Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು ನೈರುತ್ಯ ರೈಲ್ವೆಗೆ ಸೇರ್ಪಡೆ: 'ನಮಗೆ ಆದಾಯ ಕೊರತೆ, ನಷ್ಟವಾಗುತ್ತೆ' ಎಂದು   ಪ್ರಧಾನಿ ಮೊರೆಹೋದ ಕೇರಳ CM ವಿಡಿ ಸತೀಶನ್!

ಮಂಗಳೂರು ನೈರುತ್ಯ ರೈಲ್ವೆಗೆ ಸೇರ್ಪಡೆ: 'ನಮಗೆ ಆದಾಯ ಕೊರತೆ, ನಷ್ಟವಾಗುತ್ತೆ' ಎಂದು ಪ್ರಧಾನಿ ಮೊರೆಹೋದ ಕೇರಳ CM ವಿಡಿ ಸತೀಶನ್!

Vijay Karnataka 2 months ago

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾವಣೆ ಮಾಡಿರುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಕೇರಳದ ಸಿಎಂ ವಿಡಿ ಸತೀಶನ್ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, "ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಕೈಬಿಡುವ ರೈಲ್ವೆ ಮಂಡಳಿಯ ನಿರ್ಧಾರವು ಸಂಪೂರ್ಣ ಏಕಪಕ್ಷೀಯವಾಗಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂಬುದು ನಮ್ಮ ರಾಜ್ಯದ ಒಮ್ಮತದ ನಿಲುವಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಿದ್ದು, ರಾಜ್ಯದ ಸಂಸದರ ಸಹಯೋಗದೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರಲಿದ್ದೇವೆ," ಎಂದು ಹೇಳಿದ್ದಾರೆ.

ನಮಗೆ ಮಾಹಿತಿ ನೀಡಿಲ್ಲ

ಪಾಲಕ್ಕಾಡ್ ವಿಭಾಗವನ್ನು ವಿಭಜಿಸುವ ಕುರಿತು ರಾಜ್ಯದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸಿಲ್ಲ ಅಥವಾ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉಳ್ಳಾಲದಿಂದ ಮಂಗಳೂರು ಜಂಕ್ಷನ್‌ವರೆಗಿನ ಪ್ರಮುಖ ನಿಲ್ದಾಣಗಳನ್ನು ನೈರುತ್ಯ ರೈಲ್ವೆಗೆ ವಿಲೀನಗೊಳಿಸುವುದರಿಂದ ಪಾಲಕ್ಕಾಡ್ ವಿಭಾಗಕ್ಕೆ ಭಾರಿ ಆದಾಯ ನಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇರಳ ಸಿಎಂ, " ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ಜಂಕ್ಷನ್ ಅನ್ನು ಬೇರ್ಪಡಿಸಿ, ನೈರುತ್ಯ ರೈಲ್ವೆಗೆ ವಿಲೀನಗೊಳಿಸುವ ರೈಲ್ವೆ ಮಂಡಳಿಯ ಏಕಪಕ್ಷೀಯ ನಿರ್ಧಾರವು ಒಪ್ಪಿಕೊಳ್ಳಲು ಸಾಧ್ಯವಿಲ್ಲದ್ದು. ಇದು ದಕ್ಷಿಣ ರೈಲ್ವೆ ಹಾಗೂ ಕೇರಳದ ಆದಾಯ ಮತ್ತು ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಾವು ಈ ವಿಷಯವನ್ನು ಪ್ರಧಾನಮಂತ್ರಿಗಳು ಹಾಗೂ ರೈಲ್ವೆ ಸಚಿವರ ಗಮನಕ್ಕೆ ತುರ್ತಾಗಿ ತರಲಿದ್ದೇವೆ " ಎಂದಿದ್ದಾರೆ.

ಕರಾವಳಿಗರ ದಶಕದ ಹೋರಾಟ

ಮಂಗಳೂರು ರೈಲ್ವೆ ಪಾಲಕ್ಕಾಡ್ ವಲಯದಲ್ಲಿದ್ದಾಗ ಮಂಗಳೂರು ವ್ಯಾಪ್ತಿಯ ಆದಾಯ ಪಾಲಕ್ಕಾಡ್ ವಲಯದ ಪಾಲಾಗುತ್ತಿತ್ತು. ಕರಾವಳಿಗರ ರೈಲ್ವೆ ಬೇಡಿಕೆಗಳು ಕೇರಳಿಗರ ಲಾಬಿಯ ಮುಂದೆ ಮಂಕಾಗುತ್ತಿತ್ತು. ಮಂಗಳೂರು ರೈಲ್ವೆಗೆ ಸಿಗಬೇಕಾದ ಸವಲತ್ತುಗಳು ಪಾಲಕ್ಕಾಟ್ ಲಾಬಿಯಿಂದ ವಂಚಿತವಾಗುತ್ತಿತ್ತು. ಇದನ್ನು ಮನಗಂಡ ಕರಾವಳಿ ರೈಲ್ವೆ ಹೋರಾಟಗಾರರು ಮಂಗಳೂರು ರೈಲ್ವೆಯನ್ನು ಪಾಲಕ್ಕಾಡ್‌ನಿಂದ ಬೇರ್ಪಡಿಸಿ ನೈಋತ್ಯಕ್ಕೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದರು.

"ಮಂಗಳೂರು ಇನ್ನು ಕರ್ನಾಟಕ ನೈರುತ್ಯ ರೈಲ್ವೆ (ಹುಬ್ಬಳ್ಳಿ/ಮೈಸೂರು ವಲಯ) ವ್ಯಾಪ್ತಿಗೆ ಬರುವುದರಿಂದ ಕರಾವಳಿ-ಬೆಂಗಳೂರು ನಡುವೆ ಹೊಸ ರೈಲುಗಳ ಪ್ರಯಾಣ, ಸಮಯದ ಬದಲಾವಣೆ ಮತ್ತು ಹೊಂದಾಣಿಕೆ, ಸುಧಾರಣೆ, ರೈಲ್ವೆ ನಿಲ್ದಾಣ ಮೇಲ್ದರ್ಜೆ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗೆ ವೇಗ ಸಿಗಲಿದೆ " ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್‌ನಿಂದ ನೈರುತ್ಯ ರೈಲ್ವೆಗೆ ಸೇರಿಸಬೇಕೆನ್ನುವುದು ಕರಾವಳಿಗರ ಹಲವು ದಶಕಗಳ ಕನಸಾಗಿದ್ದು, ಈಗ ಸಾಕಾರಗೊಂಡಿದೆ. ಇದರಿಂದ ಕರಾವಳಿ ಭಾಗದ ರೈಲ್ವೆ ಆದಾಯ ಹುಬ್ಬಳ್ಳಿ ರೈಲ್ವೆ ವಲಯ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಹೇಳಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka