲಿಯನೇರ್‌ ಎಚ್ಚರಿಕೆ!

Vijay Karnataka 5 days ago

ವಾಷಿಂಗ್ಟನ್‌ ಡಿಸಿ: ಅಮೆರಿಕ-ಇರಾನ್‌ ಕದನ ವಿರಾಮ ಒಪ್ಪಂದ ಜಾರಿ ಆಗಿರುವುದನ್ನು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟವರು, ಅಮೆರಿಕದ ಖ್ಯಾತ ಬಿಲಿಯನೇರ್‌ ಹೂಡಿಕೆದಾರ ರೇ ಡಾಲಿಯೊ ಅವರ ವಿಶ್ಲೇಷಣೆ ಮತ್ತೆ ಆತಂಕ ಮೂಡಿಸಿದೆ. ಶಾಂತಿಯ ಭರವಸೆಯಲ್ಲಿದ್ದ ಜನರ ನೆಮ್ಮದಿಗೆ ಡಾಲಿಯೊ ಭಂಗ ತಂದಿದ್ದಾರೆ.

ಮಧ್ಯಪ್ರಾಚ್ಯ ಯುದ್ಧ ವಿರಾಮ ತಾತ್ಕಾಲಿಕ ಮಾತ್ರ ಎಂದು ಅವರು ಅಂದಾಜಿಸಿದ್ದಾರೆ. ಅಲ್ಲದೇ ಈ ಯುದ್ಧದ ನಿಜವಾದ ಜಯಶಾಲಿಗಳು ರಷ್ಯಾ ಮತ್ತು ಚೀನಾ ಎಂದು ಬಿಲಿಯನೇರ್‌ ಹೂಡಿಕೆದಾರ ಪ್ರತಿಪಾದಿಸಿದ್ದಾರೆ.

ಇರಾನ್ ಯುದ್ಧವನ್ನು ಒಂದು ಸೀಮಿತ ಬಿಕ್ಕಟ್ಟು ಅಥವಾ ಪರಿಹಾರದತ್ತ ಸಾಗುತ್ತಿರುವ ಸಂಘರ್ಷ ಎಂದು ನೋಡಬಾರದು ಎಂದು ಎಚ್ಚರಿಸಿರುವ ರೇ ಡಾಲಿಯೊ, ಈ ಯುದ್ಧ ಜಾಗತಿಕ ಕ್ರಮದಲ್ಲಿ ಒಂದು ದೊಡ್ಡ ಕುಸಿತದ ಭಾಗವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದು ಹಿಂದಿನ ಪ್ರಮುಖ ಯುದ್ಧಗಳಿಗೆ ಮುಂಚಿನ ಅದೇ ಐತಿಹಾಸಿಕ ಮಾದರಿಯನ್ನು ಅನುಸರಿಸುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

"ನಾವು ಈಗ ಶೀಘ್ರದಲ್ಲೇ ಕೊನೆಗೊಳ್ಳದ ವಿಶ್ವ ಯುದ್ಧದ ಮಧ್ಯದಲ್ಲಿದ್ದೇವೆ. ಪ್ರಸ್ತುತ ಯುದ್ಧ ಕೇವಲ ಪ್ರಾದೇಶಿಕ ಸಮಸ್ಯೆಯಲ್ಲ. ಅದು ಜಾಗತಿಕ
ಮಿಲಿಟರಿ, ಆರ್ಥಿಕ, ತಾಂತ್ರಿಕ ಮತ್ತು ಭೌಗೋಳಿಕ ರಾಜಕೀಯ ರಂಗಗಳಲ್ಲಿ ಹರಡುವ ಪರಸ್ಪರ ಸಂಬಂಧ ಹೊಂದಿರುವ ಸಂಘರ್ಷಗಳ ವ್ಯವಸ್ಥೆಯಾಗಿದೆ" ಎಂದು ರೇ ಡಾಲಿಯೊ ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.


"ವಿಶ್ವ ಯುದ್ಧ ಎಂಬ ಪದಗುಚ್ಛವು ವಿಪರೀತವಾಗಿ ಧ್ವನಿಸಬಹುದು. ಆದರೆ ಅದರ ರಚನೆಯು ಈಗಾಗಲೇ ಗೋಚರಿಸುತ್ತಿದೆ. ರಷ್ಯಾ-ಉಕ್ರೇನ್-ಯುರೋಪ್-ಯುಎಸ್ ಯುದ್ಧ, ಇಸ್ರೇಲ್-ಗಾಜಾ-ಲೆಬನಾನ್-ಸಿರಿಯಾ ಯುದ್ಧ, ಯೆಮೆನ್-ಸುಡಾನ್-ಸೌದಿ ಅರೇಬಿಯಾ-ಯುಎಇ ಯುದ್ಧ ಮತ್ತು ಯುಎಸ್-ಇಸ್ರೇಲ್-ಇರಾನ್ ಯುದ್ಧಗಳು, ಒಂದಕ್ಕೊಂದು ಸಂಬಂಧ ಹೊಂದಿರುವ ಸಂಘರ್ಷಗಳಾಗಿವೆ. ಸೂಚಿಸಿದರು. ಈ ಯುದ್ಧಗಳು ಹಿಂದಿನ ವಿಶ್ವ ಯುದ್ಧಗಳಿಗೆ ಹೋಲುವ ಅತ್ಯಂತ ಶ್ರೇಷ್ಠ ಮಹಾಯುದ್ಧವನ್ನು ರೂಪಿಸುತ್ತವೆ" ಎಂದು ರೇ ಡಾಲಿಯೊ ಹೇಳಿದ್ದಾರೆ.

