ಬೆಂಗಳೂರು: ರಾಜ್ಯದ ಜಲಾಶಯಗಳು ಬರಿದಾಗಿರುವುದರಿಂದ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಮುಂಗಾರು ಹಂಗಾಮಿನಲ್ಲೇ ವಿದ್ಯುತ್ ಕ್ಷಾಮದ ಭೀತಿ ಎದುರಾಗಿದೆ. ದುರ್ಬಲ ಮುಂಗಾರಿನ ಪರಿಣಾಮ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿದ್ದು, ಜಲ ವಿದ್ಯುತ್ ಉತ್ಪಾದನೆಯು ಶೇ.60ರಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ.
ಎಲ್‌ನಿನೋ ಪ್ರಭಾವದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಜೂನ್‌ನಲ್ಲಿ ಶೇ.42ರಷ್ಟು ಮತ್ತು ಜುಲೈನಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದ್ದು, ಜಲಾಶಯಗಳಿಗೆ ನೀರಿನ ಹರಿವು ಕ್ಷೀಣಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕನಿಷ್ಠ ಮಟ್ಟಕ್ಕೆ ತಲುಪಿದೆ.
ಜುಲೈನಲ್ಲಿ ನೀರಿನ ಸಂಗ್ರಹಣೆ ಆಧಾರದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ (ದಶಲಕ್ಷ ಯೂನಿಟ್‌ಗಳಲ್ಲಿ)
| ಜಲಾಶಯ | 2025 | 2026 |
| ಸೂಪಾ | 1,622 | 816 |
| ಲಿಂಗನಮಕ್ಕಿ | 2,899 | 928 |
| ಮಾಣಿ ಅಣೆಕಟ್ಟು | 575 | 246 |
ಉಷ್ಣ ವಿದ್ಯುತ್ ಸ್ಥಾವರಗಳೇ ಆಸರೆ
ರಾಜ್ಯದಲ್ಲಿ ಒಟ್ಟು 21 ಜಲ ವಿದ್ಯುತ್ ಘಟಕಗಳಿದ್ದು, ಇವುಗಳ ಒಟ್ಟು ಸಾಮರ್ಥ್ಯ 3,679 ಮೆಗಾ ವ್ಯಾಟ್ ಆಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲ ವಿದ್ಯುತ್ ಬಳಸಿ, ಉಷ್ಣ ವಿದ್ಯುತ್ ಘಟಕಗಳಿಗೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಜಲ ವಿದ್ಯುತ್ ಕುಸಿದಿರುವುದರಿಂದ ರಾಯಚೂರು, ಯರಮರಸ್ ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಗಳೇ ರಾಜ್ಯಕ್ಕೆ ಆಸರೆಯಾಗಿವೆ. ಸದ್ಯ ಇವುಗಳಿಂದ ಪ್ರತಿನಿತ್ಯ 78.39 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.ಕೃಷಿ ಪಂಪ್‌ಸೆಟ್‌ಗಳದ್ದೇ ಸಿಂಹಪಾಲು
ರಾಜ್ಯದಲ್ಲಿ ಕೃಷಿ ಉದ್ದೇಶದ ಸುಮಾರು 39 ಲಕ್ಷ ಪಂಪ್‌ಸೆಟ್‌ಗಳಿವೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ವಿದ್ಯುತ್‌ನಲ್ಲಿ ಶೇ.38ರಷ್ಟು ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತದೆ. ಗೃಹೋಪಯೋಗಿ ಮತ್ತು ಕೈಗಾರಿಕಾ ಉದ್ದೇಶದ ಸಂಪರ್ಕಗಳಿಗಿಂತ ಕೃಷಿ ಪಂಪ್‌ಸೆಟ್‌ಗಳಿಗೆ ಅತಿ ಹೆಚ್ಚು ವಿದ್ಯುತ್ ಬಳಸಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ದಿನದಲ್ಲಿ 7 ತಾಸು ವಿದ್ಯುತ್ ಪೂರೈಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಗ್ರಾಮೀಣ ಭಾಗದಲ್ಲಿ ದುರಸ್ತಿ ಕಾರ್ಯದ ನೆಪ ಹೇಳಿ ಕೃಷಿ ಪಂಪ್‌ಸೆಟ್‌ಗಳಿಗೆ ಪದೇಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.ಹೀಗೆ ಹವಾಮಾನ ವೈಪರೀತ್ಯದಿಂದಾಗಿ ಮುಂಗಾರು ಮಳೆ ತೀವ್ರ ಕೈಕೊಟ್ಟಿದ್ದು, ರಾಜ್ಯದ ಪ್ರಮುಖ ಜಲಾಶಯಗಳು ಬರಿದಾಗುತ್ತಿರುವ ಹಿನ್ನಲೆಯಲ್ಲಿ ಜಲ ವಿದ್ಯುತ್ ಉತ್ಪಾದನೆ ಬರೋಬ್ಬರಿ ಶೇ. 60ರಷ್ಟು ಕುಸಿಯುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ತಲೆದೋರಿರುವ ಈ ಭೀಕರ ವಿದ್ಯುತ್ ಬಿಕ್ಕಟ್ಟನ್ನು ನಿವಾರಿಸಲು ಇಂಧನ ಇಲಾಖೆಯು ತುರ್ತು ಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ..
* ಉಷ್ಣ ವಿದ್ಯುತ್ ಸ್ಥಾವರಗಳ ಸಮರ್ಪಕ ನಿರ್ವಹಣೆ
* ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚಳ
* ಕೋ-ಜನರೇಷನ್ ವಿದ್ಯುತ್ ಘಟಕಗಳಿಂದ ವಿದ್ಯುತ್ ಖರೀದಿ
* ಕಲ್ಲಿದ್ದಲು ದಾಸ್ತಾನು ಹೆಚ್ಚಳ
* 500 ಮೆ.ವ್ಯಾ. ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ತ್ವರಿತ ಕಾರ್ಯಾರಂಭ
* ಜೆಎಸ್‌ಡಬ್ಲ್ಯೂನ 300 ಮೆ.ವ್ಯಾ. ಸೌರ ವಿದ್ಯುತ್ ಯೋಜನೆಗಳ ತ್ವರಿತ ಆರಂಭಕ್ಕೆ ಸಿದ್ಧತೆ
* ಕುಸುಮ್-ಬಿ, ಕುಸುಮ್-ಸಿ ಯೋಜನೆಗಳ ಕಾಮಗಾರಿಗಳ ತ್ವರಿತ ಅನುಷ್ಠಾನ
* ಸಹ ಉತ್ಪಾದನಾ ಘಟಕಗಳಿಂದ 500ರಿಂದ 700 ಮೆ.ವ್ಯಾ. ವಿದ್ಯುತ್ ಖರೀದಿ
* ಅಕ್ಟೋಬರ್‌ಗೂ ಮುನ್ನವೇ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ
* ಪೀಕ್ ಅವರ್ ವಿದ್ಯುತ್ ಖರೀದಿ
ಮೂಲ ವಿದ್ಯುತ್ ಉತ್ಪಾದನೆ (ದಶಲಕ್ಷ ಯೂನಿಟ್)
- ಕೆಪಿಸಿಎಲ್ ಉಷ್ಣ ಸ್ಥಾವರಗಳು: 78.39
- ಜಲ ವಿದ್ಯುತ್: 38.1
- ಸೋಲಾರ್: 36.55
- ಪವನ ಶಕ್ತಿ: 47.27
- ಮಿನಿ ಹೈಡಲ್: 4.82
- ಕೋ ಜನರೇಷನ್: 2.24

