Dailyhunt Logo
  • Light mode
    Follow system
    Dark mode
    • Play Story
    • App Story
ಮೌನವೇ ಅವಳ ಅತಿದೊಡ್ಡ ಹೋರಾಟ: ಇದು ಒಬ್ಬಳ ಕಥೆಯಲ್ಲ, ಆತ್ಮಗೌರವದದಿಂದ ಬದುಕೋ ಪ್ರತಿಯೊಬ್ಬ ದಿಟ್ಟ ನಾರಿಯ ಕಥೆ!

ಮೌನವೇ ಅವಳ ಅತಿದೊಡ್ಡ ಹೋರಾಟ: ಇದು ಒಬ್ಬಳ ಕಥೆಯಲ್ಲ, ಆತ್ಮಗೌರವದದಿಂದ ಬದುಕೋ ಪ್ರತಿಯೊಬ್ಬ ದಿಟ್ಟ ನಾರಿಯ ಕಥೆ!

Vijay Karnataka 6 days ago

ದು ಒಬ್ಬ ಹೆಣ್ಣು ಮಗಳ ಕಥೆಯಲ್ಲ; ಜೀವನದ ಹಲವು ಹಂತಗಳಲ್ಲಿ ತನ್ನ ನೋವು, ಅವಮಾನ, ತಿರಸ್ಕಾರ, ಜವಾಬ್ದಾರಿ ಮತ್ತು ಒಂಟಿತನವನ್ನು ಎದುರಿಸುತ್ತಾ ಬದುಕನ್ನು ಮುನ್ನಡೆಸುತ್ತಿರುವ ಅನೇಕ ಹೆಣ್ಣುಮಕ್ಕಳ ಕಥೆ.

ದೃಢಮನಸ್ಸಿನ ಹೆಣ್ಣಿನ ಮೌನದ ಹಿಂದಿನ ಕತೆಯಿದು

ದೃಢವಾದ ಹೆಣ್ಣು (Strong woman) ಎಂದರೆ ಅವಳಿಗೆ ನೋವಾಗುವುದಿಲ್ಲ ಎಂದಲ್ಲ, ಅವಳು ಎಂದಿಗೂ ಅಳುವುದಿಲ್ಲ ಎಂದೂ ಅಲ್ಲ..
ಅವಳಿಗೂ ಮನಸ್ಸಿದೆ, ಅವಳಿಗೂ ಆಸೆ ಕನಸುಗಳಿವೆ, ಯಾರಾದರೂ ತನ್ನನ್ನು ಅರ್ಥಮಾಡಿಕೊಳ್ಳಲಿ, ಕಷ್ಟದ ಸಮಯದಲ್ಲಿ ತನ್ನ ಪಕ್ಕದಲ್ಲಿ ನಿಲ್ಲಲಿ, ಒಂದಷ್ಟು ಪ್ರೀತಿಯಿಂದ ಮಾತನಾಡಲಿ ಎಂಬ ಸಹಜವಾದ ಬಯಕೆಗಳಿವೆ. ಆದರೆ ಜೀವನ ಯಾವಾಗಲೂ ಅವಳು ಬಯಸಿದಂತೆ ನಡೆಯುವುದಿಲ್ಲ. ಕೆಲವೊಮ್ಮೆ ನಂಬಿದವರೇ ನೋಯಿಸುತ್ತಾರೆ, ಕೆಲವೊಮ್ಮೆ ಅವಮಾನಗಳನ್ನು ಎದುರಿಸಬೇಕಾಗುತ್ತದೆ, ಕೆಲವೊಮ್ಮೆ ತನ್ನ ಮಾತಿಗೆ ಬೆಲೆ ಸಿಗುವುದಿಲ್ಲ, ಇನ್ನೂ ಕೆಲವೊಮ್ಮೆ ಎಲ್ಲವನ್ನೂ ಹೇಳಿಕೊಳ್ಳಲು ಒಬ್ಬರೂ ಇಲ್ಲದಂತೆ ಅನಿಸುತ್ತದೆ.

ಅಂತಹ ಸಂದರ್ಭಗಳಲ್ಲಿ ಅವಳು ಒಳಗೊಳಗೆ ಕುಗ್ಗಿದರೂ, ತನ್ನ ಬದುಕನ್ನು ಅಲ್ಲಿಯೇ ನಿಲ್ಲಿಸದೆ ಮತ್ತೆ ಮುಂದುವರಿಯಲು ಪ್ರಯತ್ನಿಸುತ್ತಾಳೆ. ಪ್ರತಿ ಬಾರಿಯೂ ಬಿದ್ದಾಗ ತಕ್ಷಣ ಎದ್ದು ನಿಲ್ಲಲು ಸಾಧ್ಯವಾಗದೇ ಇರಬಹುದು... ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಕಣ್ಣೀರು ಸುರಿಸಬಹುದು, ತನ್ನನ್ನೇ ಪ್ರಶ್ನಿಸಿಕೊಳ್ಳಬಹುದು. ಆದರೂ ನಿಧಾನವಾಗಿ ತನ್ನನ್ನು ತಾನು ಚೇತರಿಸಿಕೊಳ್ಳುತ್ತಾಳೆ. ಅವಳನ್ನು ಕುಗ್ಗಿಸಿದ ಮಾತುಗಳನ್ನು ತನ್ನ ಮೌಲ್ಯದ ಅಳತೆಯನ್ನಾಗಿ ಮಾಡಿಕೊಳ್ಳುವುದಿಲ್ಲ. ಯಾರಾದರೂ ತಿರಸ್ಕರಿಸಿದರೆ ತಾನು ತಿರಸ್ಕಾರಕ್ಕೆ ಅರ್ಹಳು ಎಂದು ಭಾವಿಸುವುದಿಲ್ಲ. ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಲು, ತನ್ನ ಕಾಲಿನ ಮೇಲೆ ನಿಲ್ಲಲು ಮತ್ತು ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಅವಳು ಕಲಿಯುತ್ತಾಳೆ, ಅದಕ್ಕಾಗಿ ಪ್ರತಿದಿನವೂ ಪ್ರಯತ್ನಿಸುತ್ತಾಳೆ.

ಅವಳ ಸ್ವಾತಂತ್ರ್ಯ ಯಾರ ವಿರುದ್ಧದ ಹೋರಾಟವಲ್ಲ..ತನ್ನ ಬದುಕಿನ ಆಯ್ಕೆಗಳ ಮೇಲೆ ತನ್ನ ಮಾತಿಗೂ ,ತನ್ನ ಭಾವನೆಗಳಿಗೂ ಹಕ್ಕು ಇದೆ ಎಂಬ ಅರಿವು. ಅವಳು ಯಾರನ್ನೂ ದ್ವೇಷಿಸಿ ತನ್ನನ್ನು ಬದಲಿಸಿಕೊಂಡಿಲ್ಲ.. ಎದುರಾದ ಅನುಭವಗಳು ಅವಳಿಗೆ ಯಾರನ್ನು ನಂಬಬೇಕು, ಎಲ್ಲಿ ತನ್ನ ಮಿತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ತನ್ನನ್ನು ತಾನು ಹೇಗೆ ಗೌರವಿಸಿಕೊಳ್ಳಬೇಕು ಎಂಬುದನ್ನು ನಿಧಾನವಾಗಿ ಕಲಿಸುತ್ತಿವೆ.

ಆತ್ಮಗೌರವಕ್ಕಾಗಿ ನಿಲ್ಲುವ ದೃಢವಾದ ಹೆಣ್ಣಿಗೆ ನಮ್ಮ ಸಮಾಜ ನೀಡುವ ಪದವಿಗಳು!

ದೃಢವಾಗಿ ತನ್ನ ಪರ ನಿಲ್ಲುವ ಹೆಣ್ಣನ್ನು ಎಲ್ಲರೂ 'ಗಟ್ಟಿಯಾದವಳು, ಧೈರ್ಯವಂತ ಹೆಣ್ಣು ಎಂದು ಕರೆಯುವುದಿಲ್ಲ.. ತನ್ನ ಮಾತನ್ನು ನೇರ ಮತ್ತು ಸ್ಪಷ್ಟವಾಗಿ ಹೇಳಿದರೆ 'ಒರಟು ಸ್ವಭಾವದವಳು', ತನ್ನ ಅಗತ್ಯಗಳಿಗೆ ಆದ್ಯತೆ ನೀಡಿದರೆ 'ಸ್ವಾರ್ಥಿ', ಆತ್ಮಗೌರವಕ್ಕಾಗಿ ತಲೆಬಾಗದಿದ್ದರೆ 'ಅಹಂಕಾರಿ', ತನ್ನ ನಿರ್ಧಾರಗಳ ಮೇಲೆ ನಿಂತರೆ 'ಈಗೋ ಇರುವವಳು' ಎಂಬ ಹೆಸರುಗಳನ್ನೂ ಕೊಡುತ್ತಾರೆ. ಕೆಲವೊಮ್ಮೆ ಸಮಾಜದ ಮಾತಿಗೆ ತಲೆಬಾಗುವ ಹೆಣ್ಣು 'ಒಳ್ಳೆಯವಳು'.. ಆದರೆ ತನ್ನ ಬದುಕಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವ ಹೆಣ್ಣು 'ಕೆಟ್ಟವಳು' ಎಂಬ ತೀರ್ಪನ್ನೂ ಎದುರಿಸಬೇಕಾಗುತ್ತದೆ.

ಹೆಣ್ಣಿನ ಮೌನ, ಕಣ್ಣೀರು ಅವಳ ದೌರ್ಬಲ್ಯತೆಯಲ್ಲ

ಅವಳ ಮೌನವನ್ನು ದೌರ್ಬಲ್ಯವೆಂದು ನೋಡಬೇಡಿ, ಅವಳ ಕಣ್ಣೀರನ್ನು ಸೋಲಾಗಿ ಅರ್ಥಮಾಡಿಕೊಳ್ಳಬೇಡಿ, ಅವಳ ಒಂಟಿತನವನ್ನು ಅವಳ ಅಸಹಾಯಕತೆಯೆಂದು ಭಾವಿಸಬೇಡಿ. ಕೆಲವೊಮ್ಮೆ ಒಬ್ಬ ಹೆಣ್ಣು ಮೌನವಾಗಿ ತನ್ನ ಬದುಕನ್ನು ಸರಿಪಡಿಸಿಕೊಳ್ಳುತ್ತಿರುವುದೇ ದೊಡ್ಡ ಹೋರಾಟವಾಗಿರುತ್ತದೆ. ಅವಳು ಎಲ್ಲವನ್ನೂ ಗೆದ್ದವಳಲ್ಲ.. ಇನ್ನೂ ಅನೇಕ ಕನಸುಗಳಿಗಾಗಿ, ತನ್ನ ಭವಿಷ್ಯಕ್ಕಾಗಿ, ತನ್ನ ನೆಮ್ಮದಿಗಾಗಿ ಹೋರಾಡುತ್ತಿರುವವಳು. ಅವಳ ಗಟ್ಟಿತನವೆಂದರೆ ನೋವಿಲ್ಲದಿರುವುದಲ್ಲ...ನೋವಿನ ನಡುವೆಯೂ ತನ್ನನ್ನು ತಾನು ಕಳೆದುಕೊಳ್ಳದೆ ಮುಂದೆ ಸಾಗುವ ಧೈರ್ಯ. ಅವಳ ಗೆಲುವೆಂದರೆ ಯಾರನ್ನಾದರೂ ಸೋಲಿಸುವುದಲ್ಲ...ತನ್ನನ್ನು ಕುಗ್ಗಿಸಿದ ಪರಿಸ್ಥಿತಿಗಳಿಗಿಂತ ದೊಡ್ಡವಳಾಗಿ ಬೆಳೆಯುವುದು.

ಇಂತಹ ಪ್ರತಿಯೊಬ್ಬ ಹೆಣ್ಣಿನ ಹೋರಾಟಕ್ಕೂ, ಅವಳ ಆತ್ಮಗೌರವಕ್ಕೂ, ಅವಳು ಮೌನವಾಗಿ ಹೊತ್ತಿರುವ ನೋವಿಗೂ ಮತ್ತು ಮತ್ತೆ ಮತ್ತೆ ಎದ್ದು ನಿಲ್ಲಲು ಮಾಡುವ ಪ್ರತಿಯೊಂದು ಪ್ರಯತ್ನಕ್ಕೂ ಸಲ್ಯೂಟ್.

ಹೆಣ್ಣುಮಕ್ಕಳನ್ನು ಅರ್ಥಮಾಡಿಕೊಳ್ಳುವ, ಗೌರವಿಸುವ ಮತ್ತು ಅವರ ಬದುಕಿನ ಆಯ್ಕೆಗಳಿಗೆ ಬೆಂಬಲವಾಗಿ ನಿಲ್ಲುವ ಮನಸ್ಸು ನಮ್ಮೆಲ್ಲರಲ್ಲೂ ಬೆಳೆಯಲಿ. ಪ್ರತಿಯೊಬ್ಬ ಹೆಣ್ಣಿಗೂ ತನ್ನ ಬದುಕನ್ನು ತನ್ನ ಆತ್ಮಗೌರವದಿಂದ, ಧೈರ್ಯದಿಂದ ಮತ್ತು ನೆಮ್ಮದಿಯಿಂದ ಕಟ್ಟಿಕೊಳ್ಳುವ ಅವಕಾಶ ಸಿಗಲಿ. ಅದೇ ಅವಳಿಗೆ ನಾವು ನೀಡಬಹುದಾದ ನಿಜವಾದ ಗೌರವ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka