Dailyhunt Logo
  • Light mode
    Follow system
    Dark mode
    • Play Story
    • App Story
ಮನೆಯೊಂದು ಮೂರಲ್ಲ, ನಾಕ್ಲೈದು ಬಾಗಿಲು! ರಾಜ್ಯದಲ್ಲಿ ಕಮಲ ಪಡೆ ಸ್ಥಿತಿ ಅಯೋಮಯ: ಕೈಕಟ್ಟಿ ಸುಮ್ಮನಾದ ವರಿಷ್ಠರು

ಮನೆಯೊಂದು ಮೂರಲ್ಲ, ನಾಕ್ಲೈದು ಬಾಗಿಲು! ರಾಜ್ಯದಲ್ಲಿ ಕಮಲ ಪಡೆ ಸ್ಥಿತಿ ಅಯೋಮಯ: ಕೈಕಟ್ಟಿ ಸುಮ್ಮನಾದ ವರಿಷ್ಠರು

Vijay Karnataka 3 months ago

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಲಿದೆ ಎಂಬ ನಿರೀಕ್ಷೆ ಪದೇ ಪದೇ ಹುಸಿಯಾಗುತ್ತಲೇ ಇದೆ. ಮನೆಯೊಂದು ಮೂರು ಬಾಗಿಲು ಎಂಬ ಗಾದೆ ಮಾತು ಬಿಜೆಪಿ ಪಾಲಿಗೆ ಸುಳ್ಳಾಗಿದೆ. ಇಲ್ಲಿ ಮನೆಯೊಂದು ನಾಲ್ಕೈದು ಬಾಗಿಲು ಎಂಬಂತಾಗಿದೆ. ಪಕ್ಷದ ನಾಯಕರ ನಡುವೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ ಎಂಬ ಪರಿಸ್ಥಿತಿ ಇದೆ.

ಇದನ್ನೆಲ್ಲಾ ಸರಿಪಡಿಸಬೇಕಾದ ವರಿಷ್ಠರು 'ನಮ್ಮಿಂದಾಗಲ್ಲಪ್ಪ' ಎಂದು ಕೈಕಟ್ಟಿ ಕುಳಿತುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ವಿಪಕ್ಷವಾಗಿ ಇದ್ದೂ ಇಲ್ಲದಂತಾಗಿದೆ.


ಬಿಜೆಪಿಯಲ್ಲಿ ಒಂದಲ್ಲ, ಎರಡಲ್ಲ. ಬದಲಾಗಿ, ನಾಲ್ಕೈದು ಬಣಗಳು ಇವೆ. ಈ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣ, ವಿಪಕ್ಷ ನಾಯಕ ಆರ್ ಅಶೋಕ್ ಬಣ, ಹೈಕಮಾಂಡ್ ನಾಯಕರನ್ನು ಒಪ್ಪುವ ಹಾಗೂ ಅವರ ಸೂಚನೆಯಂತೆ ನಡೆಯುವ ಮತ್ತೊಂದು ಬಣ ಇದೆ. ಅಷ್ಟೇ ಅಲ್ಲ, ರೆಬೆಲ್ಸ್ ಆಗಿ ಗುರುತಿಸಿಕೊಂಡಿರುವ ಬಣವೂ ಇಲ್ಲಿದೆ. ಇವೆಲ್ಲದರ ಜೊತೆಗೆ ಬಣ ರಾಜಕೀಯದಿಂದ ಹತಾಶರಾಗಿ ತಾವಾಯ್ತು, ಕೆಲಸವಾಯ್ತು ಎಂದು ಇರುವ ಮಗದೊಂದು ಬಣವೂ ಇದೆ. ಈ ಬಣಗಳಿಂದ ಬಿಜೆಪಿ ಸದ್ಯ ಹೈರಾಣಾಗಿದ್ದು, ಕಾರ್ಯಕರ್ತರೂ ಸೊರಗಿ ಹೋಗಿದ್ದಾರೆ.

ಬಿವೈ ವಿಜಯೇಂದ್ರ v/s ರೆಬೆಲ್ಸ್

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ಜೋರಾಗಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಬೇಕು ಎಂಬ ಬೇಡಿಕೆ ಇದೆ. ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿತ್ತು. ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬ ಪರಿಸ್ಥಿತಿಗೆ ಈ ಆಡಿಯೋ ಕೈಗನ್ನಡಿ ಆಗಿದೆ. ವಿಜಯೇಂದ್ರ ಅವರಿಗೆ ಹೈಕಮಾಂಡ್ ಕೆಲವು ನಾಯಕರ ಬೆಂಬಲ ಇದೆ. ಹಾಗಾಗಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಅದರೆ ಅವರನ್ನು ಒಪ್ಪದೆ ಇರುವ ತಂಡವೂ ಅಷ್ಟೇ ಬಲಿಷ್ಠವಾಗಿದೆ.

ಡಿವಿ ಸದಾನಂದ ಗೌಡ v/s ಎಸ್ ಆರ್ ವಿಶ್ವನಾಥ್

ಮತ್ತೊಂದು ಕಡೆಯಲ್ಲಿ ಡಿವಿ ಸದಾನಂದ ಗೌಡ ವರ್ಸಸ್ ಎಸ್ ಆರ್ ವಿಶ್ವನಾಥ್ ನಡುವಿನ ಜಗಳವೂ ತಾರಕ್ಕಕ್ಕೇರಿದೆ. ಕೆಂಪೇಗೌಡ ಜಯಂತಿ ಆಚರಣೆ ವಿಚಾರವಾಗಿ ಉಂಟಾದ ಈ ತಿಕ್ಕಾಟ ಇದೀಗ ಬೇರೆಯದ್ದೇ ಸ್ವರೂಪವನ್ನು ಪಡೆದುಕೊಂಡಿದೆ. ಎಸ್ ಆರ್ ವಿಶ್ವನಾಥ್ ವಿರುದ್ಧ ಡಿವಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕೆಲವೊಂದು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಶ್ವನಾಥ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸದಾನಂದ ಗೌಡರಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ಈ ನಡುವೆ ಇಬ್ಬರ ನಡುವಿನ ಗಲಾಟೆಯನ್ನು ತಿಳಿಗೊಳಿಸುವ ಪ್ರಯತ್ನವನ್ನು ವಿಪಕ್ಷ ನಾಯಕ ಆರ್ ಅಶೋಕ್ ನಡೆಸಿದ್ದಾರೆ.

ಡಾ. ಕೆ ಸುಧಾಕರ್ v/s ಎಸ್ ಆರ್ ವಿಶ್ವನಾಥ್

ಮತ್ತೊಂದು ಕಡೆಯಲ್ಲಿ ಎಸ್ ಆರ್ ವಿಶ್ವನಾಥ್ ಮತ್ತು ಡಾ. ಕೆ ಸುಧಾಕರ್ ನಡುವೆಯೂ ಗಲಾಟೆ ಜೋರಾಗಿದೆ. ಇಬ್ಬರು ಬಹಿರಂಗವಾಗಿ ಸವಾಲು ಪ್ರತಿ ಸವಾಲು ಹಾಕಿದ್ದಾರೆ. ಯಲಹಂಕದಲ್ಲಿ ಸ್ಪರ್ಧೆ ಮಾಡುವ ಎಚ್ಚರಿಕೆಯನ್ನು ಸುಧಾಕರ್ ನೀಡಿದರೆ, ಸುಧಾಕರ್ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಸ್ಪರ್ಧೆ ಮಾಡುತ್ತಾರೋ ಅಥವಾ ಸಂಸದರಾಗಿ ಸ್ಪರ್ಧೆ ಮಾಡುತ್ತಾರೋ ಎಂಬ ಸವಾಲನ್ನು ವಿಶ್ವನಾಥ್ ಎಸೆದಿದ್ದಾರೆ. ಹೀಗಾಗಿ ಈ ಗಲಾಟೆಯೂ ತಾರಕಕ್ಕೇರಿದೆ.

ಯತ್ನಾಳ್ ಉಚ್ಚಾಟನೆಗೊಂಡರೂ ಮುಗಿಯದ ಗೋಳು

ಇದೆಲ್ಲಾ ಒಂದು ಕಡೆಯಾದರೆ ಬಿಜೆಪಿಯಲ್ಲಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಆದರೆ ಅವರು ಉಚ್ಚಾಟನೆಗೊಂಡರೂ ವಿಜಯೇಂದ್ರ ಮತ್ತು ಅವರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಅವರ ಮಾತುಗಳಿಗೆ ಬಿಜೆಪಿ ರೆಬೆಲ್ ಟೀಂ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿದೆ. ಹೀಗಾಗಿ ಇದೊಂದು ರೀತಿಯಲ್ಲಿ ಪಕ್ಷಕ್ಕೆ ನಿತ್ಯ ಇರುಸು ಮುರುಸಿನ ಪ್ರಸಂಗವಾಗಿದೆ.

ಹೈಕಮಾಂಡ್ ನಡೆ ಏನು?

ಇಷ್ಟೆಲ್ಲಾ ನಡೆಯುತ್ತಿದ್ದರೂ ಪಕ್ಷದ ಹೈಕಮಾಂಡ್ ಮಾತ್ರ ನಿಂತ ನೀರಾಗಿದೆ. ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಚುನಾವಣೆಗೆ ಇನ್ನೇನು ಎರಡು ವರ್ಷವಷ್ಟೇ ಬಾಕಿ ಇದೆ. ಹೀಗಿರುವಾಗ ಹೈಕಮಾಂಡ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಗೊಂದಲ ಬಗೆಹರಿಸುವ ಪ್ರಯತ್ನವನ್ನು ಅವರು ನಡೆಸುತ್ತಿಲ್ಲ. ಸಂಘದ ನಾಯಕರು ಕೆಲವೊಂದು ಸೂಚನೆಗಳನ್ನು ನೀಡಿದರೂ ಅದ್ಯಾವುದು ಪಾಲನೆ ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಒಡೆದ ಮನೆಯಾಗಿದೆ. ಇದನ್ನು ಸರಿಪಡಿಸುವ ಕೆಲಸ ಯಾವಾಗಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka