Dailyhunt
ಮುಗಿಲೆತ್ತರಕ್ಕೆ ಭಾರತದ ರಕ್ಷಣಾ ರಫ್ತು; ಭಾರತ ಏನು ಮಾರುತ್ತಿದೆ? ಯಾವ ರಾಷ್ಟ್ರ ಏನು ಖರೀದಿಸುತ್ತಿದೆ? Explained

ಮುಗಿಲೆತ್ತರಕ್ಕೆ ಭಾರತದ ರಕ್ಷಣಾ ರಫ್ತು; ಭಾರತ ಏನು ಮಾರುತ್ತಿದೆ? ಯಾವ ರಾಷ್ಟ್ರ ಏನು ಖರೀದಿಸುತ್ತಿದೆ? Explained

Vijay Karnataka 1 week ago

ಹೊಸದಿಲ್ಲಿ: ಒಂದು ಕಾಲದಲ್ಲಿ ತನಗೆ ಬೇಕಾದ ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ, ರಷ್ಯಾ, ಫ್ರಾನ್ಸ್ ನಂತಹ ದೇಶಗಳತ್ತ ಮುಖ ಮಾಡುತ್ತಿದ್ದ ಭಾರತ, ಈಗ ಅದೇ ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಮತ್ತು ಬಿಡಿಭಾಗಗಳನ್ನು ಮಾರಾಟ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ.

"ಮೇಕ್ ಇನ್ ಇಂಡಿಯಾ" ಹಾಗೂ "ಆತ್ಮನಿರ್ಭರ ಭಾರತ" ಯೋಜನೆಗಳ ಅಡಿಯಲ್ಲಿ, ಭಾರತವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯಾಗುವತ್ತ ದಿಟ್ಟ ಹೆಜ್ಜೆಗಳನ್ನಿರಿಸಿದೆ. ಅಲ್ಲದೇ ಸ್ಥಳೀಯವಾಗಿ ತಯಾರಿಸಿದ ರಕ್ಷಣಾ ಉಪಕರಣಗಳನ್ನು ಅನ್ಯ ದೇಶಗಳಿಗೆ ಮಾರಾಟ ಮಾಡುವಲ್ಲಿಯೂ ಸೈ ಎನಿಸಿಕೊಂಡಿದೆ.

ಹೌದು, ಹಿಂದೊಮ್ಮೆ ರಕ್ಷಣಾ ಉಪಕರಣಗಳ ದೊಡ್ಡ ಆಮದುದಾರ ರಾಷ್ಟ್ರವಾಗಿದ್ದ ಭಾರತ, ಇದೀಗ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಬಲಿಷ್ಠ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2025-26ನೇ ಆರ್ಥಿಕ ವರ್ಷದಲ್ಲಿ, ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆ ಬರೆದಿದ್ದು, ಬರೋಬ್ಬರಿ 38,424 ಕೋಟಿ ರೂಪಾಯಿಗಳ ಆದಾಯ ತಂದುಕೊಟ್ಟಿದೆ. ಈ ಬಗ್ಗೆ ಸ್ವತಃ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದು, ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯದ ಮೇಲೆ ಜಾಗತಿಕ ವಿಶ್ವಾಸ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

2023-24ನೇ ಆರ್ಥಿಕ ವರ್ಷದಲ್ಲಿ 21,083 ಕೋಟಿ ರೂಪಾಯಿಗಳಷ್ಟಿದ್ದ ಭಾರತದ ರಕ್ಷಣಾ ರಫ್ತು, 2025-26ನೇ ಆರ್ಥಿಕ ವರ್ಷದಲ್ಲಿ 38,424 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಲ್ಲದೇ 2024-25ರ ರಕ್ಷಣಾ ರಫ್ತಿಗೆ ಹೋಲಿಸಿದರೆ ಕೇವಲ ಒಂದೇ ವರ್ಷದಲ್ಲಿ ಬರೋಬ್ಬರಿ ಶೇ. 62.66ರಷ್ಟು ಭಾರಿ ಬೆಳವಣಿಗೆ ಕಂಡಿದೆ. ಈ ಬೃಹತ್ ಯಶಸ್ಸಿನಲ್ಲಿ ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳು (DPSUs) ಹಾಗೂ ಖಾಸಗಿ ವಲಯಗಳೆರಡರ ಪಾತ್ರವಿದೆ. ಒಟ್ಟು ರಫ್ತಿನಲ್ಲಿ ಡಿಪಿಎಸ್‌ಯುಗಳ ಪಾಲು ಶೇ. 54.84 ರಷ್ಟಿದ್ದರೆ, ಖಾಸಗಿ ಉದ್ಯಮಗಳು ಶೇ. 45.16ರಷ್ಟು ಕೊಡುಗೆ ನೀಡಿವೆ. ಕೇಂದ್ರದ ರಕ್ಷಣಾ ಸುಧಾರಣೆಗಳು, ಎಫ್‌ಡಿಐ ನೀತಿಗಳು ಮತ್ತು ರಫ್ತು ಪ್ರೋತ್ಸಾಹಕ ಕ್ರಮಗಳು ಈ ಸಾಧನೆಗೆ ಮುನ್ನುಡಿ ಬರೆದಿವೆ.


ಭಾರತದಿಂದ ಏನು ರಫ್ತಾಗುತ್ತದೆ?

ಭಾರತವು ಅತ್ಯಾಧುನಿಕ ಕ್ಷಿಪಣಿಗಳು, ಹೆಲಿಕಾಪ್ಟರ್‌ಗಳು, ರಾಡಾರ್‌ಗಳು, ಆರ್ಟಿಲರಿ ಗನ್‌ಗಳು, ಹಾಗೂ ಡ್ರೋನ್‌ಗಳನ್ನು ವಿಶ್ವಾದ್ಯಂತ ರಫ್ತು ಮಾಡುತ್ತಿದೆ. ನಮ್ಮ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಪಿನಾಕ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್‌ಗಳಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿರುವ ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್‌ಗಳನ್ನು ಭಾರತ ಆರ್ಮೇನಿಯಾಗೆ ಮಾರಾಟ ಮಾಡಿದೆ. ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಧ್ರುವ್ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಚೇತಕ್‌ಗಳನ್ನು ನೇಪಾಳ, ಮಾರಿಷಸ್, ಮಾಲ್ಡೀವ್ಸ್, ಸುರಿನಾಮ್ ಮತ್ತು ನಮೀಬಿಯಾಗೆ ರಫ್ತು ಮಾಡಲಾಗುತ್ತಿದೆ.

ಹಾಗೆಯೇ ಹೆಚ್‌ಎಎಲ್ ನಿರ್ಮಿತ ಡಾರ್ನಿಯರ್-228 ವಿಮಾನಗಳಿಗೂ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಅರಬ್‌ ರಾಷ್ಟ್ರ ಯುಎಇ ಜೊತೆಗೆ 40,000ಕ್ಕೂ ಹೆಚ್ಚು 155 ಎಂಎಂ ಆರ್ಟಿಲರಿ ಶೆಲ್‌ಗಳನ್ನು ರಫ್ತು ಮಾಡುವ ಬೃಹತ್ ಒಪ್ಪಂದವನ್ನು ಭಾರತ ಮಾಡಿಕೊಂಡಿದೆ. ಶ್ರೀಲಂಕಾ ಮತ್ತು ವಿಯೆಟ್ನಾಂಗೆ ನೇವಲ್ ಪೆಟ್ರೋಲ್ ವೆಸಲ್‌ಗಳು (ಗಸ್ತು ಹಡಗುಗಳು), ಥೈಲ್ಯಾಂಡ್‌ಗೆ 600ಕ್ಕೂ ಹೆಚ್ಚು ಮಿಲಿಟರಿ ಟ್ರಕ್‌ಗಳು ರವಾನೆಯಾಗಿವೆ. ಇವುಗಳಷ್ಟೇ ಅಲ್ಲದೆ, ಪ್ರಪಂಚದ 30ಕ್ಕೂ ಹೆಚ್ಚು ದೇಶಗಳಿಗೆ ನಮ್ಮ ಬುಲೆಟ್‌ಪ್ರೂಫ್ ಜಾಕೆಟ್‌ಗಳು ಮತ್ತು ಹೆಲ್ಮೆಟ್‌ಗಳು ರಫ್ತಾಗುತ್ತಿವೆ.

ಭಾರತ ಇಂದು ಪ್ರಪಂಚದ 85ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಈ ಪಟ್ಟಿಯಲ್ಲಿ ಆಫ್ರಿಕಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯದ ದೇಶಗಳು ಮಾತ್ರವಲ್ಲ, ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಇದೆ. ರಕ್ಷಣಾ ವಲಯದಲ್ಲಿ ಬಳಸುವ ಅತ್ಯಾಧುನಿಕ ಬಿಡಿಭಾಗಗಳು, ಮಿಶ್ರಲೋಹಗಳು ಮತ್ತು ಸಬ್-ಸಿಸ್ಟಮ್‌ಗಳನ್ನು, ಅಮೆರಿಕವು ಭಾರತದಿಂದ ಅತಿಹೆಚ್ಚು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ವಿಮಾನಯಾನ ವಲಯಕ್ಕೆ ಬೇಕಾದ ಸಣ್ಣ ಬಿಡಿಭಾಗಗಳು, ನಿರ್ಣಾಯಕ ಉಪಕರಣಗಳು ಮತ್ತು ಫ್ಯೂಸ್‌ಲೇಜ್‌ನ್ನು
ಭಾರತೀಯ ಕಂಪನಿಗಳು ಉತ್ಪಾದಿಸಿ, ಜಾಗತಿಕ ದೈತ್ಯ ಕಂಪನಿಗಳಿಗೆ ಪೂರೈಸುತ್ತಿವೆ.

ಇನ್ನು ನೆರೆಯ ಮಯನ್ಮಾರ್‌ ಭಾರತೀಯ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದ್ದು, ಒಟ್ಟು ರಫ್ತಿನ ಬಹುಪಾಲು ಅಂದರೆ ಶೇ.28ರಷ್ಟನ್ನು ಆ ದೇಶ ಖರೀದಿಸುತ್ತದೆ. ಹಾಗೆಯೇ ಭಾರತದ ರಕ್ಷಣಾ ರಫ್ತಿನಲ್ಲಿ ಫಿಲಿಪ್ಪೀನ್ಸ್‌ ಶೇ. 19ರಷ್ಟು, ಅರ್ಮೇನಿಯಾ ಶೇ. 15ರಷ್ಟು ಪಾಲನ್ನು ಹೊಂದಿವೆ. ಈ ಮೂರು ರಾಷ್ಟ್ರಗಳು ಒಟ್ಟು ರಫ್ತಿನ ಶೇ. 60ರಷ್ಟು ಪಾಲನ್ನು ಹಂಚಿಕೊಳ್ಳುತ್ತವೆ. ಒಟ್ಟಿನಲ್ಲಿ, ಭಾರತದ ಶಸ್ತ್ರಾಸ್ತ್ರಗಳಿಗೆ ಭೌಗೋಳಿಕ ಮಿತಿಗಳೇ ಇಲ್ಲದಂತಾಗಿದೆ. ಆಯುಧ ಆಮುದಾರನಿಂದ ರಫ್ತುದಾರನಾಗಿ ಭಾರತ ಪರಿವರ್ತನೆ ಹೊಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಅದೇ ರೀತಿ ನೆರೆಯ ಮತ್ತು ಪ್ರಾದೇಶಿಕ ರಾಷ್ಟ್ರವಾದ ಶ್ರೀಲಂಕಾವು ಭಾರತದ ಒಟ್ಟು ರಕ್ಷಣಾ ರಫ್ತಿನಲ್ಲಿ ಶೇ. 13ರಷ್ಟು ಪಾಲನ್ನು ಹೊಂದಿದ್ದರೆ, ಹಿಂದೂ ಮಹಾಸಾಗರ ಪ್ರದೇಶದ ದ್ವೀಪ ರಾಷ್ಟ್ರಗಳಾದ ಮಾರಿಷಸ್ ಶೇ. 8.3ರಷ್ಟು, ಸೀಶೆಲ್ಸ್ ಶೇ.6ರಷ್ಟು ಪಾಲನ್ನು ಹೊಂದಿವೆ. ವಿಯೆಟ್ನಾಂ ಶೇ. 5.5ರಷ್ಟು ರಕ್ಷಣಾ ಉಪಕರಣಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು, ಆಗ್ನೇಯ ಏಷ್ಯಾದೊಂದಿಗೆ ಭಾರತದ ಬೆಳೆಯುತ್ತಿರುವ ರಕ್ಷಣಾ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮೊರಾಕೊ ಮತ್ತು ಮಾಲ್ಡೀವ್ಸ್‌ನಂತಹ ಇತರ ದೇಶಗಳು ಒಟ್ಟಾರೆಯಾಗಿ ರಫ್ತಿನಲ್ಲಿ ಶೇ.5ರಷ್ಟು ಪಾಲನ್ನು ಹೊಂದಿವೆ.