ರಷ್ಯಾ-ಚೀನಾ ವಿಜೇತರು:

ಇನ್ನು ಮಧ್ಯಪ್ರಾಚ್ಯ ಯುದ್ಧದಲ್ಲಿ ಅಸಲಿ ವಿಜೇತ ರಾಷ್ಟ್ರಗಳು ರಷ್ಯಾ ಮತ್ತು ಚೀನಾ ಎಂದು ಅಭಿಪ್ರಾಯಪಟ್ಟಿರುವ ರೇ ಡಾಲಿಯೊ, ಈ ವಿಚಾರವಾಗಿ ಭಾರೀ ಕುತೂಹಲಕಾರಿ ವಿಶ್ಲೇಷಣೆಗಳನ್ನು ಬಿಚ್ಚಿಟ್ಟಿದ್ದಾರೆ. ಇರಾನ್‌ ಪರವಾಗಿ ರಷ್ಯಾ-ಚೀನಾ ಯುದ್ಧರಂಗದಲ್ಲಿ ಇರುವುದನ್ನು ರೇ ಡಾಲಿಯೊ ಸ್ಪಷ್ಟವಾಗಿ ಗುರುತಿಸಿದ್ದಾರೆ. "ಇಡೀ ಯುದ್ಧದ ಬೆಳವಣಿಗೆಗಳನ್ನು ಗಮನಿಸಿದರೆ, ರಷ್ಯಾ ಮತ್ತು ಚೀನಾ ಈ ಯುದ್ಧದಿಂದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಲಾಭಗಳನ್ನು ಪಡೆದುಕೊಂಡಿರುವುದ ಸ್ಪಷ್ಟ" ಎಂದು ಬಿಲಿಯನೇರ್‌ ಹೂಡಿಕೆದಾರ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷದ ಸಮಯದಲ್ಲಿ ರಷ್ಯಾಗೆ ಆರ್ಥಿಕ ಲಾಭ ಆಗಿರುವುದನ್ನು ಜಗತ್ತು ನೋಡಿದೆ. ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚಿದ್ದರಿಂದ ಎದುರಾದ ಜಾಗತಿಕ ತೈಲ ಬಿಕ್ಕಟ್ಟಿಗೆ, ರಷ್ಯಾ ತನ್ನ ಕಚ್ಚಾತೈಲದ ಪರಿಹಾರ ನೀಡಿ ಸಾಕಷ್ಟು ಲಾಭ ಗಳಿಸಿದೆ. ಚೀನಾ ಕೂಡ ಇರಾನ್‌ಗೆ ಮಿಲಿಟರಿ ನೆರವಿನ ಹೆಸರಿನಲ್ಲಿ ಭಾರೀ ಲಾಭ ಗಳಿಸಿದೆ.


ಒಟ್ಟಿನಲ್ಲಿ ಡಾಲಿಯೊ ಅವರ ಎಚ್ಚರಿಕೆಯು ಇರಾನ್ ಯುದ್ಧವು ಬಿಕ್ಕಟ್ಟಿನ ಅಂತ್ಯವಲ್ಲ ಎಂಬುದನ್ನು ಸೂಚಿಸುತ್ತದೆ. ಅವರ ಪ್ರಕಾರ ಈ ಯುದ್ಧ ಮಹಾಯುದ್ಧದ ಸ್ವರೂಪ ಪಡೆದುಕೊಳ್ಳಲಿದೆ. ವಿಶ್ವ ಯುದ್ಧವು ಈಗಾಗಲೇ ಸ್ಪಷ್ಟ ಆಕಾರ ಪಡೆಯುತ್ತಿದೆ ಮತ್ತು ಮುಂದಿನ ಹಂತವು ಹೆಚ್ಚಿನ ಸಂಘರ್ಷವನ್ನು ತರುವ ಸಾಧ್ಯತೆಯಿದೆ ಎಂಬುದರ ಸಂಕೇತವಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka