ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್, ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನೊಂದಿಗೆ ಆರೋಪಿ ಮಹದೇವ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಹುಲ್ಲಗಾಲದ ಮಹದೇವ್ ಅಲಿಯಾಸ್ ಮಾದೇವ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ.
ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಅರ್ಜಿದಾರರಿಗೆ ಏ.2ರಿಂದ ಏ.24 ರವರೆಗೆ ಜಾಮೀನು ನೀಡಲು ಆದೇಶಿಸಿದೆ.
ವಿವಾಹವಾಗಿ ನೋಂದಣಿ ಮಾಡಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ
''ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆರೋಪಿ ಏ.24ರೊಳಗೆ ಸಂತ್ರಸ್ತೆಯನ್ನು ವಿವಾಹವಾಗಬೇಕು ಮತ್ತು ಆನಂತರ ಮದುವೆ ನೋಂದಾಯಿಸಿದ ಪ್ರಮಾಣಪತ್ರ ಸಲ್ಲಿಸಬೇಕು'' ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಏ.24ಕ್ಕೆ ಮುಂದೂಡಿದೆ.ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶ
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದ ವಿಚಿತ್ರ ಸಂಗತಿಗಳನ್ನು ಗಮನಿಸಿದ ನಂತರ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಬೇಕಿರುವುದರಿಂದ ಆತನಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವೆಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ ಆತನನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಆದೇಶಿಸಿದೆ.ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, 'ಆರೋಪಿಯ ವಿರುದ್ಧ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾರೆಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಸದ್ಯ ಅರ್ಜಿದಾರರು ಮತ್ತು ದೂರುದಾರರು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದು, ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಸಿದ್ಧರಿದ್ದಾರೆ. ವಿವಾಹಕ್ಕೆ ಇಬ್ಬರೂ ಒಪ್ಪಿದ್ದಾರೆ. ಅದಕ್ಕಾಗಿ ಜಾಮೀನು ಮಂಜೂರು ಮಾಡಬೇಕು'' ಎಂದು ಕೋರಿದರು.