50 ಸಾವಿರ ಕೋಟಿ ರೂ. ಟಾರ್ಗೆಟ್:

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಕ್ಷಣಾ ವಲಯದಲ್ಲಿ ಇನ್ನೂ ದೊಡ್ಡ ಕನಸುಗಳನ್ನು ಕಂಡಿದೆ. ಸದ್ಯದ
ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಭಾರತೀಯ ರಕ್ಷಣಾ ಸಚಿವಾಲಯ, 2029-30ನೇ ಆರ್ಥಿಕ ವರ್ಷದ ವೇಳೆಗೆ ರಕ್ಷಣಾ ರಫ್ತನ್ನು 50,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಬೃಹತ್ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಸರ್ಕಾರ ಡಿಫೆನ್ಸ್ ಎಕ್ಸ್‌ಪೋರ್ಟ್ ಪ್ರಮೋಷನ್ ಸ್ಕೀಮ್ ಮೂಲಕ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಿರ್ಬಂಧಗಳನ್ನು ಸಡಿಲಗೊಳಿಸಿ, ರಫ್ತು ಪರವಾನಗಿ ಪ್ರಕ್ರಿಯೆಯನ್ನು ಆನ್‌ಲೈನ್ ಪೋರ್ಟಲ್ ಮೂಲಕ ಸರಳಗೊಳಿಸಲಾಗಿದೆ.


ಒಟ್ಟಿನಲ್ಲಿ, ಜಾಗತಿಕ ರಕ್ಷಣಾ ಪೂರೈಕೆ ಸರಪಳಿಯಲ್ಲಿ ಭಾರತ ಈಗ ಅನಿವಾರ್ಯ ಮತ್ತು ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದ್ದ ದೇಶ ಇಂದು, ಮೇಕ್ ಇನ್ ಇಂಡಿಯಾ ಮೂಲಕ ಇಡೀ ಜಗತ್ತಿಗೆ
ಶಸ್ತ್ರಾಸ್ತ್ರಗಳನ್ನು ಪೂರೈಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಭಾರತದ ಆಯುಧಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇರುವುದು ಸಂತಸದ ಸಂಗತಿಯಾಗಿದೆ. ನಮ್ಮ ದೇಶೀಯ ರಕ್ಷಣಾ ಉದ್ಯಮಗಳು ಕೇವಲ ದೇಶದ ಭದ್ರತೆಯನ್ನು ಬಲಪಡಿಸುವುದಲ್ಲದೆ, ಭಾರತದ ಆರ್ಥಿಕತೆಯನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದರೆ ಖಂಡಿತಾ ತಪ್ಪಾಗಲಾರದು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka