ಇನ್ನೂ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗೆಲುವಿನ ದಾರಿ ಕಂಡುಕೊಂಡಿರುವ ಲಖನೌ ಸೂಪರ್ ಜೈಂಟ್ಸ್ ಇದೀಗ ಮುಖಾಮುಖಿಯಾಗಲಿವೆ. ಏಪ್ರಿಲ್ 9ರ ಗುರುವಾರದಂದು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಪಂದ್ಯದಲ್ಲಿ ಮಳೆ ಬಾರದೇ ಹೋದಲ್ಲಿ ರನ್ ಸುರಿಮಳೆ ಆಗುವುದು ಖಚಿತ ಎಂದೇ ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.
ಇತ್ತಂಡಗಳ ಈ ಹಿಂದಿನ ದಾಖಲೆಯನ್ನು ಗಮನಿಸಿದಲ್ಲಿ ಒಟ್ಟು 6 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು 4 ಬಾರಿ ಲಖನೌ ಜಯಭೇರಿ ಬಾರಿಸಿದ್ದರೆ, ಕೋಲ್ಕತ್ತಾ ಎರಡು ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಈ ಸೀಸನ್ ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 2 ಸೋಲು ಮತ್ತೊಂದು ರದ್ದಿನಿಂದಾಗಿ ಕೇವಲ ಒಂದು ಅಂಕವನ್ನಷ್ಟೇ ಸಂಪಾದಿಸಿರುವ ಕೋಲ್ಕತ್ತಾ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೇವೇಳೆ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದ ಆತ್ಮವಿಶ್ವಾಸದಲ್ಲಿದೆ ಲಖನೌ.
ಕೆಕೆಆರ್ ಅಸ್ಥಿರ ಬ್ಯಾಟಿಂಗ್
2024ರ ಸೀಸನ್ ಚಾಂಪಿಯನ್ ತಂಡವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ಸೀಸನ್ ನಲ್ಲೂ ಅದೇ ಕಳಪೆ ಪ್ರದರ್ಶನ ಮುಂದುವರಿಯುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದ ಬಳಿಕ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕ ಕುಸಿದಿತ್ತು. ಆದಾಗಲೇ ಮಳೆ ಬಂದಿದ್ದರಿಂದ ತಂಡ ಕಠಿಣ ಪರಿಸ್ಥಿತಿಯಿಂದ ಪಾರಾಯಿತು. ಹೀಗಾಗಿ ಕೋಲ್ಕತಾ ತಂಡದ ಬ್ಯಾಟರ್ ಗಳು ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ನಾಯಕ ರಹಾನೆ, ರಘುವಂಶಿ, ರಿಂಕು ಸಿಂಗ್ ಉತ್ತಮ ಆಟವಾಡುತ್ತಿದ್ದಾರೆ. ಆದರೆ ಫಿನ್ ಅಲೆನ್, ಕ್ಯಾಮರೂನ್ ಗ್ರೀನ್ ಅವರು ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಬೌಲಿಂಗ್ ವಿಭಾಗಕ್ಕೆ ಬಂದಾಗ ಮಿಸ್ಚರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಫಾರ್ಮ್ ನಲ್ಲಿರುವುದು ಚಿಂತೆಗೆ ಕಾರಣವಾಗಿದೆ.ಆತ್ಮವಿಶ್ವಾಸದಲ್ಲಿ ಲಖನೌ
ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡ ಆತ್ಮವಿಶ್ವಾಸದಿಂದ ಪುಟಿಯುತ್ತಿದೆ. ತಂಡದ ಬೌಲಿಂಗ್ ವಿಭಾಗ ಸನ್ ರೈಸರ್ಸ್ ವಿರುದ್ಧ ಉನ್ನತ ಮಟ್ಟದ ಪ್ರದರ್ಶನ ನೀಡಿರುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ನಾಯಕ ರಿಷಬ್ ಪಂತ್ ಅವರು ಫಾರ್ಮ್ ಕಂಡುಕೊಂಡಿರುವುದು ಮತ್ತೊಂದು ಕಾರಣ. ಪಂತ್ ಜೊತೆ ಮಿಚೆಲ್ ಮಾರ್ಷ್, ಮಾರ್ಕಂ ಉತ್ತಮ ಲಯದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ಮೊಹಮ್ಮದ್ ಶಮಿ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.ಹೇಗಿದೆ ಈಡನ್ ಗಾರ್ಡನ್ ಪಿಚ್?
ಈಡನ್ ಗಾರ್ಡನ್ಸ್‌ನ ಪಿಚ್ ಇದೀಗ ಹೈಸ್ಕೋರಿಂಗ್ ಪಿಚ್ ಆಗಿ ಬದಲಾಗಿದೆ. ಬ್ಯಾಟ್ ಗೆ ಚೆಂಡು ಚೆನ್ನಾಗಿ ಬರುವುದರಿಂದ ಬ್ಯಾಟರ್ ಗಳು ಇಲ್ಲಿ ಆಕ್ರಮಣಕಾರಿ ಆಟವನ್ನು ಆನಂದಿಸಬಹುದು. ದೊಡ್ಡ ಹೊಡೆತಗಳಿಗೆ ಕೈ ಹಾಕಬಹುದು. ಪಿಚ್‌ನಲ್ಲಿ ತೇವಾಂಶ ಇರುವುದರಿಂದ ವೇಗದ ಬೌಲರ್‌ಗಳಿಗೆ ಇನ್ನಿಂಗ್ಸ್‌ನ ಆರಂಭದಲ್ಲಿ ಸ್ವಲ್ಪ ಸಹಾಯ ಸಿಗಬಹುದು. ಆದರೆ ಪಂದ್ಯ ಮುಂದುವರಿದಂತೆ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗುವುದರಿಂದ ಬೌಲರ್ ಗಳಿಗೆ ರನ್ ನಿಯಂತ್ರಣ ದೊಡ್ಡ ಸವಾಲಾಗಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡ 200ಕ್ಕಿಂತ ಹೆಚ್ಚು ರನ್ ಗಳಿಸಿದರೆ ಮಾತ್ರ ಸುರಕ್ಷಿತ. ಅದಕ್ಕಿಂತ ಕಡಿಮೆ ರನ್ ಗಳಿಸಿದರೆ ಆ ಮೊತ್ತವನ್ನು ಈ ಪಿಚ್ ನಲ್ಲಿ ರಕ್ಷಿಸುವುದು ಕಷ್ಟ. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬನಿಯ ಪ್ರಭಾವ ಸಹ ಬೌಲರ್ ಗಳಿಗೆ ಪ್ರತಿಕೂಲ ಸನ್ನಿವೇಶ ಸೃಷ್ಟಿಸುವ ಸಾಧ್ಯತೆ ಹೆಚ್ಚು. ಈಡನ್ ಗಾರ್ಡನ್ ನಲ್ಲಿ ಈ ಹಿಂದಿನ ಪಂದ್ಯ ಮಳೆಗಾಹುತಿಯಾಗಿತ್ತು. ಗುರವಾರ ಸಹ ಹೆಚ್ಚೂಕಮ್ಮಿ ಅದೇ ಪರಿಸ್ಥಿತಿ ಎದುರಾಗಬಹುದು. ಪಂದ್ಯದ ವೇಳೆ ಮಳೆ ಬಂದಲ್ಲಿ ಓವರ್ ಗಳು ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಟಾಸ್ ಗೆದ್ದವರು ಫೀಲ್ದಿಂಗ್ ತೆಗೆದುಕೊಂಡರೆ ಹೆಚ್ಚು ಅನುಕೂಲ.- ಪಂದ್ಯ: ಕೋಲ್ಕತ್ತಾ ನೈಟ್ ರೈಡರ್ಸ್ vs ಲಖನೌ ಸೂಪರ್ ಜೈಂಟ್ಸ್
- ದಿನಾಂಕ: ಗುರುವಾರ, ಏಪ್ರಿಲ್ 9,
- ಸಮಯ : ಸಂಜೆ 7:30
- ಸ್ಥಳ : ಈಡನ್ ಗಾರ್ಡನ್ಸ್, ಕೋಲ್ಕತ್ತಾ
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸ್ಟಾರ್ ಆಯಪ್ ಮತ್ತು ವೆಬ್‌ಸೈಟ್
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್
ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ ಕ್ರಿಶ್ರಘುವಂಶಿ (ವಿಕೆಟ್ ಕೀಪರ್), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್ , ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ- ಇಂಪ್ಯಾಕ್ಟ್ ಪ್ಲೇಯರ್: ಬ್ಲೆಸಿಂಗ್ ಮುಜರಬಾನಿ
ಲಖನೌ ಸೂಪರ್ ಜೈಂಟ್ಸ್ ಪ್ಸೇಯಿಂಗ್ ಇಲೆವೆನ್
ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಐಡೆನ್ ಮಾರ್ಕಂ, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮಣಿಮಾರನ್ ಸಿದ್ಧಾರ್ಥ್, ಅವೇಶ್ ಖಾನ್, ಮೊಹಮ್ಮದ್ ಶಮಿ, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್- ಇಂಪ್ಯಾಕ್ಟ್ ಪ್ಲೇಯರ್: ಆಯುಷ್ ಬದೋನಿ

