Dailyhunt Logo
  • Light mode
    Follow system
    Dark mode
    • Play Story
    • App Story
'ಮಹಾದೇವಿ' ಧಾರಾವಾಹಿ: ರಂಗಭೂಮಿ, ಚಲನಚಿತ್ರ ನಟಿ ಇಂದಿರಾ ನಾಯರ್‌ ನಿಧನ

'ಮಹಾದೇವಿ' ಧಾರಾವಾಹಿ: ರಂಗಭೂಮಿ, ಚಲನಚಿತ್ರ ನಟಿ ಇಂದಿರಾ ನಾಯರ್‌ ನಿಧನ

Vijay Karnataka 3 weeks ago

ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಇಂದಿರಾ ನಾಯರ್ (75) ಮೈಸೂರಿನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ನಟಿ ನೇತ್ರ ಮತ್ತು ದೇಹ ದಾನ ಮಾಡಿದ್ದಾರೆ.ಬೊಗಾದಿ 2ನೇ ಹಂತದ 4ನೇ ಮುಖ್ಯ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಶನಿವಾರ(ಆಗಸ್ಟ್ 29) ಬೆಳಿಗ್ಗೆ 11ಗಂಟೆಯ ವರೆಗೂ ಇಂದಿರಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಶನಿವಾರ ದೇಹ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೈಯಕ್ತಿಕ ಬದುಕು

ಮೈಸೂರಿನ ಹವ್ಯಾಸಿ ರಂಗಭೂಮಿಗೆ ಇಂದಿರಾ ನಾಯರ್‌ ಅವರು ಚಿರಪರಿಚಿತರು. 'ನಾಯರ್‌' ಎಂದ ಕೂಡಲೇ ಕೇರಳ ಮೂಲದವರು ಎನ್ನಿಸುತ್ತೆ. ಆದರೆ, ಇವರು ಹುಟ್ಟಿ ಬೆಳದಿದ್ದು ಚಿತ್ರದುರ್ಗದಲ್ಲಿ. ಅಪ್ಪಟ ಕನ್ನಡತಿ.

ಇವರಿಗೆ ಬದುಕು ಕೊಟ್ಟ ಊರು ಮೈಸೂರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಓದಿನ ಜೊತೆಗೆ ಭರತನಾಟ್ಯ ಜ್ಯೂನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಿಂದ ವಿಜ್ಙಾನ ವಿಷಯದಲ್ಲಿ ಪದವಿ ಪಡೆದಿದ್ದರು. ಜೊತೆಗೆ ಅಲ್ಲಿಯೇ ಕೆಲಸ ಕೂಡ ಮಾಡಿದರು.

ಮದುವೆ ನಂತರ ನಟನೆ ಮತ್ತು ರಂಗಭೂಮಿಯಿಂದ 1996ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. 35 ವರ್ಷಗಳವರೆಗೆ ರಂಗಭೂಮಿಯಿಂದ ದೂರವಿದ್ದರು. 2010ರಲ್ಲಿ ಮರು ಪ್ರವೇಶ ಮಾಡಿದ್ದರು. ಮೈಸೂರಿನ ರಂಗಕ್ಷೇತ್ರದಲ್ಲಿ ಮುಖ್ಯ ನಟಿ, ಸಂಘಟಕಿ ಮತ್ತು ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ. ಅಭಿಲಾಷ್ ಮತ್ತು ಅವಿನಾಶ್.

ಇಂದಿರಾ ನಾಯರ್ ಅವರ ಪತಿ ಮೈಸೂರಿನ ಹೆಬ್ಬಾಳದಲ್ಲಿ ಆರಂಭಿಸಿದ ಜ್ಯೂಸ್ ಬಯೋಟೆಕ್‌ನ ನಿರ್ದೇಶಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಂಸ್ಥೆಗೆ ಅವರ ಪುತ್ರ ಅಭಿಲಾಷ್ ನಾಯರ್ ಅವರು ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾತು ಮತ್ತು ಶ್ರವಣದೋಷ (Speech and Hearing) ಕ್ಷೇತ್ರದಲ್ಲಿ ವೃತ್ತಿಪರರಾಗಿ ಕೆಲಸ ಮಾಡಿದ್ದಾರೆ. ನಿವೃತ್ತಿಯವರೆಗೆ, ಅಂದರೆ ಸುಮಾರು 30 ವರ್ಷಗಳ ಕಾಲ ಕರ್ನಾಟಕದ ಮೈಸೂರಿನಲ್ಲಿರುವ 'ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್' ಸಂಸ್ಥೆಯಲ್ಲಿ ಸ್ಪೀಚ್ ಲ್ಯಾಂಗ್ವೇಜ್ ಪ್ಯಾರಾಥಾಲಜಿಸ್ಟ್ (Speech-Language Pathologist) ಆಗಿ ಸೇವೆ ಸಲ್ಲಿಸಿದ್ದಾರೆ.

ಸಣ್ಣ ವಯಸ್ಸಿನಿಂದಲೂ ನಟನೆ ಎಂದರೆ ಇಂದಿರಾ ನಾಯರ್‌ ಅವರಿಗೆ ಅಪಾರ ಒಲವು. ಹಿರಿಯ ರಂಗಕರ್ಮಿ ನ. ರತ್ನ ಅವರ ಗರಡಿಯಲ್ಲಿ ನಟನೆ ಆರಂಭಿಸಿದರು. 'ಕದಂಬ ರಂಗ ವೇದಿಕೆ', 'ಕಲಾಸುರುಚಿ' ಸೇರಿದಂತೆ ಅನೇಕ ನಾಟಕ ತಂಡಗಳಲ್ಲಿ ಅಭಿನಯ, 'ಸಮತೆಂತೋ ತಂಡ'ದಲ್ಲಿ ಸಕ್ರಿಯರಾಗಿದ್ದರು.

ಇದುವರೆಗೂ ಕನ್ನಡದಲ್ಲಿ ಸುಮಾರು 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮೈಸೂರಿನ ಹಲವು ಹವ್ಯಾಸಿ ರಂಗತಂಡಗಳಲ್ಲಿ ನಟನೆ ಮಾಡಿದ್ದಾರೆ.

2014 ರಿಂದ ಕನ್ನಡ ಕಿರುಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಇದುವರೆಗೆ ಕನ್ನಡದಲ್ಲಿ 8 ಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ಮಲಯಾಳಂ ಭಾಷೆಯಲ್ಲಿ 2 ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಕಾಕಪ್ಪು', 'ಕಡಲಾಸ್‌ ಪೋಕಳ್‌' ಸೇರಿಂದಂತೆ ಅನೇಕ ಮಲಯಾಳಿ ಕಿರುಚಿತ್ರಗಳನ್ನ ನಿರ್ಮಿಸಿದ್ದಾರೆ.

2015 ರಿಂದ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳ ಪೂರ್ಣ ಪ್ರಮಾಣದ ಚಲನಚಿತ್ರಗಳಲ್ಲಿ (Feature Films) ನಟಿಸಲು ಪ್ರಾರಂಭಿಸಿದರು. ಇದುವರೆಗೆ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಗೂ 4ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿಯಲ್ಲಿ ಆಚಾರ್ಯರ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಹಾಗೇ ಇನ್ನು ಅನೇಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

ನಾಟಕಗಳು

'ನೀರ್ಮಾದಳದ ಹೂವಿನೊಂದಿಗೆ', 'ಭೂತಗಳು', 'ಹುಲಿಯ ನೆರಳು', 'ಅಂಧ ಗಾಂಧಾರಿ', 'ಪುರುಷಾರ್ಥ', 'ಬೇರಿಲ್ಲದವರು', 'ಕಾಕ್ಟೇಲ್ ಪಾರ್ಟಿ','ರುಡಾಲಿ', 'ಸೊನಾಟ', 'ಕದಡಿದ ನೀರು', 'ಮಾಧರಿಯ ಚಿತೆ', 'ಸ್ತ್ರೀ ಸಂಭ್ರಮ' ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾಗಳು

ಕನ್ನಡದ 'ವಂಶವೃಕ್ಷ', 'ರಂಗನಾಯಕಿ', 'ಐರಾವತ', 'ಪೆಪೆ', 'ಅವಲಕ್ಕಿ ಪವಲಕ್ಕಿ', 'ಗ್ರಾಮಾಯಣ',, 'ಗ್ರಾಮಾಯಣ', 'ಜೋಡಿ ಕಡಗ' ಹಾಗೂ ಮಲಯಾಳಂನ 'ಕುರುಪ್', 'ಎಂಡೆ ಉಮ್ಮಾಂಡೆ ಪೇರು', 'ಉರಿಯಾಟ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

ಪ್ರಶಸ್ತಿಗಳು

ಕನ್ನಡದ 'ಅವಲಕ್ಕಿ ಪವಲಕ್ಕಿ' ಚಲನಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದರು. 'ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ರೈಟ್ಸ್' (GCCR) ವತಿಯಿಂದ ಇಂದಿರಾ ನಾಯರ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka